ಅಧಿಕಾರಿಗಳ ಬೇಜವಾಬ್ದಾರಿಗೆ ಹರಿಹಾಯ್ದ ಶಾಸಕ ಬಾಲಕೃಷ್ಣ
ಮಾಗಡಿ: ಪ್ರತಿ ತಿಂಗಳು ಮೊದಲ ಶುಕ್ರವಾರ ತಪ್ಪದೆ ಜನ ಸಂಪರ್ಕ ಸಭೆ ನಡೆಸಲಾಗುತ್ತಿದ್ದರೂ ಅಧಿಕಾರಿಗಳ ಬೇಜವ್ದಾರಿಯಿಂದಾಗಿ ಸಮಸ್ಯೆಗಳು ಸಮಸ್ಯೆಗಳಾಗೇ ಉಳಿಯುತ್ತಿದೆ ಎಂದು ಶಾಸಕ ಬಾಲಕೃಷ್ಣ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಅವರು ಮಾಗಡಿ ತಾಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ತಾಲೂಕು ಕಳೆದ 3 ವರ್ಷಗಳಿಂದ ಬರಗಾಲ ಎದುರಿಸುತ್ತಿದೆ. ಅಧಿಕಾರಿಗಳು ಜವಾಬ್ದಾರಿಯಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸುಮ್ಮನೆ ರೈತರನ್ನು ಅಲೆಸಬೇಡಿ, ನೀವು ಮಾಡುವ ತಪ್ಪಿಗೆ ರೈತರನ್ನು ಹೊಣೆಗಾರರನ್ನಾಗಿಸಬೇಡಿ. ಕಾನೂನು ಚೌಕಟ್ಟಿನಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಸೂಚಿಸಿದರು.
ಪಹಣಿ ತಿದ್ದುಪಡಿ, ಭೂಮಿಯ ಸರ್ವೆ, ಪೋಡಿ ಮಾಡಿಸಿಕೊಡಿ, ಮ್ಯೂಟೇಷನ್‌ನಲ್ಲಿ ಆಗಿರುವ ಲೋಪದೋಷಗಳು ಸರಿಪಡಿಸಿಕೊಡಿ, ಮಾಸಾಶನ ಕೋರಿ, ಅರಣ್ಯ ಭೂಮಿ ಒಕ್ಕಲೆಬ್ಬಿಸದಂತೆ ಅಧಿಕಾರಿಗಳಿಗೆ ಹೇಳಿ, ರೇಷನ್ ಕಾರ್ಡ್ ಕೊಡಿಸಿ, ನೀರಿನ ಸಮಸ್ಯೆ ನಿವಾರಣೆಗೆ ಕೊಳವೆ ಬಾವಿ ಕೊರೆಸಿ, ಮಿನಿ ಟ್ಯಾಂಕ್ ಹಾಕಿಸಿ, ಸಮಸ್ಯೆಗಳಿಗೆ ಸ್ಪಂದಿಸಿ, ಬಗೆಹರಿಸುವಂತೆ ತಾಕೀತು ಮಾಡಿದರು. ಬಹುತೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಂಡು ಹಿಡಿದು ಪರಿಹಾರ ದೊರಕಿಸಿದರು. ತಾ.ಪಂ. ಅಧ್ಯಕ್ಷ ಜಿ.ಕೃಷ್ಣ, ಜಿ.ಪಂ. ಸದಸ್ಯರಾದ ಎಂ.ಕೆ.ಧನಂಜಯ,ವಿಜಯಕುಮಾರ್, ಬಮೂಲಲ್ನಿರ್ದೇಶಕ ನರಸಿಂಹಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.