ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

8 ರೌಡಿಗಳ ಸೆರೆ

Vishwanath S
Updated On : 9 Feb 2014, 12:57 pm

ರಾಮನಗರ: ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ ಮುಖ್ಯ ರಸ್ತೆಯಲ್ಲಿ ಹಾಡ ಹಗಲೇ ಲಾಂಗ್‌ಗಳನ್ನು ಝಳಪಿಸಿ ಮಾರಾಮಾರಿಯೊಂದಿಗೆ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ರೌಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.  
ರಿಜ್ವಾನ್, ಫಾರೆಸ್ಟ್ ಬಾಬು, ಡಕ್ಕು ಸುನಿಲ, ಶ್ರೀನಿವಾಸ್, ಅರುಣ್ ಕುಮಾರ್, ಮೂರ್ತಿ, ಮಂಜುನಾಥ್, ಕೃಷ್ಣ ಬಂಧಿತ ಆರೋಪಿಗಳು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತರು ಘಟನೆಯ ನಂತರ ಮೂರು ತಂಡಗಳಾಗಿ ಬೇರ್ಪಟ್ಟು, ಬೆಂಗಳೂರಿನ ಗೊಟ್ಟಿಗೆರೆ, ಜೆ.ಪಿ.ನಗರ, ಉತ್ತರಹಳ್ಳಿಯಲ್ಲಿ ತಲೆ ಮರೆಸಿಕೊಂಡಿದ್ದರು. ತನಿಖೆಗೆ ರಚಿಸಿದ್ದ 2 ಪೊಲೀಸ್ ತಂಡಗಳು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.  
ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳು ಹಾಗೂ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ತಲೆ ಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ ಎಂದು ಹೇಳಿದರು.
ಬಂಧಿತರನ್ನು ವಿಚಾರಣೆಗೆ ಒಳಪಡಿಸಿದ ನಂತರ ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬೆಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಫೆ.19 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ ಎಂದರು.
ಫೆ.2ರಂದು ಬೈಕ್ ಮತ್ತು ಕಾರು ನಡುವೆ ಲಘು ಅಪಘಾತ ಸಂಭವಿಸಿತ್ತು. ಈ ಸಂಬಂಧ ಶ್ರೀನಿವಾಸ ಹಾಗೂ ಹರೀಶ್ ನಡುವೆ ಮಾತಿನ ಚಕಮಕಿ ನಡೆಯಿತು. ಶ್ರೀನಿವಾಸ್ ರೌಡಿಗಳನ್ನು ಕರೆಸಿಕೊಂಡು, ತನಗೆ ಎದಿರಾಡಿದ್ದ ಹರೀಶ ಇತರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನು ಎಂದು ಅಗ್ರವಾಲ್ ವಿವರಿಸಿದರು.
ರೌಡಿಗಳು ಸಿನಿಮೀಯ ರೀತಿಯಲ್ಲಿ ಲಾಂಗ್ ಮತ್ತು ಮಚ್ಚುಗಳನ್ನು ಝಳಪಿಸಿ, ಹಲ್ಲೆ ನಡೆಸಿದ್ದನ್ನು ಕಂಡ ಜನರು ಭಯಭೀತರಾಗಿ ಓಡಿದ್ದರು. ಕಗ್ಗಲೀಪುರದ ವರ್ತಕರು ಆತಂಕದಿಂದ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿದ್ದರು.
ಮಾಧ್ಯಮಗಳಲ್ಲಿ ಈ ಘಟನೆ ಭಿತ್ತರವಾಗುತ್ತಿದ್ದಂತೆ ರೌಡಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ತಲಘಟ್ಟಪುರ ಸಬ್ ಇನ್ಸ್‌ಪೆಕ್ಟರ್ ವಿಶ್ವನಾಥ್ ಅವರನ್ನು ಘಟನೆ ದಿನವೇ ಉನ್ನತ ಅಧಿಕಾರಿಗಳ ಆದೇಶದ ಮೇರೆಗೆ ಎಸ್ಪಿ ಅಗ್ರವಾಲ್ ಅಮಾನತು ಪಡಿಸಿದ್ದನ್ನು ಸ್ಮರಿಸಬಹುದು.
ಇತರೆ ಪ್ರಕರಣ ಪತ್ತೆ: ಮಾಗಡಿ ತಾಲೂಕಿನ ಕರೇನಹಳ್ಳಿ ಗ್ರಾಮದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಿದ್ರಿಸುತ್ತಿದ್ದ ಪತ್ನಿಯ ಮೇಲೆ ನಾಡ ಬಂದೂಕಿನಿಂದ ಗುಂಡು ಹಾರಿಸಿ ಪರಾರಿಯಾಗಿದ್ದ ಸೋಮಣ್ಣ ಅಲಿಯಾಸ್ ಮಾಕಳಿ ಎಂಬುವನನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ. ಇದೂ ಸೇರಿದಂತೆ ಇತರೆ ಪ್ರಕರಣಗಳಲ್ಲಿ ಬಂಧಿತರು, ವಶಪಡಿಸಿಕೊಳ್ಳಲಾದ ವಸ್ತುಗಳ ವಿವರವನ್ನು ಎಸ್ಪಿ ಅಗ್ರವಾಲ್ ನೀಡಿದ್ದಾರೆ.
ಕುಡಿತವೇ ಕಾರಣ: ಕುಡಿತದ ಚಟವನ್ನು ಹತ್ತಿಸಿಕೊಂಡಿದ್ದ ಸೋಮಣ್ಣ ಪದೇ ಪದೇ ಪತ್ನಿ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದನು. ಇದೇ ವಿಚಾರವಾಗಿ ಆಗಾಗ್ಗೆ ಜಗಳ ನಡೆದು, ಪತಿ-ಪತ್ನಿ ಬೇರೆಯಾಗಿ ವಾಸಿಸುತ್ತಿದ್ದರು. ಫೆ.2 ರಾತ್ರಿ ಕುಡಿದ ಮತ್ತಿನಲ್ಲಿದ್ದ ಸೋಮಣ್ಣ ಹನುಮಾಪುರ ಗ್ರಾಮದ ಶಿವಣ್ಣ ಎಂಬಾತನ ಬಳಿ ಇದ್ದ ಪರವಾನಗಿ ಹೊಂದಿದ್ದ ನಾಡ ಬಂದೂಕಿನಿಂದ ಗುಂಡು ಹಾರಿಸಿ ಪರಾರಿಯಾಗಿದ್ದನು.
ಪತ್ನಿ ಗಂಗಮ್ಮ ಮೃತಪಟ್ಟು, 3 ವರ್ಷದ ಪುತ್ರ ನಂದೀಶ ಗಾಯಗೊಂಡಿದ್ದನು. ಆರೋಪಿ ಪತ್ತೆಗಾಗಿ ಮಾಗಡಿ ವೃತ್ತ ನಿರೀಕ್ಷಕ ಯಲಗಯ್ಯ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತಲೆ ಮರೆಸಿಕೊಂಡಿದ್ದ ಆರೋಪಿ ಸೋಮಣ್ಣ ಹಾಗೂ ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ಬಂದೂಕಿನ ಮಾಲೀಕ ಶಿವಣ್ಣನನ್ನು ದಸ್ತಗಿರಿ ಮಾಡಿದ್ದಾರೆ. ನಾಡ ಬಂದೂಕು, ಮೊಬೈಲ್  ಹಾಗೂ ಟಾರ್ಚ್ ವಶಪಡಿಸಿಕೊಳ್ಳಲಾಗಿದೆ.   
ಆರೋಪಿಗಳ ಬಂಧನ: ವ್ಯಕ್ತಿಯೊಬ್ಬ ಸರ್ಕಾರಿ ಕೆಲಸದಲ್ಲಿರುವುದಾಗಿ ನಂಬಿಸಿ ಯುವತಿಯೊಂದಿಗೆ ಮದುವೆ ನಿಶ್ಚಯ ಮಾಡಿಕೊಂಡಿದ್ದನು. ಈ ವಂಚನೆ ಬಯಲು ಮಾಡಲು ಹೋದ ಯುವತಿಯ ಸಹೋದರ ವಂಚಕನಿಂದ ಕೊಲೆಯಾದ. ಈ ರಹಸ್ಯವನ್ನು ಭೇದಿಸಿದ ಸಾತನೂರು ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಕೊಲೆಯಾದ ಯುವಕ ಮಂಡ್ಯ ಸಿಟಿ ಕಲ್ಲಹಳ್ಳಿಯ ಸಂತೋಷ (20). ಕಳೆದ ವರ್ಷ ಜೂ.1 ರಂದು ಕಬ್ಬಾಳು ಸಮೀಪ ಆತನ ಕುತ್ತಿಗೆ ಬಿಗಿದು, ತಲೆ ಮೇಲೆ ಸೈಜು ಕಲ್ಲು ಎತ್ತಿ ಹಾಕಿ ಮಂಡ್ಯ ತಾಲೂಕಿನ ಸಿದ್ದಯ್ಯನಕೊಪ್ಪಲಿನ ದೇವರಾಜು ಮಾಡಿದ್ದನು. ನಂತರ ಆರೋಪಿ ಮೃತನ ಅಂತ್ಯಕ್ರಿಯೆಯಲ್ಲೂ ಭಾಗಿಯಾಗಿ ಮನೆಗೆ ಹೋಗಿದ್ದನು. ಛಾಯಾಗ್ರಾಹಕ ಆಗಿರುವ ದೇವರಾಜು ತಾನು ಸರ್ಕಾರಿ ನೌಕರ ಎಂದು ಸುಳ್ಳು ಹೇಳಿ  ಸಂತೋಷನ ಸಹೋದರಿಯೊಂದಿಗೆ ವಿವಾಹದ ನಿಶ್ಚಯ ಮಾಡಿಕೊಂಡಿದ್ದನು. ಸಂತೋಷನಿಗೆ ನಿಜ ಗೊತ್ತಾಗಿ ಪ್ರಶ್ನಿಸಿದಾಗ ಆತನನ್ನು ಮುಗಿಸಲು ದೇವರಾಜು ನಿರ್ಧರಿಸಿ, ಕೃತ್ಯ ಎಸಗಿ ಈಗ ಜೈಲು ಸೇರಿದ್ದಾನೆ.
ಕಳ್ಳರ ಬಂಧನ: ಕುಂಬಳಗೂಡು ಪೊಲೀಸ್ ಠಾಣಾ ವ್ಯಾಪ್ತಿಯ ರಾಮಸಂದ್ರ, ಭುವನೇಶ್ವರಿನಗರ ಮತ್ತು ನಾಗದೇವನಹಳ್ಳಿ ಗ್ರಾಮಗಳಲ್ಲಿ ಈಗ್ಗೆ 6 ತಿಂಗಳ ಹಿಂದೆ ಸರಗಳ್ಳತನ ನಡೆಸಿದ್ದ ಗೋರಿಪಾಳ್ಯದ ಮಹಮದ್ ಇಮ್ರಾನ್, ಪಾದರಾಯನಪುರದ ಮಹಮದ್ ಸಾಧಿಕ್ ಅವರನ್ನು ಬಂಧಿಸಿ ರು.2 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.  
ಇದೇ ಠಾಣಾ ವ್ಯಾಪ್ತಿಯ ಹೊಸಬೈರೋಹಳ್ಳಿ ಮತ್ತು ಹಂಪಾಪುರ ಮತ್ತಿತರೆಡೆ ವಿದ್ಯುತ್ ತಂತಿ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಮಂಗನಹಳ್ಳಿಯ ಮಂಜುನಾಥ, ಬೆಂವಿವಿ ಕ್ವಾರ್ಟ್ರಸ್ ನಿವಾಸಿ ಕಾಮರಾಜನನ್ನು ಬಂಧಿಸಿ, ರು.1 ಲಕ್ಷ ಬೆಲೆ ಬಾಳುವ ವಿದ್ಯುತ್ ತಂತಿಯನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ.
ರೌಡಿ ಪಟ್ಟಿಗೆ ಸಾವಿರ ಮಂದಿ
ರಾಮನಗರ ಜಿಲ್ಲಾ ಪೊಲೀಸ್ ವಾಪ್ತಿ ರೌಡಿ ಪಟ್ಟಿಯಲ್ಲೀಗ ಬರೋಬ್ಬರಿ ಒಂದು ಸಾವಿರ ಹೆಸರುಗಳಿವೆ ಇದೇನಪ್ಪಾ ಇಷ್ಟೊಂದು ರೌಡಿಗಳಿದ್ದಾರೆಯೇ ಎಂದು ಹುಬ್ಬೇರಿಸಬೇಡಿ. ಇದು ಅಚ್ಚರಿಯಾದರೂ ಸತ್ಯ. ಈ ಮಾಹಿತಿಯನ್ನು ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ಅವರೇ ಹೊರಗೆಡವಿದ್ದಾರೆ. ವಿವಿಧ ಪ್ರಕರಣಗಳಲ್ಲಿ ಆರೋಪಿಗಳ ಬಂಧನ ಮತ್ತು ತನಿಖೆ ಪ್ರಗತಿಯನ್ನು ವಿವರಿಸುತ್ತಿದ್ದ ಅಗ್ರವಾಲ್, ನಾನು ರಾಮನಗರಕ್ಕೆ ಬಂದಾಗ ರೌಡಿ ಪಟ್ಟಿಯಲ್ಲಿ 174 ಮಂದಿ ಇದ್ದರು. ಈಗ ಪಟ್ಟಿಗೆ 1 ಸಾವಿರ ಮಂದಿ ಸೇರಿಸಿದ್ದೇವೆ ಎಂದರು. ಗೂಂಡಾ ಕಾಯ್ದೆಯಡಿ ಇಬ್ಬರನ್ನು ಬಂಧಿಸಿ ಜೈಲಿಗೆ ಹಾಕಲಾಗಿದೆ. ಇನ್ನೂ 20 ಮಂದಿಯನ್ನು ಗೂಂಡಾ ಕಾಯ್ದೆಗೆ ಸೇರಿಸಿ, ಜಿಲ್ಲಾಡಳಿತಕ್ಕೆ ಶಿಫಾರಸು ಮಾಡಲಾಗಿದೆ. ಅಂಕಿತ ಸಿಕ್ಕೊಡನೆ ಅವರನ್ನೂ ಜೈಲಿಗೆ ಅಟ್ಟುವುದು ನಿಶ್ಚಿತ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments