ಪ್ರಾಕೃತಿಕ ಸಂಪತ್ತಿನ ಲೂಟಿ ತಡೆಗಟ್ಟಿ
ಕ.ಪ್ರ.ವಾರ್ತೆ ರಾಮನಗರ ಫೆ.7
ಅಕ್ರಮ ಮರಳುಗಾರಿಕೆ ತಡೆಗಟ್ಟುವಲ್ಲಿ ಸಾರ್ವಜನಿಕರ ಪಾತ್ರ ಅತಿಮುಖ್ಯ. ತಮ್ಮ ಸುತ್ತಮುತ್ತಲ ಗ್ರಾಮಗಳಲ್ಲಿ ನಡೆಯುತ್ತಿರುವ ಪ್ರಾಕೃತಿಕ ಸಂಪತ್ತಿನ ಲೂಟಿ ತಡೆಗಟ್ಟುವ ಮೂಲಕ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ನೆರವಾಗಿ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಕರೆ ನೀಡಿದರು.
ತಾಲೂಕಿನ ಕೂಟಗಲಲ್ನಾಡ ಕಚೇರಿ ಆವರಣದಲ್ಲಿ ಹೋಬಳಿ ಮಟ್ಟದ ಪಹಣಿ ತಿದ್ದುಪಡಿ ಮತ್ತು ಪಿಂಚಣಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಕ್ರಮ ಮರಳುಗಾರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತದಷ್ಟೇ ಹೊಣೆ ಸಾರ್ವಜನಿಕರದ್ದೂ ಇದೆ ಎಂದು ಅವರು ತಿಳಿಸಿದರು.
ಕರೆ ಮಾಡಿದ್ರೆ ಸಾಕು: ಒಂದು ಕೈಯಿಂದ ಚಪ್ಪಾಳೆ ಅಸಾಧ್ಯ. ಎರಡು ಕೈ ಕೂಡಿದರಷ್ಟೇ ಚಪ್ಪಾಳೆ. ಸಾರ್ವಜನಿಕರ ಸಹಕಾರ ದೊರೆತಾಗಷ್ಟೇ ಅಕ್ರಮ ಮರಳುಗಾರಿಕೆಯನ್ನು ಸಂಪೂರ್ಣ ನಿಯಂತ್ರಿಸಬಹುದು. ಅಕ್ರಮ ಮರಳುಗಾರಿಕೆ ವಿರುದ್ಧ ದೂರು ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ವಿಶ್ವನಾಥ್ ಹೇಳಿದರು.
ಪೊಲೀಸ್ ಕಂಟ್ರೋಲ್ರೂಂ, ತಹಸೀಲ್ದಾರ್, ಉಪ ವಿಭಾಗಾಧಿಕಾರಿ ಇಲ್ಲವೇ ತಮ್ಮ ಕಚೇರಿಗೆ ಅಕ್ರಮ ಮರಳುಗಾರಿಕೆ ಸಂಬಂಧ ಸಾರ್ವಜನಿಕರು ಮಾಹಿತಿ ನೀಡಬೇಕು. ತಕ್ಷಣವೇ ದಾಳಿ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಕಠಿಣ ಕ್ರಮದ ಎಚ್ಚರಿಕೆ: ಅಕ್ರಮ ಮರಳುಗಾರಿಕೆಗೆ ನಿಯಂತ್ರಣ ಹೇರಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಮರಳುಗಾರಿಕೆಯಲ್ಲಿ ತೊಡಗಿದ ದಂಧೆಕೋರರ ವಿರುದ್ಧ ಜಿಲ್ಲಾಡಳಿತ ಕಠಿಣ ಕಾನೂನು ಕ್ರಮ ಜರುಗಿಸಲಿದೆ. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ವಿಶ್ವನಾಥ್ ಎಚ್ಚರಿಸಿದರು. ಅಧಿಕಾರಿಗಳಿಗೆ ಸಾರ್ವಜನಿಕರು ಮರಳುಗಾರಿಕೆ, ಫಿಲ್ಟರ್ ಮರಳು ದಂಧೆ ಸಂಬಂಧ ಮಾಹಿತಿ ನೀಡಿದ್ದೇ ಆದಲ್ಲಿ ಅದಕ್ಕೆ ನಿಯಂತ್ರಣ ಹೇರುವುದು ದೊಡ್ಡ ಕೆಲಸವೇನಲ್ಲ. ಸಾರ್ವಜನಿಕರ ನಿರ್ಲಕ್ಷ್ಯದ ಲಾಭ ಪಡೆದು ದಂಧೆಕೋರರು ಅಟ್ಟಹಾಸ ನಡೆಸುತ್ತಿದ್ದಾರಷ್ಟೇ ಎಂದು ಅವರು ಅಭಿಪ್ರಾಯಪಟ್ಟರು.
ಹೊಣೆ ಅರಿಯಿರಿ: ಈ ಜಿಲ್ಲೆಯ ಉತ್ಕೃಷ್ಟ ಪರಿಸರ, ನೀರು, ಭೂಮಿಯ ಫಲವತ್ತತೆ ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ನಮ್ಮ ಹಿರಿಯರು ನಮಗೆ ಎಲ್ಲವನ್ನೂ ಬಳುವಳಿಯಾಗಿ ನೀಡಿ ಹೋಗಿದ್ದಾರೆ. ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮ ಜವಾಬ್ದಾರಿ ಎಂದು ಅವರು ಸಲಹೆ ನೀಡಿದರು. ನಾವೇನಾದರೂ ಈಗ ಹೊಣೆ ಮರೆತಿದ್ದೇ ಆದರೆ ಪರಿಸರಕ್ಕೆ ಧಕ್ಕೆ ಎದುರಾಗಲಿದೆ. ಅಂತರ್ಜಲ ಕುಸಿದು ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಲಿದೆ. ಮುಂದೆ ಆಗಬಹುದಾದ ದುಷ್ಪರಿಣಾಮಗಳನ್ನು ಅರಿತು ನಾವು ಇನ್ನಾದರೂ ಜಾಗೃತರಾಗಲೇಬೇಕು ಎಂದು ಅವರು ತಿಳಿಸಿದರು.
ಮುಂಜಾಗ್ರತಾ ಕ್ರಮ: ಮುಂಬರುವ ಬೇಸಿಗೆಯಲ್ಲಿ ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಜಿಲ್ಲಾಡಳಿತ ಈಗಾಗಲೇ ಮುಂಜಾಗ್ರತಾ ಕ್ರಮ ಜರುಗಿಸಿದೆ. ಕುಡಿಯುವ ನೀರು ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರ ಈಗಾಗಲೇ ರು.50 ಕೋಟಿ ಹಣ ಒದಗಿಸಿದೆ ಎಂದು ವಿಶ್ವನಾಥ್ ವಿವರಿಸಿದರು.
ಜಿ.ಪಂ. ಮೂಲಕ ಕುಡಿಯುವ ನೀರಿನ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ರೂಪಿಸಿ, ಸರ್ಕಾರಕ್ಕೆ ಸಲ್ಲಿಸಲಾಗಿದೆ. ಎಲ್ಲಾ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ವಿಶೇಷ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ ಎಂದರು.
ಮಾರ್ಚ್ ಒಳಗೆ ತಿದ್ದುಪಡಿ
ರಾಮನಗರ ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಬಾಕಿ ಇರುವ 29 ಸಾವಿರಕ್ಕೂ ಹೆಚ್ಚು ಪಹಣಿ ತಿದ್ದುಪಡಿ ಪ್ರಕರಣಗಳನ್ನು ಮಾ.31ರೊಳಗೆ ಪೂರ್ಣಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ತಿಳಿಸಿದರು. ಕೂಟಗಲ್ ಹೋಬಳಿಯಲ್ಲಿ ಬಾಕಿಯಿದ್ದ 747 ಪಹಣಿ ತಿದ್ದುಪಡಿ ಪ್ರಕರಣಗಳ ಪೈಕಿ 429 ಪ್ರಕರಣಗಳು ವಿಲೇವಾರಿ ಆಗಿವೆ. ಉಳಿದವು ಇನ್ನು 15 ದಿನಗಳಲ್ಲಿ ಪೂರ್ಣಗೊಳ್ಳಲಿವೆ. ರೈತರ ಹಿತ ಕಾಯಲು ಜಿಲ್ಲಾಡಳಿತ ಬದ್ಧವಾಗಿದೆ ಎಂದರು. ಕಾರ್ಯಕ್ರಮದಲ್ಲಿ ತಿದ್ದುಪಡಿಯಾದ ಪಹಣಿ, ಸಾರ್ವಜನಿಕ ಭದ್ರತಾ ಯೋಜನೆ ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ವಿಶ್ವನಾಥ್ ವಿತರಿಸಿದರು. ಉಪ ವಿಭಾಗಾಧಿಕಾರಿ ಸಿದ್ದಪ್ಪ, ತಹಸೀಲ್ದಾರ್ ಹನುಮಂತರಾಯಪ್ಪ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.