ಹಳೆ ವೈಷಮ್ಯ: ಸಹೋದರರಿಂದವ್ಯಕ್ತಿ ಮೇಲೆ ಹಲ್ಲೆ, ತೀವ್ರ ಗಾಯ
ರಾಮನಗರ: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಸಹೋದರರಿಬ್ಬರು ಮಾರಕಾಯುಧಗಳಿಂದ ಹಲ್ಲೆ ನಡೆಸಿರುವ ಘಟನೆ ಕನಕಪುರ ತಾಲೂಕಿನ ಹಾರೋಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಳೆಚನ್ನವಲಸೆ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.
ಗ್ರಾಮದ ರಮೇಶ (27) ತೀವ್ರ ಗಾಯಗೊಂಡು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಸೆಣೆಸುತ್ತಿದ್ದಾನೆ. ಆತನ ಮೇಲೆ ಅದೇ ಗ್ರಾಮದ ಆನಂದ ಮತ್ತು ಸಿದ್ದರಾಜು ಅಲಿಯಾಸ್ ಗುಂಡ ಚಾಕು, ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಗಾಯಾಳು ಮತ್ತು ಆರೋಪಿಗಳು ಪರಸ್ಪರ ಸ್ನೇಹಿತರಾಗಿದ್ದು, ಹಣಕಾಸಿನ ವಿಷಯವಾಗಿ ಮನಸ್ತಾಪ ಮೂಡಿತ್ತು. ಅದಾದ ಬಳಿಕ ರಮೇಶ ಬೆಂಗಳೂರು ಸೇರಿ, ಅಲ್ಲಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದನು. ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗ್ರಾಮಕ್ಕೆ ಆಗಮಿಸಿದ್ದ ರಮೇಶನ ಮೇಲೆ ಗ್ರಾಮದ ಹೊರ ವಲಯದಲ್ಲೇ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ಹಾರೋಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.