ವಿದ್ಯಾರ್ಥಿ ದಿಸೆಯಲ್ಲೇ ಸೇವಾ ಮನೋಭಾವ ಮೂಡಿಸುವುದು ಅಗತ್ಯ
ರಾಮನಗರ: ವಿದ್ಯಾರ್ಥಿ ದಿಸೆಯಲ್ಲೇ ಸೇವಾ ಮನೋಭಾವ ಮೂಡಿಸುವುದು ಅಗತ್ಯ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಗ್ರಾ.ಪಂ. ಅಧ್ಯಕ್ಷ ಎನ್.ರಾಮಯ್ಯ ಅಭಿಪ್ರಾಯಪಟ್ಟರು.
ತಾಲೂಕಿನ ಜಾಲಮಂಗಲದಲ್ಲಿ ಬೆಂಗಳೂರಿನ ಎಸ್ಎಲ್ಎನ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ನಡೆದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಪರಿಸರ ನೈರ್ಮಲ್ಯದ ಬಗ್ಗೆ ಇನ್ನೂ ಜಾಗೃತಿ ಮೂಡಿಸುವ ಕೆಲಸ ಸಮರ್ಪಕವಾಗಿ ಆಗಿಲ್ಲ. ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಇಂತಹ ಕಾರ್ಯಕ್ರಮದ ಜತೆಗೆ ಜನ ಜಾಗೃತಿಗೂ ಮುಂದಾಗಬೇಕು ಎಂದರು.
ವಿದ್ಯೆಯೊಂದಿಗೆ ವಿನಯ, ಸಂಸ್ಕಾರ ಮತ್ತು ಸಾಮಾಜಿಕ ಕಳಕಳಿ ಅಗತ್ಯ. ಈಚಿನ ದಿನಗಳಲ್ಲಿ ಮಾನವನ ದುರಾಸೆಯಿಂದ ಪ್ರಾಕೃತಿಕ ಸಂಪತ್ತು ನಾಶವಾಗುತ್ತಿದೆ. ಅದನ್ನು ತಡೆಗಟ್ಟುವುದು ಅಗತ್ಯ ಎಂದು ಶಿಬಿರ ಉದ್ಘಾಟಿಸಿದ ಜಾಲಮಂಗಲ ನಾಗರಾಜ್ ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಆರ್.ಕೆ.ನಾಗರಾಜ್, ದತ್ತಾತ್ರೇಯ ಕುಮಾರ್, ಚಂದ್ರಯ್ಯ, ಯತಿರಾಜ್, ಪುಟ್ಟಮಾರೇಗೌಡ, ಡಾ.ಜಲಿಯನ್ ಪಾಷ, ಎಸ್.ನಾಗಭೂಷಣ್, ಸಂಜೀವರೆಡ್ಡಿ ಮತ್ತಿತರರು ಭಾಗವಹಿಸಿದ್ದರು.