ಯುವಕರೇ ಕಲೆ ಪೋಷಿಸಿ
ಚನ್ನಪಟ್ಟಣ: ಕಲೆ ಮತ್ತು ಸಂಸ್ಕೃತಿ ಮನುಷ್ಯನನ್ನು ಸನ್ಮಾರ್ಗದತ್ತ ಕೊಂಡೊಯ್ಯಲು ಮಾರ್ಗದರ್ಶನ ಮಾಡುತ್ತವೆ. ಅದಕ್ಕಾಗಿ ನಮ್ಮ ಸಂಸ್ಕೃತಿ, ಪರಂಪರೆ, ಕಲೆಗಳನ್ನು ಪೋಷಿಸುವ ಹೊಣೆ ಯುವಕರ ಮೇಲಿದೆ ಎಂದು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಲಿಂಗೇಶ್ ಕುಮಾರ್ ತಿಳಿಸಿದರು.
ಇಲ್ಲಿನ ವಿದ್ಯಾನಿಕೇತನ ಮಹಿಳಾ ಪ್ರಥಮದರ್ಜೆ ಕಾಲೇಜು, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಯುವಸೌರಭ ಮತ್ತು ಚಿಗುರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಲೆ ಎಂಬುದು ಇರದಿದ್ದರೆ ಮನುಷ್ಯ ಅತ್ಯಂತ ಕ್ರೂರಿಯಾಗಿ ಇರುತ್ತಿದ್ದ. ಭಾರತದಲ್ಲಿ ಆಚರಿಸುವಷ್ಟು
ಉತ್ಸವಗಳು ವಿಶ್ವದ ಯಾವುದೇ ದೇಶಗಳಲ್ಲಿ ಕಂಡು ಬರುವುದಿಲ್ಲ. ಆದರೆ ಭಾರತೀಯರಾದ ನಾವು ಇಂದು ವಿದೇಶಿ ಸಂಸ್ಕೃತಿ ಅನುಕರಣೆ ಮಾಡುವತ್ತ ಹೆಚ್ಚು ಆಕರ್ಷಿತರಾಗುತ್ತಿರುವುದು ಖೇದಕರ ಸಂಗತಿ ಎಂದು ವಿಷಾದಿಸಿದರು.
ಭಾರತೀಯರ ಕಲೆ ಹಾಗೂ ಸಂಸ್ಕೃತಿ ಉಳಿಸಿಕೊಳ್ಳುವ ಹೊಣೆಗಾರಿಕೆ ಯುವಕರ ಮೇಲಿದೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದಲ್ಲಾ ಒಂದು ರೀತಿಯ ಕಲೆ ಇದ್ದೇ ಇರುತ್ತದೆ. ಅಂತಹ ಸುಪ್ತ ಪ್ರತಿಭೆಯನ್ನು ಪ್ರದರ್ಶಿಸಲು ಯುವಕರು ಮುನ್ನುಗ್ಗಬೇಕು ಹಾಗೂ ಸಮಾಜ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ ಬೆನ್ನು ತಟ್ಟಬೇಕು ಎಂದು ವಿನಂತಿಸಿದರು.
ಮನುಷ್ಯನಿಗೆ ಬದುಕಲು ಕೇವಲ ಎಂಜಿನಿಯರ್ ಅಥವಾ ಡಾಕ್ಟರ್ ವಿದ್ಯೆ ಇದ್ದರೆ ಸಾಲದು. ಸಾಹಿತ್ಯ, ಸಂಗೀತ, ಚಿತ್ರಕಲೆಗಳಂತಹ ಮಹತ್ವದ ಕಲೆಗಳನ್ನು ಕಲಿತವರು ದೇಶದಲ್ಲಿ ಮಾದರಿ ವ್ಯಕ್ತಿಗಳಾಗಿದ್ದಾರೆ.
ಕಲೆಯನ್ನು ಕೀಳಾಗಿ ಕಾಣುವ ಮನಸ್ಥಿತಿ ನಮ್ಮಿಂದ ದೂರವಾಗಬೇಕೆಂದು ಅವರು ಸಲಹೆ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿದ ಹಾಪ್‌ಕಾಮ್ಸ್ ಮಾಜಿ ನಿರ್ದೇಶಕ ಎಸ್.ಸಿ. ಶೇಖರ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ಎಲೆಮರೆ ಕಾಯಿಯಂತಿರುವ ಪ್ರತಿಭೆಗಳನ್ನು ಹೊರತೆಗೆಯಲು ಸಹಕಾರಿಯಾಗುತ್ತದೆ.
ನಮ್ಮ ನೆಲ ಕೆಲ ಮತ್ತು ಸಂಸ್ಕೃತಿಯಲ್ಲಿ ತನ್ನದೇ ಆದ ಇತಿಹಾಸ ಹೊಂದಿದ್ದು ಈ ವೈಭವವನ್ನು ಮುಂದುವರೆಸುವ ಪ್ರಯತ್ನಕ್ಕೆ ನಾವೆಲ್ಲ ಶ್ರಮಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು ಪಿ.ಜೆ. ಗೋವಿಂದ ರಾಜು, ಹಿರಿಯ ಫಾರ್ಮಾಸಿಸ್ಟ್ ವೇದಮೂರ್ತಿ, ಪ್ರಾಂಶುಪಾಲ ಟಿ.ಎಂ. ರಾಜು, ಪತ್ರಕರ್ತ ಸು.ನಾ.ನಂದಕುಮಾರ್, ಯುವಕಾಂಗ್ರೆಸ್ ಅಧ್ಯಕ್ಷ ಪಿ.ಹಳ್ಳಿ ದೊಡ್ಡಿ ಮಲ್ಲೇಶ್, ಗಾಯಕ ಬ್ಯಾಡರಹಳ್ಳಿ ಶಿವಕುಮಾರ್, ಉಪನ್ಯಾಸಕರಾದ ಬಿ.ಸಿ.ಸುರೇಶ್, ಶಿವಮ್ಮ.ಎಂ.ಕೆ., ಚೇತನ್‌ಕುಮಾರ್, ವೆಂಕಟೇಶ್, ಅಂಬುಜ ಮುಂತಾದವರು ಉಪಸ್ಥಿತರಿದ್ದರು.
ಸಿದ್ದರಾಮು ಕೂಡ್ಲೂರು, ಅಪ್ಪಗೆರೆ ಸತೀಶ್, ಚಂದ್ರು ಸಾಖ್ಯವಂಶಿ, ಹೊನ್ನಿಗಾನಹಳ್ಳಿ ಸಿದ್ದರಾಜು ತಂಡದಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು. ಜ್ಯೋತಿ, ರಾಗಿಣಿ, ಸುಕೃತ, ಮಂಗಳಮ್ಮ ತಂಡದಿಂದ ಜಾನಪದ ಗೀತಗಾಯನ ಮತ್ತು ನೃತ್ಯ ಪ್ರದರ್ಶನ ನಡೆಯಿತು.