ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಂತರಂಗ- ಬಹಿರಂಗ ಶುದ್ಧಿಯಿಂದ ಜನ್ಮ ಸಾರ್ಥಕ

Vishwanath S
Updated On : 5 Feb 2014, 12:19 pm

ಕ.ಪ್ರ.ವಾರ್ತೆ ,  ಸೂಲಿಬೆಲೆ ,  ಫೆ.4
ಅಂತರಂಗ ಹಾಗೂ ಬಹಿರಂಗದಿಂದ ಮನಸ್ಸು ಶುದ್ಧಿಯಾದಾಗ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ ಎಂದು ಸಿದ್ದಗಂಗಾ ಮಠಾಧೀಶ, ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಕಿವಿಮಾತು ಹೇಳಿದರು.
ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ದೊಡ್ಡ ನಲ್ಲೂರಹಳ್ಳಿ ಗ್ರಾಮದಲ್ಲಿ ನಡೆದ ಬೃಹತ್ ಧರ್ಮ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕಳಬೇಡ, ಕೊಲಬೇಡ ಅನ್ಯರಿಗೆ ಅಸಹ್ಯ ಪಡಬೇಡ ಇದೇ ಅಂತರಂಗ ಶುದ್ಧಿ. ಜೀವನದಲ್ಲಿ ಇವೆರಡೂ ಸೂತ್ರಗಳನ್ನು ಆಳವಡಿಸಿಕೊಂಡು ಗೌರವದಿಂದ ಬಾಳಬೇಕು. ಪ್ರತಿಯೊಬ್ಬರು ಪರಮಾತ್ಮನೆಡೆಗೆ ಸಾಗಲು ಸನ್ಮಾರ್ಗದತ್ತ ಒಲವು ತೋರಬೇಕು. ಧಾರ್ಮಿಕ ಕಾರ್ಯಗಳು ಮನುಷ್ಯನ ಮಾನಸಿಕ ನೆಮ್ಮದಿಗೆ ಸಹಕಾರಿ ಎಂದು ಸ್ವಾಮೀಜಿ ಪ್ರತಿಪಾದಿಸಿದರು.
ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ,ನಡೆ-ನುಡಿಗಳಲ್ಲಿ ಎಲ್ಲಿ ಮನುಷ್ಯನ ಬದುಕು ಸಮನಾಗಿರುತ್ತದೋ ಅಲ್ಲಿ ಮನುಷ್ಯ ಶ್ರೇಷ್ಠನಾಗುತ್ತಾನೆ. ಈ ನಿಟ್ಟಿನಲ್ಲಿ ಪ್ರಯೊಬ್ಬರು ಸತ್ಯ- ಪ್ರಾಮಾಣಿಕತೆಯನ್ನು ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದರು. ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ ಮಾತನಾಡಿ, ದೇವರ ಅನುಗ್ರವಿದ್ದರೆ ಮಾತ್ರ ಜೀವನದಲ್ಲಿ ಯಾವುದೇ ಕಾರ್ಯ ಮಾಡಲು ಸಾಧ್ಯ. ಮನುಷ್ಯನಿಗೆ ತಾನೂ ಎಂಬ ಅಹಂಕಾರ ಇರಬಾರದು. ಸಮಾಜ ಸೇವೆಯಲ್ಲಿ ದೇವರನ್ನು ಕಾಣಬೇಕು ಎಂದು ಅಭಿಪ್ರಾಯಪಟ್ಟರು. ಧಾರ್ಮಿಕ ಸಮಾವೇಶದ ಅಂಗವಾಗಿ ವೀರಗಾಸೆ ನೃತ್ಯ, ನಂದಿ ಧ್ವಜ ಕುಣಿತ, ಕರಡಿ ವಾದ್ಯ ಹಾಗೂ ಹೊಸಕೋಟೆ ಅರ್ಚನ ಮತ್ತು ತಂಡದಿಂದ ನಡೆದ ಭರತನಾಟ್ಯ ಕಾರ್ಯಕ್ರಮ  ಭಕ್ತರ ಗಮನ ಸೆಳೆದವು.
ಅರೇಮಾದನಹಳ್ಳಿ ಮಠದ ಶಿವ ಸುಜ್ಞಾನತೀರ್ಥ ಸ್ವಾಮೀಜಿ, ಕುಂಭಕೋಣಂ ಮಠದ ಸಾರಂಗ ದೇಶಿಕೇಂದ್ರ ಸ್ವಾಮೀಜಿ, ಬೇಲಿ ಮಠ ಮಹಾ ಸಂಸ್ಥಾನದ  ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ, ಕೊಳದ ಮಠದ ಶಾಂತವೀರ ಸ್ವಾಮೀಜಿ, ಮರಳೇಗವಿ  ಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ಮಾಲೂರು ಶಾಸಕ ಮಂಜುನಾಥಗೌಡ, ಮುಳಬಾಗಿಲು ಶಾಸಕ  ಕೊತ್ತೂರು ಮಂಜುನಾಥ, ತಾಪಂ ಮಾಜಿ ಅಧ್ಯಕ್ಷ ರಾಜಶೇಖರ್, ಐಎಎಸ್ ಅಧಿಕಾರಿ ಸಿ. ಸೋಮಶೇಖರ್, ಹಿರಿಯ ಮುಖಂಡ ಸೊಣ್ಣಪ್ಪ, ಹಾಲು ಒಕ್ಕೂಟದ ಅಧ್ಯಕ್ಷ ಸಿ.ಮುಂಜುನಾಥ, ಸಿ.ಮುನಿಯಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement