ರಾಜಕಾರಣಿಗಳಲ್ಲಿ ಸ್ವಾರ್ಥ, ಸಾಮಾಜಿಕ ಕಳಕಳಿ ದೂರ
ಕ.ಪ್ರ.ವಾರ್ತೆ ರಾಮನಗರ ಫೆ.3
ರಾಜಕಾರಣಗಳಲ್ಲಿ ಸ್ವಾರ್ಥ ಮನೆ ಮಾಡಿದ್ದು, ಸಾಮಾಜಿಕ ಕಳಕಳಿ ದೂರವಾಗಿದೆ. ಭ್ರಷ್ಟ ರಾಜಕೀಯ
ವ್ಯವಸ್ಥೆಯ ಪರಿಣಾಮ ಸಮಾಜದಲ್ಲಿ ನೆಮ್ಮದಿ ಮಾಯವಾಗಿದೆ ಎಂದು ಸಾಹಿತಿ ಡಾ.ಬೈರಮಂಗಲ ರಾಮೇಗೌಡ ವಿಷಾದಿಸಿದರು.
ಸಾಹಿತ್ಯ ಸಂಗಮ ಟ್ರಸ್ಟ್ ವತಿಯಿಂದ ತಾಲೂಕಿನ ಜಾಲಮಂಗಲ ಗ್ರಾಮದಲ್ಲಿ ಸಾಧಕರಿಗೆ ಸನ್ಮಾನ ಮತ್ತು ಮಾಯಣ್ಣ ರಚಿತ ಸುಂದರ ಸ್ವಪ್ನ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜಕೀಯ ವ್ಯವಸ್ಥೆ ಬದಲಾಗದೆ ಸ್ವಾಸ್ತ್ಯ ಸಮಾಜದ ಕನಸು ನನಸಾಗದು. ದೇಶದ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಯುವ ಸಮುದಾಯ ಮುಂದಾಗಬೇಕು. ಭ್ರಷ್ಟ ರಹಿತ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ಅವರು ಕರೆ ನೀಡಿದರು.
ಕೃಷಿಯಿಂದ ವಿಮುಖ: ಆಳುವ ವರ್ಗದಲ್ಲಿ ಸಮಷ್ಟಿ ಪ್ರಜ್ಞೆ ಇಲ್ಲದಾಗಿದೆ. ನೀರಾವರಿ ಯೋಜನೆಗಳ ಅನುಷ್ಠಾನದ ಬಗ್ಗೆ ಚಿಂತನೆ ಕಾಣುತ್ತಿಲ್ಲ. ಇದರೊಟ್ಟಿಗೆ ಪ್ರಕೃತಿ ವಿಕೋಪದಿಂದ ಮಳೆ ಅಭಾವ ತಲೆದೋರಿದೆ. ಈ ಪರಿಣಾಮ ಕೃಷಿ ಕ್ಷೇತ್ರ ಲಾಭದಾಯಕವಾಗಿಲ್ಲ ಎಂದು ರಾಮೇಗೌಡ ವಿಷಾದಿಸಿದರು. ಪ್ರಸ್ತುತ ಯುವ ಸಮುದಾಯ ಕೃಷಿಯಿಂದ ವಿಮುಖವಾಗಿದೆ. ಕೃಷಿಯನ್ನೇ ಬದುಕಾಗಿಸಿಕೊಂಡ ರೈತರು ಸತತ ಕಾಡುತ್ತಿರುವ ಮಳೆ ಅಭಾವ, ಕುಸಿದ ಅಂತರ್ಜಲ ಮಟ್ಟದಿಂದ ಕೈಸುಟ್ಟುಕೊಂಡಿದ್ದಾರೆ. ಬೇಸಾಯ ನಂಬಿದವರ ಬದುಕು ಮೂರಾಬಟ್ಟೆಯಾಗಿದೆ ಎಂದು ಅವರು ತಿಳಿಸಿದರು.
ಗ್ರಾಮೀಣ ಸಂಸ್ಕೃತಿ: ನಗರೀಕರಣ ಹಾಗೂ ಜಾಗತೀಕರಣದ ಹಾವಳಿಗೆ ಸಿಲುಕಿ ನಮ್ಮ ಗ್ರಾಮೀಣ ಸೊಗಡು, ಸಂಸ್ಕೃತಿ ಮತ್ತು ಜಾನಪದ ಕಲೆಗಳು ನಶಿಸುತ್ತಿವೆ. ಅವೆಲ್ಲವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದಾಗುವುದು ಅಗತ್ಯ ಎಂದು ರಾಮೇಗೌಡ ಕಿವಿಮಾತು ಹೇಳಿದರು.
ನಗರೀಕರಣವು ದೂರದ ಬೆಟ್ಟ ನುಣ್ಣಗೆ ಎನ್ನುವ ನಾಣ್ಣುಡಿಯಂತಿದೆ. ಹಳ್ಳಿಗರ ಬದುಕಿನಲ್ಲಿ ಇರುವ ಸುಖ, ನೆಮ್ಮದಿ ನಗರ ಮತ್ತು ಪಟ್ಟಣ ವಾಸಿಗಳಲ್ಲಿ ಕಾಣದಾಗಿದೆ. ಸಾಧಕರಿಗೆ ಬೇರೆಡೆ ಸಿಗುವ ಸನ್ಮಾನ, ಬಿರುದುಗಳಿಗಿಂತ ಹುಟ್ಟೂರಲ್ಲಿ ಸಿಗುವ ಸನ್ಮಾನವೇ ಹೆಚ್ಚು ಮಹತ್ವ ಎಂದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವ ಸ್ಥಳೀಯ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವ ಈ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು. ಮತ್ತಷ್ಟು ಸಾಧನೆ ಮಾಡುವುದಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಗ್ರಾಮದ ಪರಂಧಾಮಯ್ಯ ಉದ್ಘಾಟಿಸಿದರು. ಜಾನಪದ ವಿದ್ವಾಂಸ ಡಾ.ಚಕ್ಕೆರೆ ಶಿವಶಂಕರ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಹಾಗೂ ಪ್ರಾಧ್ಯಾಪಕ ಡಾ.ಕೂಡ್ಲೂರು ವೆಂಕಟಪ್ಪ ಅವರು ಸುಂದರ ಸ್ವಪ್ನ ಕಾದಂಬರಿ ಬಿಡುಗಡೆ ಮಾಡಿದರು. ಸಾಹಿತಿ ಮಾಯಣ್ಣ ಭಾಗವಹಿಸಿದ್ದರು. ಸಾಹಿತ್ಯ ಸಂಗಮ ಟ್ರಸ್ಟ್ ಅಧ್ಯಕ್ಷ ಎಸ್.ನಾಗಭೂಷಣ್ ಪ್ರಾಸ್ತಾವಿಕ ಭಾಷಣ ಮಾಡಿದರು. ವಕೀಲ ಎನ್.ಸುಬ್ಬಾಶಾಸ್ತ್ರಿ, ಸಾಹಿತಿ ಬಿ.ಟಿ.ಚಿಕ್ಕಪುಟ್ಟೇಗೌಡ, ಸಾಹಿತಿ ಎಸ್. ರಾಮಲಿಂಗೇಶ್ವರ ನಿರೂಪಿಸಿದರು. ಗ್ರಾಮದವರಾದ ಸಾಹಿತಿ ಲಲಿತಮ್ಮ ಚಂದ್ರಶೇಖರ್, ರಾಷ್ಟ್ರಪತಿ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿ ಪುಟ್ಟಸ್ವಾಮಯ್ಯ, ಕಲಾವಿದ ಸಿದ್ದಚಾರ್, ಕ್ರೀಡಾಪಟು ರವಿಕುಮಾರ್, ವೈದ್ಯ ಡಾ.ಜಲಿಯನ್ ಪಾಷ ಅವರನ್ನು ಅಭಿನಂದಿಸಲಾಯಿತು.