ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹಲಗೂರು ರಸ್ತೆಯಲ್ಲಿ ಖಾಲಿ ಕೊಡಗಳನ್ನಿರಿಸಿ ಆಕ್ರೋಶ

Vishwanath S
Updated On : 6 Feb 2014, 1:00 am

ಕ.ಪ್ರ.ವಾರ್ತೆ ಚನ್ನಪಟ್ಟಣ ಫೆ.5
ಕಳೆದ ಮೂರು ವರ್ಷಗಳಿಂದ ಕುಡಿಯುವ ನೀರಿನ ಬವಣೆಯಿಂದ ತತ್ತರಿಸಿ ಹೋಗಿರುವ ತಾಲೂಕಿನ ಎಸ್.ಎಂ. ಹಳ್ಳಿ ಜನತೆ ಹಲಗೂರು ಮುಖ್ಯ ರಸ್ತೆಯಲ್ಲಿ ಖಾಲಿ ಕೊಡಗಳನ್ನಿರಿಸಿ, ಸ್ಥಳದಲ್ಲೇ ಅಡುಗೆ ಮಾಡಿ ಊಟ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಇದೇ ಮಾರ್ಗವಾಗಿ ವಿರೂಪಾಕ್ಷಿಪುರ ನಾಡಕಚೇರಿಯಲ್ಲಿ ನಡೆಯುತ್ತಿದ್ದ ಪಹಣಿ ತಿದ್ದುಪಡಿ ಆಂದೋಲನದಲ್ಲಿ ಪಾಲ್ಗೊಳ್ಳಲು ಜಿಲ್ಲಾಧಿಕಾರಿಗಳು ತೆರಳುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ನಮ್ಮ ಸಮಸ್ಯೆಗೆ ಪರಿಹಾರ ದೊರಕುವವರೆಗೆ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಕಳೆದ ಮೂರುವರ್ಷದಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದ್ದು.ಗ್ರಾಮದ ಹೊರಭಾಗದಲ್ಲಿ ಕಾವೇರಿ ನೀರು ಸರಬರಾಜು ಮಂಡಲಿಯ ಕೊಳವೆ ಹಾಯ್ದು ಹೋಗಿದ್ದು ಈ ಕೊಳವೆಯಿಂದ ಗ್ರಾಮಕ್ಕೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಬೇಕೆಂದು ಕಳೆದ ಜಿಲ್ಲಾಧಿಕಾರಿಗಳನ್ನು ಆಗ್ರಹಿಸುತ್ತಿದ್ದರೂ ಅವರು ಸ್ಪಂದಿಸಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಬಿಂದಿಗೆಗೆ ಮೂರು ರೂ. ಕೊಡ್ತೀವಿ: ನಮ್ಮ ಗ್ರಾಮದಲ್ಲಿ ಕುಡಿಯುವ ನೀರಿಲ್ಲದೆ ಬಿಂದಿಗೆಗೆ ಎರಡರಿಂದ ಮೂರು ರು. ಹಣ ನೀಡಿ ನೀರು ಖರೀದಿಸುತ್ತಿದ್ದೇವೆ. ಕುಡಿಯುವುದಕ್ಕೆ ನಮಗೆ ನೀರು ಸಾಲುತ್ತಿಲ್ಲ. ಇನ್ನು ಜಾನುವಾರುಗಳಿಗೆ,  ದಿನಬಳಕೆಗೆ ಏನು ಮಾಡುವುದು ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡರು.
ಸಮಸ್ಯೆಗೆ ಸ್ಪಂದಿಸದ ಮಂಡಲಿ: ಕಳೆದ 13ತಿಂಗಳಿಂದ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವಂತೆ ನೀರು ಸರಬರಾಜು ಮಂಡಲಿಗೆ ಮನವಿ ಸಲ್ಲಿಸಲಾಗಿದೆಯಾದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಿಸಿದ ಎಂಜಿನಿಯರ್‌ಗಳನ್ನು ಹಲವಾರು ಬಾರಿ ಭೇಟಿ ಮಾಡಲಾಗಿದೆಯಾದರೂ ಅವರು ನಮ್ಮ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತಿಲ್ಲ ಎಂದು ಕಿಡಿಕಾರಿದರು.
ಕುಡಿಯುವ ನೀರಿನ ಕಾಮಗಾರಿಗೆ ಜಿಲ್ಲಾಧಿಕಾರಿಗಳು 18.50 ಲಕ್ಷ ರು. ಹಣ ಬಿಡುಗಡೆ ಮಾಡಿದ್ದಾರೆ. ಪೈಪ್ ಲೈನ್ ಸಿದ್ಧವಿದ್ದು ಸಂಪರ್ಕ ಕಲ್ಪಿಸುತ್ತೇವೆ ಎಂದು ಕೆಲ ಸಾಮಗ್ರಿಗಳನ್ನು ನೀರು ಸರಬರಾಜು ಮಂಡಲಿ ಅಧಿಕಾರಿಗಳು ತರಿಸಿಕೊಂಡಿದ್ದಾರಾದರೂ ಇಂದು ನಾಳೆ ಎಂದು ಆಟವಾಡಿಸುತ್ತಿದ್ದಾರೆ. ಕೂಡಲೇ ನಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡದಿದ್ದರೆ ನಮ್ಮ ಗ್ರಾಮದ ಸರ್ವೇನಂಬರಿನ ಮೇಲೆ ಹಾಯ್ದು ಹೋಗಿರುವ ಕೊಳವೆಯನ್ನು ಒಡೆದು ಹಾಕುತ್ತೇವೆ ಎಂದು ಎಚ್ಚರಿಸಿದರು.
ಮನೆಗೆ 10 ಲೀಟರ್ ನೀರು: ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಈ ಸಮಸ್ಯೆಗೆ ಪರಿಹರಿಸಿ ಎಂದರೆ ಒಂದು ಮನೆಗೆ 10ಲೀಟರ್ ನೀರನ್ನು ಮಾತ್ರ ನೀಡಲು ಅವಕಾಶವಿದೆ ಯಾವುದೇ ಕಾರಣಕ್ಕೂ ಹೆಚ್ಚು ನೀರು ಕೊಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಬೇರೆ ಬಳಕೆಗೆ ಏನು ಮಾಡುವುದು ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ಮಂಜುನಾಥ್, ಎಂ.ಎನ್.ಆನಂದಸ್ವಾಮಿ, ಗುಂಡಾ, ಗ್ರಾ.ಪಂ ಸದಸ್ಯ ಅಶೋಕ್, ವಸಂತಮ್ಮ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement