ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ: 4 ತಾ.ಗಳ ಮುಖಂಡರ ಸಭೆ
ಕ.ಪ್ರ. ವಾರ್ತೆ , ದೊಡ್ಡಬಳ್ಳಾಪುರ , ಫೆ.5
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಜಿಲ್ಲಾ ಕೇಂದ್ರವನ್ನು ನಿಯೋಜಿಸುವ ನಿಟ್ಟಿನಲ್ಲಿ ಜಿಲ್ಲೆಯ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿಯಲ್ಲಿ ವ್ಯಾಪಕ ಹೋರಾಟಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾ ವ್ಯಾಪ್ತಿಯ 4 ತಾಲೂಕುಗಳ ಶಾಸಕರು ಮತ್ತು ಮುಖಂಡರ ಸಭೆಯನ್ನು ಜಿಲ್ಲಾ ಉಸ್ತುವಾರಿ ಮಂತ್ರಿ ಕೃಷ್ಣಬೈರೇಗೌಡ ವಿಕಾಸಸೌಧದಲ್ಲಿ ನಡೆಸಿದರು.
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಹೋರಾಟ ಸಮಿತಿ, ದೇವನಹಳ್ಳಿಯ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಸೇರಿದಂತೆ ವಿವಿಧ ತಾಲೂಕುಗಳ ರಾಜಕೀಯ ಪಕ್ಷಗಳ ಮುಖಂಡರು, ಸಂಘಟನೆಗಳ ಗಣ್ಯರು ಹಾಜರಿದ್ದರು. ಸಭೆಯಲ್ಲಿ ಮಾತನಾಡಿದ ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ,
ಬೆಂಗಳೂರು ನಗರದಲ್ಲಿ ಕೇಂದ್ರಿತವಾಗಿರುವ ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಸಮಗ್ರ ಜಿಲ್ಲಾಡಳಿತವನ್ನು ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರಿಸಬೇಕು. ಕಳೆದ 6 ವರ್ಷಗಳಿಂದ ನಿರಂತರವಾಗಿ ಈ ಕುರಿತು ಹೋರಾಟಗಳು ನಡೆಯುತ್ತಿವೆ. ಜಿಲ್ಲೆಯ ಏಕೈಕ ಉಪವಿಭಾಗ, ನಗರಸಭೆ, ಡಿವೈಎಸ್ಪಿ ಕಚೇರಿ, ಜಿಲ್ಲಾ ನ್ಯಾಯಾಲಯ, ಶೈಕ್ಷಣಿಕ ಜಿಲ್ಲಾ ಸ್ಥಾನಮಾನಗಳನ್ನು ದೊಡ್ಡಬಳ್ಳಾಪುರ ಹೊಂದಿದೆ. ಜನಸಂಖ್ಯೆ, ವಿಸ್ತೀರ್ಣ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ, ಉದ್ಯೋಗಾವಕಾಶಗಳು, ಕೈಗಾರಿಕಾ ಪ್ರದೇಶ, ಬ್ರಾಡ್ಗೇಜ್ ರೈಲುಮಾರ್ಗ ಸೇರಿದಂತೆ ಜಿಲ್ಲೆಯ 4 ತಾಲೂಕುಗಳಿಗೂ ಕೇಂದ್ರ ಸ್ಥಾನ ಮತ್ತು ಉತ್ತಮ ಸಂಪರ್ಕ ಹೊಂದಿದೆ. ಈ ಹಿಂದೆ ರಾಜ್ಯದಲ್ಲಿ ರಚನೆಯಾಗಿರುವ ಜಿಲ್ಲೆಗಳೆಲ್ಲವೂ ಉಪವಿಭಾಗ ಕೇಂದ್ರಗಳಲ್ಲೇ ರಚನೆಯಾಗಿದ್ದು, ನ್ಯಾಯಯುತವಾಗಿ ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಪ್ರಧಾನ ಸಂಚಾಲಕ ರಾಜೇಂದ್ರಕುಮಾರ್, ತೂಬಗೆರೆಷರೀಫ್, ಮುಖಂಡರಾದ ತ.ನ.ಪ್ರಭುದೇವ್, ಹ.ರಾಮಕೃಷ್ಣ, ಚಂದ್ರತೇಜಸ್ವಿ, ಸಂಜೀವನಾಯಕ್ ಮತ್ತಿತರು ಮಾತನಾಡಿ ದೊಡ್ಡಬಳ್ಳಾಪುರ ಜನರ ನ್ಯಾಯಬದ್ಧ ಬೇಡಿಕೆಯನ್ನು ಸರ್ಕಾರ ಪರಿಗಣಿಸಬೇಕು. ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಭಜನೆಯಾಗಿ ರಾಮನಗರ ಜಿಲ್ಲಾ ರಚನೆಯಾದಾಗಲೇ ದೊಡ್ಡಬಳ್ಳಾಪುರ ಜಿಲ್ಲೆಯಾಗಬೇಕಿತ್ತು. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ವಂಚನೆಯಾಗಿದೆ. 4 ತಾಲೂಕಿಗಳ ಅರ್ಹತೆಯ ಆಧಾರದಲ್ಲಿ ಸಮಗ್ರ ಅಂಕಿ-ಅಂಶಗಳನ್ನು ಪರಿಶೀಲಿಸಿ ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.
ದೇವನಹಳ್ಳಿ ಸೂಕ್ತ: ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ ಪಾರಂಪರಿಕವಾಗಿ ಉತ್ತಮ ಹಿನ್ನೆಲೆಯನ್ನು ಹೊಂದಿರುವ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ದೇವನಹಳ್ಳಿ ಜಿಲ್ಲಾ ಕೇಂದ್ರವಾಗಲು ಸೂಕ್ತ ಎಂದು ವಾದ ಮಂಡಿಸಿದರು. ಅದೇ ರೀತಿ ನೆಲಮಂಗಲ ಶಾಸಕ ಡಾ.ಶ್ರೀನಿವಾಸಮೂರ್ತಿ ಮಾತನಾಡಿ ಬೆಂಗಳೂರು ನಗರದಲ್ಲೇ ಜಿಲ್ಲಾ ಕೇಂದ್ರ ಇರುವುದು ಸೂಕ್ತ. ದೇವನಹಳ್ಳಿಗೆ ವರ್ಗಾಯಿಸಿದರೆ ನೆಲಮಂಗಲ ಜನತೆಗೆ ಕಷ್ಟವಾಗುತ್ತದೆ. ಹಾಗಾದಾಗ ನೆಲಮಂಗಲವನ್ನೂ ಪರಿಗಣಿಸಿ ಎಂದರು. ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜ್, ಬೆಂಗಳೂರು ನಗರವೇ ಹೊಸಕೋಟೆಗೆ ಸೂಕ್ತ ಜಿಲ್ಲಾ ಕೇಂದ್ರ ಎಂದು ಪ್ರತಿಪಾದಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎನ್. ಹನುಮಂತೇಗೌಡ, ಜಿಲ್ಲಾಧಿಕಾರಿ ವಿ.ಶಂಕರ್, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಮಂಜುನಾಥ್, 4 ತಾಲೂಕುಗಳ ತಹಸೀಲ್ದಾರರು, ಹೋರಾಟಗಾರರು ಹಾಜರಿದ್ದರು.