ಹಾಲು ಉತ್ಪಾದಕ ರೈತರ ಹಾಲನ್ನು ಖರೀದಿಸದೆ ತಡೆದದ್ದಕ್ಕೆ ಆಕ್ರೋಶ
ಮಾಗಡಿ: ಕಲ್ಯಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರ ವೈಯಕ್ತಿಕ ದಬ್ಬಾಳಿಕೆಯಿಂದಾಗಿ ಹಾಲು ಉತ್ಪಾದಕ ರೈತರ ಹಾಲನ್ನು ಖರೀದಿಸದೆ ತಡೆದಿದ್ದನ್ನು ಖಂಡಿಸಿ ಹಾಲು ಉತ್ಪಾದಕರು ಧಿಡೀರ್ ರಸ್ತೆ ತಡೆ ನಡೆಸಿ ಅಧ್ಯಕ್ಷ ಯೋಗೀಶ್ ವಿರುದ್ಧ ಧಿಕ್ಕಾರ ಕೂಗುತ್ತಾ ಅಧ್ಯಕ್ಷ ಸ್ಥಾನದಿಂದ ಯೋಗೀಶ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದರು.
ಮಾಗಡಿ ತಾಲೂಕಿನ ಕಲ್ಯಾ ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪನೆಯಾಗಿ 27 ವರ್ಷ ಕಳೆದರೂ ಇಲ್ಲಿಯವರೆಗೂ ಒಂದು ನಯಾಫೈಸೆ ಬೋನಸ್ ನೀಡಿಲ್ಲ. ಆದರೂ ಸಿಬ್ಬಂದಿಗಳು ಮಾತ್ರ 26 ಸಾವಿರ ರು. ಡ್ರಾ ಮಾಡಿಕೊಂಡು ಬೋನಸ್ ಹಂಚಿಕೊಂಡಿದ್ದಾರೆ. ಡೈರಿಗೆ ಕಿಟಕಿ ಮಾಡಿಸುವುದಾಗಿ 19 ಸಾವಿರ ರು. ಹಣ ಡ್ರಾ ಮಾಡಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ. ಹಿಂಡಿ, ಬೂಸ, ಮೇವು ಬೆಲೆಯಲ್ಲ ಗಗನಕ್ಕೇರಿದೆ. ಕುಡಿಯುವ ನೀರಿಗೆ ಅಭಾವ ಇಂತಹ ಪರಿಸ್ಥಿತಿಯಲ್ಲಿಯೂ ಹೈನುಗಾರಿಕೆಯನ್ನೇ ನಂಬಿ ಕಷ್ಟಪಟ್ಟು ಹಸು ಸಾಕಾಣಿಕೆ ಮಾಡುವ ಮೂಲಕ ಸಂಘಕ್ಕೆ ಹಾಲು ಪೂರೈಕೆ ಮಾಡುತ್ತಾ ಕಷ್ಟದ ಜೀವನ ಸಾಗಿಸುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಹಾಲು ಉತ್ಪಾದಕ ರೈತರೊಂದಿಗೆ ಅಧ್ಯಕ್ಷರು ಚಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಡೈರಿಯಲ್ಲಿ 58 ಮಂದಿ ಸದಸ್ಯರಿದ್ದಾರೆ. ಸುಮಾರು 500 ಲೀಟರ್ ಹಾಲನ್ನು ಸಂಘ ಖರೀದಿಸುತ್ತಿದೆ. ಒಮ್ಮೊಮ್ಮೆ ನಾಲ್ಕೈದು ಮಂದಿ ತರುವ ಹಾಲಿನಲ್ಲಿ ಡಿಗ್ರಿ ಕಡಿಮೆ ಬರವುದು ಸರ್ವೆ ಸಾಮಾನ್ಯ. ಆದರಲ್ಲಿ ಶನಿವಾರ ಸುಮಾರು 35 ಮಂದಿ ತಂದಿರುವ ಹಾಲನ್ನು ಸಂಘದಲ್ಲಿ ಪರೀಕ್ಷಿಸದೆ ತಡೆ ಹಿಡಿದು ರೈತರಿಗೆ ಹತ್ತಾರು ಸಾವಿರ ರು. ಅನ್ಯಾಯ ಮಾಡಿದ್ದಲ್ಲದೆ ಸೀಲು, ಸಹಿ ಇಲ್ಲದೆ ಇಂತಹ ರೈತರ ಹಾಲನ್ನು ಸಂಘ ಖರೀದಿಸುವುದಿಲ್ಲ ಎಂದು ಬಹುತೇಕ ರೈತರ ಹೆಸರನ್ನು ಸಹಕಾರ ಸಂಘದ ಮುಂದೆ ನೊಟೀಸ್ ಬೋರ್ಡ್ ಹಾಕಿದ್ದು ಮತ್ತಷ್ಟು ರೈತರ ಆಕ್ರೋಶಕ್ಕೆ ಅಧ್ಯಕ್ಷ ಯೋಗೀಶ್ ಗುರಿಯಾಗಬೇಕಾಯಿತು.
ನೋಟಿಸ್ ಬೋರ್ಡ್ ನೋಡಿ ಕೆರಳಿದ ರೈತರು ದಿಢೀರ್ ಡೈರಿ ಬಾಗಿಲು ಮುಚ್ಚಿ ರಸ್ತೆಗಿಳಿದು ಪ್ರತಿಭಟನಾ ಧರಣಿ ನಡೆಸಿದರು. ಸುಮಾರು 1 ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆದ ಪರಿಣಾಮ ಶನಿವಾರ ಆಗಿದ್ದರಿಂದ ನೌಕರರು, ಪ್ರಯಾಣಿಕರು ಪರದಾಡಿದರು. ಇತ್ತ ಶಾಲಾ ಮಕ್ಕಳು ಸಹ ಸರಿಯಾದ ಸಮಯಕ್ಕೆ ಶಾಲೆಗೆ ಹೋಗಲಾಗದೆ ಪರಿತಪಿಸಿದರು.
ವಿಷಯ ತಿಳಿದ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಘಟನೆ ಕುರಿತು ಅವಲೋಕಿಸಿದರು. ರೈತರು ಪೂರೈಕೆ ಮಾಡುವ ಹಾಲನ್ನು ಪರೀಕ್ಷಿಸದೆ ತಡೆಹಿಡಿದಿದ್ದು ಸರಿಯಾದ ಕ್ರಮವಲ್ಲ, ನಿತ್ಯವೂ ರೈತರು ಪೂರೈಕೆ ಮಾಡುವ ಹಾಲನ್ನು ಖಡ್ಡಾಯವಾಗಿ ಪರೀಕ್ಷಿಸಬೇಕು. 8.5 ರಷ್ಟು ಡಿಗ್ರಿ ಬಂದರೆ ಮಾತ್ರ ಹಾಲು ಖರೀದಿಸಬೇಕು. ಈ ಬಗ್ಗೆ ಗುಣಮಟ್ಟದ ಹಾಲು ಪೂರೈಕೆಗೆ ರೈತರಿಗೆ ಮನವರಿಕೆ ಸಹ ಮಾಡಬೇಕು ಎಂದು ಅಧ್ಯಕ್ಷರಿಗೆ ಬುದ್ಧಿವಾದ ಹೇಳುತ್ತಿದ್ದಂತೆ ರೈತರು ಅಧ್ಯಕರು ಕೂಡಲೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಆದರೂ ರೈತರನ್ನು ಮನವೊಲಿಸುವಲ್ಲಿ ನರಸಿಂಹಮೂರ್ತಿ ಯಶಸ್ವಿಯಾದರು. ಶಿವರಾತ್ರಿಯೊಳಗೆ ರೈತರಿಗೆ ಬೋನಸ್ ಕೊಡಿಸುವುದಾಗಿ ಭರವಸೆ ನೀಡಿದರು. ರೈತರಾದ ಶ್ರೀಕಾಂತ್, ಗಂಗಾಧರಯ್ಯ, ಮಾಜಿ ಅಧ್ಯಕ್ಷ ನಾಗರಾಜು, ಉಮೇಶ್, ಸಿದ್ದಪ್ಪ, ರುದ್ರೇಶ್, ರೇಣುಕಪ್ಪ ಜಗದೀಶ್,ನಾಗರಾಜು ಇತರರು ಪ್ರತಿಭಟನಾ ನೇತೃತ್ವ ವಹಿಸಿದ್ದರು.
ತಾ.ಪಂ. ಮಾಜಿ ಅಧ್ಯಕ್ಷ ಕಲ್ಯ ಪದ್ಮಯ್ಯ, ಗ್ರಾ.ಪಂ. ಸದಸ್ಯ ಕುಮಾರ್, ವಿಎಸ್‌ಎಸ್‌ಎನ್ ಅಧ್ಯಕ್ಷ ನಾರಾಯಣ, ಕಲ್ಯಾ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ನರಸಿಂಹಮೂರ್ತಿ, ರೇಣುಕಪ್ಪ ಇತರರು ಇದ್ದರು.