ಪ್ರತಿಭಟನಾ ಸ್ಥಳಕ್ಕೆ ಬಾರದ ಡಿಸಿ: ಗ್ರಾಮಸ್ಥರ ಆಕ್ರೋಶ
ಕ.ಪ್ರ.ವಾರ್ತೆ , ಚನ್ನಪಟ್ಟಣ , ಫೆ.5
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಬರಲಿಲ್ಲ ಎಂದು ಕುಪಿತಗೊಂಡ ಎಸ್.ಎಂ.ಹಳ್ಳಿ ಗ್ರಾಮಸ್ಥರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ ಕಚೇರಿಯ ಮುಂಭಾಗದಲ್ಲಿದ್ದ ಪಾಟುಗಳನ್ನು ಹೊಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ವಿರೂಪಾಕ್ಷಿ ಪುರ ನಾಡಕಚೇರಿಯಲ್ಲಿ ನಡೆಯುತ್ತಿರುವ ಪಹಣಿ ತಿದ್ದುಪಡಿ ಆಂದೋಲನದಲ್ಲಿ ಪಾಲ್ಗೊಳ್ಳಲು ಜಿಲ್ಲಾಧಿಕಾರಿ ಆಗಮಿಸಲಿರುವ ಸುದ್ದಿ ತಿಳಿದ ಎಸ್.ಎಂ.ಹಳ್ಳಿ ಗ್ರಾಮಸ್ಥರು ರಸ್ತೆಯಲ್ಲಿ ಕುಳಿತಿದ್ದರು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಜಿಲ್ಲಾಧಿಕಾರಿಗಳನ್ನು ಕರೆದುಕೊಂಡು ಬರುವುದಾಗಿ ಭರವಸೆ ನೀಡಿದ್ದರು.
ಆದರೆ ಕಾರ್ಯಕ್ರಮ ಮುಗಿದ ಬಳಿಕ ಮಾರ್ಗ ಬದಲಿಸಿ ಜಿಲ್ಲಾಧಿಕಾರಿ ತೆರಳಿದ್ದರಿಂದ ಕುಪಿತಗೊಂಡ ಗ್ರಾಮಸ್ಥರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪಾಟುಗಳನ್ನು ಹೊಡೆಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆಯಿಂದ ತಾಲೂಕು ಕಚೇರಿಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣ ಗೊಂಡಿತು. ಪ್ರತಿಭಟನಾಕಾರರನ್ನು ಸಂತೈಸಲು ಪುರಠಾಣೆ ಪಿಎಸ್ಐ ವಿಜಯಕುಮಾರ್ ಮುಂದಾದರಾದರೂ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿಗೆ ಮಾತು ಬೆಳೆದು ಮತ್ತಷ್ಟು ಬಿಗುವಿನ ವಾತಾವರಣ ನಿರ್ಮಾಣ ಗೊಂಡಿತು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಶಿವರುದ್ರಯ್ಯ ಗ್ರಾಮಸ್ಥರ ಅಹವಾಲು ಆಲಿಸಿ, ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಗುರುವಾರ ಬೆಳಿಗ್ಗೆ ಶಾಸಕರ ಅಧ್ಯಕ್ಷತೆಯಲ್ಲಿ ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದಿರುವುದಾಗಿ ತಿಳಿಸಿ ಪ್ರತಿಭಟನಾಕಾರರನ್ನು ಸಂತೈಸಿದರು.