ಪಟೇಲ್ ಪುತ್ಥಳಿಗೆ ಲೋಹ ಸಂಗ್ರಹ
ದೊಡ್ಡಬಳ್ಳಾಪುರ: ಗುಜರಾತ್ನಲ್ಲಿ ನಿರ್ಮಿಸಲಾಗುತ್ತಿರುವ ಸರ್ದಾರ್ ವಲ್ಲಭಬಾಯಿ ಪಟೇಲರ ಬೃಹತ್ ಪುತ್ಥಳಿ ನಿರ್ಮಾಣಕ್ಕೆ ಲೋಹ ಸಂಗ್ರಹ ಅಭಿಯಾನ ರಾಷ್ಟ್ರದೆಲ್ಲೆಡೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ನೇತೃತ್ವದಲ್ಲಿ ಲೋಹ ಸಂಗ್ರಹ ಕಾರ್ಯಕ್ರಮ ನಡೆಯಿತು.
ತಾಲೂಕಿನೆಲ್ಲೆಡೆಯಿಂದ ಸಂಗ್ರಹಿಸಲಾದ ಲೋಹವನ್ನು ಇಲ್ಲಿನ ಇತಿಹಾಸ ಪ್ರಸಿದ್ಧ ವೆಂಕಟರಮಣಸ್ವಾಮಿ ದೇವಾಲಯಕ್ಕೆ ತಂದು ಪೂಜೆ ಸಲ್ಲಿಸಿ ಬಿಜೆಪಿ ಕೇಂದ್ರ ಕಚೇರಿಗೆ ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬೆಂ.ಗ್ರಾ.ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸಿ. ನಾರಾಯಣಸ್ವಾಮಿ, ತಾಲೂಕಿನ ಎಲ್ಲ 19 ಗ್ರಾಮ ಪಂಚಾಯಿತಿಗಳು, ನಗರದ 31 ವಾರ್ಡ್ಗಳ ವ್ಯಾಪ್ತಿಯ 5 ವಿಭಾಗಗಳಿಂದ ಲೋಹ ಸಂಗ್ರಹ ಕಾರ್ಯ ನಡೆಸಲಾಗಿದ್ದು, ಅದನ್ನು ಪೆಟ್ಟಿಗೆಗಳಲ್ಲಿ ತುಂಬಿ ಬೆಂಗಳೂರಿನ ಬಿಜೆಪಿ ಕಚೇರಿಗೆ ತಲುಪಿಸಲಾಗುತ್ತಿದೆ. ಈ ಅಭಿಯಾನದಡಿ ರೈತರು ಕೃಷಿಗೆ ಬಳಸಿರುವ ಹಳೆಯ ಉಪಕರಣಗಳು, ನೇಕಾರರು ಮಗ್ಗಗಳಿಗೆ ಬಳಸಿರುವ ಕಬ್ಬಿಣವೂ ಸೇರಿದಂತೆ ನಾಗರಿಕರಿಂದ ಲೋಹ ಸಂಗ್ರಹ ಮಾಡಲಾಗಿದೆ ಎಂದು ವಿವರಿಸಿದರು.
ರಾಜ್ಯ ರೇಷ್ಮೆ ಮಾರಾಟ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಮಾತನಾಡಿ, ಬಿಜೆಪಿಯ ಲೋಹ ಸಂಗ್ರಹ ಅಭಿಯಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಗ್ರಹವಾಗಿರುವ ಲೋಹವನ್ನು ವ್ಯವಸ್ಥಿತವಾಗಿ ಪುತ್ಥಳಿ ನಿರ್ಮಾಣಕ್ಕೆ ಕಳುಹಿಸಲಾಗುವುದು. ಒಂದೇ ಭಾರತ ಶ್ರೇಷ್ಠ ಭಾರತ ಶೀರ್ಷಿಕೆಯಡಿ ಭಾರತದ ಐಕ್ಯತೆಯ ಪ್ರತಿಮೆ ಸ್ಥಾಪನೆ ಮಾಡಲಾಗುತ್ತಿದ್ದು, ಇದು ಜಗತ್ತಿನಲ್ಲೇ ವಿಶಿಷ್ಟ ಪ್ರಯತ್ನವಾಗಿದೆ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಅಶ್ವತ್ಥನಾರಾಯಣಗೌಡ, ಕಾರ್ಯದರ್ಶಿ ನರಸಿಂಹಮೂರ್ತಿ, ನಾಗರಾಜ್, ನಗರ ಘಟಕದ ಅಧ್ಯಕ್ಷ ಶಿವಶಂಕರ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ನಾಗರಾಜ್, ನಗರಸಭಾ ಸದಸ್ಯ ಡಿ.ಎಂ.ಚಂದ್ರಶೇಖರ್, ಕಂಬಿ ನಂಜಪ್ಪ, ವೆಂಕಟರಾಜು, ಮಹಿಳಾ ಮೋರ್ಚಾ ಜಿಲ್ಲಾ ಮುಖಂಡರಾದ ಉಮಾಮಹೇಶ್ವರಿ, ಮುಖಂಡರಾದ ಡಿ.ಎಲ್. ಸತ್ಯನಾರಾಯಣ್, ಆವಲಕೊಂಡಪ್ಪ, ಗೋಪಿ, ಮುತ್ತಣ್ಣ ಮತ್ತಿತರರು ಭಾಗವಹಿಸಿದ್ದರು.