'ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ'
ರಾಮನಗರ: ಅಕ್ರಮ ಮದ್ಯ ಮತ್ತು ಕಳ್ಳಭಟ್ಟಿ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತಿದೆ ಎಂದು ಅಬಕಾರಿ ಉಪ ಆಯುಕ್ತೆ ರೂಪಶ್ರಿ ತಿಳಿಸಿದರು.
ವಿವಿಧೆಡೆ ವಶಪಡಿಸಿಕೊಂಡಿದ್ದ ಅಕ್ರಮ ಮದ್ಯವನ್ನು ಇಲ್ಲಿನ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ನಾಶಪಡಿಸಿದ ಕಾರ್ಯಕ್ರಮ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಮದ್ಯ ಮಾರಾಟದ ವಿರುದ್ಧದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದರು.
ರಾಮನಗರ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ವಶಪಡಿಸಿಕೊಂಡಿದ್ದ ಸುಮಾರು ರು.7 ಲಕ್ಷ ಮೌಲ್ಯದ ಮದ್ಯವನ್ನು ನಾಶಪಡಿಸಲಾಗಿದೆ. ರಾಮನಗರದಲ್ಲಿ 200 ಲೀಟರ್ ಮದ್ಯ, 36 ಲೀಟರ್ ಬಿಯರ್, 54.60 ಲೀಟರ್ ಸೇಂದಿಯನ್ನು ನಾಶಪಡಿಸಲಾಗಿದೆ ಎಂದು ಹೇಳಿದರು.
ಚನ್ನಪಟ್ಟಣದಲ್ಲಿ 767 ಲೀಟರ್ ಮದ್ಯ, 199 ಲೀಟರ್ ಬಿಯರ್, 542 ಲೀಟರ್ ಸೇಂದಿ, 0.08ಲೀಟರ್ ಕೊಳೆ, ಮಾಗಡಿಯಲ್ಲಿ 993 ಲೀಟರ್ ಮದ್ಯ, 61.66 ಲೀಟರ್ ಬಿಯರ್, 308 ಲೀಟರ್ ಸೇಂದಿ ವಶವಪಡಿಸಿಕೊಂಡು ನಾಶ ಮಾಡಲಾಗಿದೆ ಎಂದು ವಿವರಿಸಿದರು.
ಕನಕಪುರದಲ್ಲಿ 203 ಲೀಟರ್ ಮದ್ಯ, 34 ಲೀಟರ್ ಬಿಯರ್, 19.06 ಲೀಟರ್ ಸೇಂದಿ ಮತ್ತು 34.46 ಲೀಟರ್ ಕೊಳೆಯನ್ನು ನಾಶಪಡಿಸಲಾಗಿದೆ ಎಂದು ರೂಪಶ್ರೀ ತಿಳಿಸಿದರು. ಅಬಕಾರಿ ಉಪ ಅಧೀಕ್ಷಕರಾದ ಜಿ.ಪಿ.ನರೇಂದ್ರ ಕುಮಾರ್, ಅಬಕಾರಿ ನಿರೀಕ್ಷಕರಾದ ಎಂ.ಎಸ್.ನಾರಾಯಣ ನಾಯ್ಕ, ಕೆಎಸ್ಬಿಸಿಎಲ್ ವ್ಯವಸ್ಥಾಪಕ ಪರಮಶಿವಯ್ಯ, ಅಬಕಾರಿ ಉಪ ನಿರೀಕ್ಷಕ ಎಚ್.ಬಿ. ಲಿಂಗರಾಜು ಹಾಜರಿದ್ದರು.