ವ್ಯಕ್ತಿ ಅನುಮಾನಾಸ್ಪದ ಸಾವು: ಪ್ರಕರಣ ದಾಖಲು
ನೆಲಮಂಗಲ: ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಅರಿಶಿನಕುಂಟೆಯ ಕೆ.ಎಸ್.ಆರ್.ಟಿ.ಸಿ ಡಿಪೋ ಹಿಂಭಾಗ ಸೋಮವಾರ ಘಟನೆ ವರದಿಯಾಗಿದೆ. ಮೃತನನ್ನು ರಾಮಯ್ಯ ಅಲಿಯಾಸ್ ರಾಮ (40) ವರ್ಷ ಎಂದು ಗುರುತಿಸಲಾಗಿದೆ. ಈತ ಮೂಲತಃ ತುಮಕೂರು ಜಿಲ್ಲೆ, ಸಿರಾ ತಾಲೂಕಿನವನಾಗಿದ್ದು, ಕೂಲಿ ಕಾರ್ಮಿಕನಾಗಿ ಇಲ್ಲಿನ ಅರಿಶಿನಕುಂಟೆಯಲ್ಲಿ ವಾಸವಿದ್ದ. ಇತ್ತೀಚೆಗೆ ಮನೆಯಿಂದ ಹೊರಗಡೆ ಹೋದವನು ಮತ್ತೆ ಮನೆಗೆ ಹಿಂತಿರುಗಿರಲಿಲ್ಲ. ಇಂದು ಶವವಾಗಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿದ್ಯಾ ಸಹಾಯ ಹಸ್ತ ಸಪ್ತಾಹ
ದೊಡ್ಡಬಳ್ಳಾಪುರ: ಶಿಕ್ಷಣ ಹಕ್ಕು ಕಾಯ್ದೆ(ಆರ್ಟಿಇ) ಅಡಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ.25ರಷ್ಟು ಸೀಟುಗಳನ್ನು ಮೀಸಲಿಡಬೇಕು. ಬಡ ಮತ್ತು ಮಧ್ಯಮ ವರ್ಗದ ಅರ್ಹ ಮಕ್ಕಳಿಗೆ ಉಚಿತ ಶಿಕ್ಷಣಕ್ಕಾಗಿ 2014-15ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಈ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ದೊಡ್ಡಬಳ್ಳಾಪುರ ತಾಲೂಕು ಕಾಂಗ್ರೆಸ್ ಯುವ ಘಟಕದ ನೇತೃತ್ವದಲ್ಲಿ ವಿದ್ಯಾ ಸಹಾಯ ಹಸ್ತ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ವಿವರಗಳಿಗೆ 9008791742, 9889813566 ಸಂಪರ್ಕಿಸಬಹುದು ಎಂದು ಯುವ ಕಾಂಗ್ರೆಸ್ ಸಮಿತಿ ತಾ. ಅಧ್ಯಕ್ಷ ಸಿದ್ದಬೈರೇಗೌಡ ತಿಳಿಸಿದ್ದಾರೆ.
ಶಿಕ್ಷಕರ ಸಂಘ ಸದಸ್ಯತ್ವಕ್ಕೆ ಆಹ್ವಾನ
ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾ. ಘಟಕದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ಸಹಶಿಕ್ಷಕರು 2013-14ನೇ ಸಾಲಿನ ಸದಸ್ಯತ್ವವನ್ನು ಫೆ.8ರ ಒಳಗೆ ಪಡೆದು ನೋಂದಾಯಿಸಿಕೊಳ್ಳಬಹುದಾಗಿದೆ. ಸದಸ್ಯತ್ವ ನೋಂದಾಯಿಸಲು ಜೆ.ಬಿ.ಮಂಜುನಾಥ್, ಅಧ್ಯಕ್ಷರು(9480255898) ಅಥವಾ ಎಚ್.ವಿ.ರಾಜಣ್ಣ, ಕಾರ್ಯದರ್ಶಿ(9740178297) ಸಂಪರ್ಕಿಸಬಹುದಾಗಿದೆ. ಜುಲೈನಲ್ಲಿ ಸಂಘದ ಚುನಾವಣೆ ನಡೆಯುವುದರಿಂದ ಸದಸ್ಯತ್ವ ಕಡ್ಡಾಯವಾಗಿರುತ್ತದೆ. ಇದು ಕೇಂದ್ರ ಸಂಘದ ಆದೇಶವಾಗಿರುವುದರಿಂದ ಎಲ್ಲ ಸಹ ಶಿಕ್ಷಕರೂ ನಿಗದಿತ ಶುಲ್ಕ ನೀಡಿ ಸದಸ್ಯತ್ವ ಪಡೆದು ಸಂಘಟನೆ ಬಲಪಡಿಸಲು ಕೋರಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಬಿಎಂಟಿಸಿ ದರ ಇಳಿಕೆಗೆ ಜೆಡಿಎಸ್ ಆಗ್ರಹ
ಬೆಂಗಳೂರು: ಬಿಎಂಟಿಸಿ ದರ ಏರಿಕೆ ಮಾಡಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದ್ದು ಅದನ್ನು ತಕ್ಷಣವೇ ಇಳಿಸಬೇಕು ಎಂದು ಬೆಂಗಳೂರು ಮಹಾನಗರ ಜೆಡಿಎಸ್ ಘಟಕ ಆಗ್ರಹಿಸಿದೆ. ಜತೆಗೆ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೀಡಿರುವ ಹೇಳಿಕೆಯನ್ನೂ ಅದು ಖಂಡಿಸಿದೆ. ನಗರದ ಆನಂದರಾವ್ ವೃತ್ತ ಬಳಿಯ ಗಾಂಧಿ ಪ್ರತಿಮೆ ಬಳಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ನಗರ ಜೆಡಿಎಸ್ ಘಟಕ ಅಧ್ಯಕ್ಷ ರತನ್ ಸಿಂಗ್, ಇತ್ತೀಚೆಗೆ ಆಹಾರ ಪದಾರ್ಥಗಳು ಹಾಗೂ ದಿನನಿತ್ಯದ ಅಗತ್ಯವಸ್ತುಗಳ ಬೆಲೆ ಗಣನೀಯವಾಗಿ ಏರಿದೆ. ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ತಕ್ಷಣವೇ ದರದಲ್ಲಿ ಇಳಿಕೆ ಮಾಡಬೇಕು ಎಂದು ಅವರು ಆಗ್ರಹಿಸಿದರು.