ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶಿಕ್ಷಿತ ವರ್ಗವೇ ಭ್ರಷ್ಟಾಚಾರದಲ್ಲಿ ಭಾಗಿ

Rashmi Kasaragodu
Updated On : 4 Feb 2014, 1:46 am

ಚನ್ನಪಟ್ಟಣ: ಇತ್ತೀಚಿನ ದಿನಗಳಲ್ಲಿ ಶಿಕ್ಷಿತ ವರ್ಗವೇ ಭ್ರಷ್ಟಾಚಾರ, ಅಪರಾಧಗಳಂತಹ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದಕ್ಕೆ ನೈತಿಕ ಶಿಕ್ಷಣದ ಕೊರತೆಯೇ ಕಾರಣವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅಭಿಪ್ರಾಯಪಟ್ಟರು.
ಇಲ್ಲಿನ ಕೇಂಬ್ರಿಡ್ಜ್  ವಿದ್ಯಾಸಂಸ್ಥೆಯ ಸಂಭ್ರಮ-12 ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ  ಮಾತನಾಡಿ, ವಿದ್ಯಾರ್ಥಿಗಳನ್ನು ಅಂಕದ ಹಿಂದೆ ರೇಸಿಗೆ ಬಿಡುತ್ತಿರುವ ನಾವು ಅವರಲ್ಲಿ ಮೌಲ್ಯಗಳನ್ನು ಬಿತ್ತುತ್ತಿಲ್ಲ. ಇದರಿಂದಾಗಿ ನಮ್ಮ ಭವಿಷ್ಯದ ಪೀಳಿಗೆ ಮಾನವೀಯತೆಯನ್ನು ಕಳೆದು ಕೊಳ್ಳುತ್ತಿದೆ ಎಂದು ವಿಷಾದಿಸಿದರು.
ಮಾನವೀಯತೆ ಜಾತಿ ಧರ್ಮಗಳ ಸಂಕೊಲೆಯನ್ನು ಮೀರಿದ್ದು, ನಾವು ಇಂದು ವಿದ್ಯಾರ್ಥಿಗಳನ್ನು ಡಾಕ್ಟರ್, ಎಂಜಿನಿಯರ್ ಮೊದಲಾದ ದೊಡ್ಡ ವ್ಯಕ್ತಿಗಳನ್ನಾಗಿಸುತ್ತಿದ್ದೇವೆ. ಹೊರತು ಅವರನ್ನು ಮಾನವರಾಗಿಸುತ್ತಿಲ್ಲ.
ಇದರಿಂದಾಗಿ ಸಾಮಾಜಿಕ ಹೊಣೆಗಾರಿಕೆಗಳೆಂದು ಹೇಳಿಕೊಳ್ಳುತ್ತಿರುವ ಯುವ ಪೀಳಿಗೆ ಸಮಾಜದ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ ಎಂದರು.
ಉತ್ತಮ ಅಂಕ ಗಳಿಸುವುದಷ್ಟೇ ಸಾಧನೆಯಲ್ಲ, ಉತ್ತಮವಾಗಿ ಬದುಕುವುದು ಮಹತ್ತರವಾದ ಸಾಧನೆ. ನಮ್ಮ ಮಕ್ಕಳನ್ನು ಅಂಕಗಳ ಹಿಂದೆ ರೇಸಿಗೆ ಬಿಡುವ ಪರಿಪಾಠವನ್ನು ಕೈ ಬಿಟ್ಟು ಅವರಲ್ಲಿ ಸರ್ವಾಂಗೀಣ ಅಭಿವೃದ್ಧಿಯ ಕಾಳಜಿ ಬಿತ್ತಬೇಕು. ಅದು ಆದಾಗ ಮಾತ್ರ ಮಕ್ಕಳನ್ನು ನಾವು ದೇಶದ ಸತ್ಪ್ರಜೆಗಳನ್ನಾಗಿಸಬಹುದು ಎಂದರು.
ಸಂಸ್ಕಾರ ಕಲಿಸಿ: ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವ ಒಕ್ಕಲಿಗರ ಸಂಸ್ಥಾನದ ಕುಮಾರ ಚಂದ್ರಶೇಖರ ನಾಥ ಸ್ವಾಮೀಜಿ, ಶಾಲೆ ದೇವಾಲಯವಿದ್ದಂತೆ, ಪ್ರತಿಯೊಬ್ಬ ಮಗುವನ್ನು ಯಾವುದೇ ಭೇದ ಭಾವ ತೋರದೆ ಪರಿಪೂರ್ಣ ವ್ಯಕ್ತಿಯಾಗಿ ರೂಪಿಸುವ ಶಾಲೆಗೆ ಪೋಷಕರು, ಮಕ್ಕಳು, ಶಿಕ್ಷಕರು ಮತ್ತು ಆಡಳಿತ ಮಂಡಲಿ ನಾಲ್ಕು ಸ್ಥಂಭಗಳಿದ್ದಂತೆ ಎಲ್ಲರೂ ತಮ್ಮ ಜವಾಬ್ದಾರಿಯನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದಲ್ಲಿ  ಶಾಲೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಬಹುದು ಎಂದರು.
ಪೋಷಕರು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು, ಹಿರಿಯರಲ್ಲಿ ಗೌರವ, ಗುರುಗಳಲ್ಲಿ ಭಕ್ತಿ, ತಂದೆತಾಯಿಯರಿಗೆ ವಿಧೇಯತೆ,  ದೈನಂದಿನ ಕೆಲಸದಲ್ಲಿ ಶಿಸ್ತು ಇವು ಮಕ್ಕಳಿಗೆ ಅತ್ಯಗತ್ಯವಾಗಿ ಇರಲೇ ಬೇಕಾದ ಗುಣಗಳು ಇವರುಗಳನ್ನು ತಪ್ಪಿ ನಡೆದಾಗ ಮಕ್ಕಳು ಜೀವನದಲ್ಲಿ ಏನನ್ನೂ ಸಾಧಿಸಲಾಗದು ಪೋಷಕರು ಮಕ್ಕಳನ್ನು ಹತೋಟಿಯಲ್ಲಿಟ್ಟು ಬೆಳೆಸ ಬೇಕೆಂದರು.
ನಿಮ್ಮ ನಂಬಿಕೆ ಹುಸಿ ಗೊಳಿಸುವುದಿಲ್ಲ: ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್. ಲಿಂಗೇಶ್ಕುಮಾರ್, ಪೋಷಕರು ನಮ್ಮ ಸಂಸ್ಥೆಯ ಮೇಲೆ ಅಪಾರ ನಂಬಿಕೆ ಇರಿಸಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದು ಯಾವುದೇ ಕಾರಣಕ್ಕೂ ನಿಮ್ಮನಂಬಿಕೆಗೆ ಚ್ಯುತಿ ಬಾರದಂತೆ ನಮ್ಮ ಶಾಲೆ ಮತ್ತು ಶಾಲೆಯ ಸಿಬ್ಬಂದಿ ಕೆಲಸ ನಿರ್ವಹಿಸುತ್ತೇವೆ ಎಂದು ಭರವಸೆ ನೀಡಿದರು.
 ಹಿರಿಯ ಸಿವಿಲ್ ನ್ಯಾಯಾಧೀಶ ಕಿರಣ್ ಕಿಣಿ, ಜಿ.ಪಂ ಅಧ್ಯಕ್ಷ ರಾಜಣ್ಣ, ಜಿ.ಪಂ ಸ್ಥಾಯಿಸಮಿತಿ ಅಧ್ಯಕ್ಷ ರಘುಕುಮಾರ್, ಬಮೂಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಗುರುಲಿಂಗಯ್ಯ, ತಾಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ಕ್ಷೇತ್ರಶಿಕ್ಷಣಾಧಿಕಾರಿ ಕೆ.ಶಿವಪ್ಪ, ಬಮೂಲ್ ಸಹಾಯಕ ನಿರ್ದೇಶಕ ಡಾ.ಶ್ರೀಧರ್, ಸಂಸ್ಥೆಯ ಟ್ರಸ್ಟಿಗಳಾದ ಚಿತ್ರಾಲಿಂಗೇಶ್ ಕುಮಾರ್, ಎಂ.ಎನ್. ಸತ್ಯನಾರಾಯಣ, ಶಿವಮಲ್ಲಿಕಾರ್ಜುನೇಗೌಡ, ಸಂಸ್ಥೆಯ ಪ್ರಾಂಶುಪಾಲರಾದ ನಿಂಗೇಗೌಡ, ರೇಣುಕಾದೇವಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement