ಲೋಕಾಯುಕ್ತ ಬಲೆಗೆ ಬೆಸ್ಕಾಂ ಎಕ್ಸಿಕ್ಯುಟಿವ್ ಎಂಜಿನಿಯರ್
ಸೂಲಿಬೆಲೆ: ಹೊಸಕೋಟೆ ತಾಲೂಕಿನ ನಂದಗುಡಿ ಬೆಸ್ಕಾಂ ಸಹಾಯಕ ಎಕ್ಸಿಕ್ಯುಟಿವ್ ಎಂಜಿನಿಯರೊಬ್ಬರು ರೈತರೊಬ್ಬರಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಸೋಮವಾರ ನಡೆದಿದೆ.
ಮಹಮದ್ ಗೌಸ್ ಫೀರ್ ಲೋಕಾಯುಕ್ತ ಬಲೆಗೆ ಬಿದ್ದವರು.
ನಂದಗುಡಿ ಹೋಬಳಿಯ ಮುತ್ತಕದಹಳ್ಳಿ ಗ್ರಾಮದ ನಿವಾಸಿ ನಾರಾಯಣಸ್ವಾಮಿ ಎಂಬವರ ತೋಟಕ್ಕೆ ಹೊಸದಾಗಿ ವಿದ್ಯುತ್ ಸಂಪರ್ಕಪಡೆಯಲು ಅರ್ಜಿ ಸಲ್ಲಿಸಿದ್ದರು. ಹೊಸದಾಗಿ ವಿದ್ಯುತ್ ಕಂಬ ಹಾಕಲು 2 ಸಾವಿರ ರು. ನೀಡಬೇಕೆಂದು ಮಹಮದ್ ಗೌಸ್ ಫೀರ್ ನಾರಾಯಣಸ್ವಾಮಿ ಮೇಲೆ ಒತ್ತಡ ತಂದು ಅಲೆದಾಡಿಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ನಾರಾಯಣಸ್ವಾಮಿ ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಅಧಿಕಾರಿ ಸುಬ್ರಹ್ಮಣ್ಯ ಅವರಿಗೆ ನೀಡಿದ ದೂರಿನ್ವಯ ಸೋಮವಾರ ಬಲೆ ಬೀಸಿದ ಲೋಕಾಯುಕ್ತ ಅಧಿಕಾರಿಗಳು ನಾರಾಯಣಸ್ವಾಮಿ ಅವರಿಂದ ಲಂಚ ಪಡೆಯುತ್ತಿದ್ದಾಗ ಫೀರ್ ಅವರನ್ನು ಬಲೆಗೆ ಕೆಡವಿದರು. ಲೋಕಾಯುಕ್ತಾಧಿಕಾರಿ ಸುಬ್ರಹ್ಮಣ್ಯ ಈ ವಿಷಯ ತಿಳಿಸಿದ್ದಾರೆ.