ನಿಲ್ಲದ ಅರಣ್ಯ ಇಲಾಖೆ- ಗ್ರಾಮಸ್ಥರ ಜಟಾಪಟಿ
ಕ.ಪ್ರ. ವಾರ್ತೆ , ಆನೇಕಲ್ಲು , ಫೆ.4
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಗೊಟ್ಟಿಗೆರೆ ವೀವರ್ಸ್ ಕಾಲನಿ ರಸ್ತೆಗೆ ಬೇಲಿ ಸುತ್ತುವ ಅರಣ್ಯ ಇಲಾಖೆಯ ಕೆಲಸಕ್ಕೆ ಜಿಲ್ಲಾ ಪಂಚಾಯ್ತಿ ಸದಸ್ಯ ಜಯರಾಂ ನೇತೃತ್ವದಲ್ಲಿ ತಡೆ ಒಡ್ಡಿ ಪ್ರತಿಭಟನೆ ನಡೆಸಲಾಯಿತು.
ವೀವರ್ಸ್ ಕಾಲನಿ ಮೂಲಕ ಅಕ್ಕಿ -ಪಿಕ್ಕಿ ಜನಾಂಗ, ಎಸ್ಸಿ- ಎಸ್ಟಿ ಸಮುದಾಯದ ಬಂಧುಗಳೇ ಹೆಚ್ಚಾಗಿ ವಾಸಿಸುವ ಹಾಡಿ ಹಟ್ಟಿದೊಡ್ಡಿ ಸೇರಿದಂತೆ 27 ಗ್ರಾಮಗಳಿಗೆ ಈ ರಸ್ತೆಯೇ ಪ್ರಮುಖ ಸಂಚಾರಿ ಮಾರ್ಗವಾಗಿದೆ. ದಿನ ನಿತ್ಯ 87 ಬಿಎಂಟಿಸಿ ಬಸ್‌ಗಳು ಇಲ್ಲಿ ಸಂಚರಿಸುತ್ತವೆ. ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ರೈತರು, ಆಸ್ಪತ್ರೆ ಹಾಗೂ ಕಚೇರಿಗೆ ತೆರಳುವ ಗ್ರಾಮಸ್ಥರಿಗೆ ಇದು ಪ್ರಮುಖ ರಸ್ತೆಯಾಗಿದೆ. 50-60 ವರ್ಷಗಳಿಂದ ಈ ರಸ್ತೆಯನ್ನು ಬಳಸುತ್ತಿದ್ದು ಉದ್ದೇಶಪೂರ್ವಕವಾಗಿ ಈ ರಸ್ತೆಗೆ ಬೇಲಿ ಸುತ್ತಲು ಇಲಾಖೆ ಮುಂದಾಗಿದೆ. ಕಾನೂನಿನ ಜಾರಿ ಎಂದರೇ ಸಾರ್ವಜನಿಕರಿಗೆ ತೊಂದರೆ ನೀಡುವುದೇ ಎಂದು ಪ್ರಶ್ನಿಸಿದ ಜಯರಾಂ ಬಿಜೆಪಿಯ ಮುಖಂಡ ಎಂಬ ಕಾರಣಕ್ಕೆ ಇಲ್ಲ ಸಲ್ಲದ ಸೆಕ್ಷನ್ ಅಡಿ ದೂರು ದಾಖಲಿಸಲಾಗಿದೆ. ಜನಪ್ರತಿನಿಧಿಯಾಗಿ ಜನರ ಕಲ್ಯಾಣಕ್ಕಾಗಿ ಪ್ರಶ್ನಿಸುವ ಹಕ್ಕು ಹಾಗೂ ಜವಾಬ್ದಾರಿಯನ್ನು ತಪ್ಪಾಗಿ ನಮೂದಿಸಲಾಗಿದೆ ಎಂದರು.
ಪ್ರತಿ ದೂರು: ಅರಣ್ಯ ಸಿಬ್ಬಂದಿ ಮತ್ತು ಕೆಲ ಅಧಿಕಾರಿಗಳು ತಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ದಾವಾ ಮಾಡಿರುವುದನ್ನು ಕಾನೂನು ಪ್ರಕಾರ ಪ್ರಶ್ನಿಸಲಾಗುವುದು. ಅರಣ್ಯ ಇಲಾಖೆಯ ಮೇಲೆ ಪ್ರತಿ ದೂರು ನೀಡಿ ಪ್ರಕರಣ ದಾಖಲ ಮಾಡಲಾಗಿದೆ ಎಂದು ಜಿಪಂ ಸದಸ್ಯ ಜಯರಾಂ ತಿಳಿಸಿದರು. ಶಾಸಕ ಎಂ. ಕೃಷ್ಣಪ್ಪ, ತಾಪಂ, ಗ್ರಾಪಂ ಸದಸ್ಯರು ಪಕ್ಷ ಬೇಧ ಮರೆತು ಬೇಲಿ ತಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.