ಆಕಳಿಕೆ, ತೂಕಡಿಕೆ, ಮೊಬೈಲ್ ಸಂಭಾಷಣೆ:ಸಭೆಯಲ್ಲಿ ದೇವರಾಣೆ ಗಂಭೀರ ಚರ್ಚೆ 'ಕಾಣೆ'
ರಾಮನಗರ: ಆಕಳಿಕೆ, ತೂಕಡಿಕೆ ಮತ್ತು ಮೊಬೈಲ್ನಲ್ಲಿ ಸಂಭಾಷಣೆ ನಡೆಸುತ್ತಲೇ ಕಾಲ ಹರಣ ಮಾಡಿದ ಅಧಿಕಾರಿಗಳು ತಮ್ಮ ಸರದಿ ಬಂದಾಗ ರಾಮ-ಕೃಷ್ಣನ ಲೆಕ್ಕ ಒಪ್ಪಿಸಿ ತಿಪ್ಪೆ ಸಾರಿಸಿದರು...
ಇದು, ಜಿಪಂ ಅಧ್ಯಕ್ಷ ಎಚ್.ಸಿ.ರಾಜು ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಮುಖ್ಯ ಸಾರಾಂಶ. ಅಧೀನ ಅಧಿಕಾರಿಗಳ ಈ ಆಟಾಟೋಪಕ್ಕೆ ಸಿಇಒ ಡಾ.ಎಂ.ವಿ.ವೆಂಕಟೇಶ್ ಸಹಿತ ಉನ್ನತ ಅಧಿಕಾರಿಗಳು ಸಾಕ್ಷಿಯಾದರು. ರಾಮನಗರದಲ್ಲಿ ಇನ್ನೂ ಜಿಲ್ಲೆ ಸ್ವರೂಪವೇ ಮೂಡಿಲ್ಲ. ಆಡಳಿತ ವ್ಯವಸ್ಥೆ ಜಡ್ಡುಗಟ್ಟಿದೆ. ಬೇರೆಡೆ ಕೆಲಸ ಮಾಡಿ ಪಳಗಿ ಬಂದ ಅಧಿಕಾರಿಗಳು ಇಲ್ಲಿ ಸುಧಾರಣೆ ತರುವ ಬದಲು ಈ ವ್ಯವಸ್ಥೆಗೇ ಹೊಂದಿಕೊಳ್ಳುತ್ತಿದ್ದಾರೆ.
ಜಿಪಂ ಅಧ್ಯಕ್ಷರ ಪ್ರಗತಿ ಪರಿಶೀಲನಾ ಸಭೆ ಮಾತ್ರವಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಧ್ಯಕ್ಷತೆಯ ಸಭೆಗಳಲ್ಲೂ ಇಂಥದ್ದೆಲ್ಲಾ ಮಾಮೂಲು ಎಂಬಾಂತಾಗಿದೆ. ಅಪರೂಪಕ್ಕೆ ಒಮ್ಮೆಯಾದರೂ ಸಭೆಗಳಲ್ಲಿ ಗಂಭೀರತೆ ಕಾಣಸಿಗದು.
ತಮ್ಮ ಪಾಡಿಗೆ ತಾವು: ಜಿಲ್ಲೆಯಲ್ಲಿ ಬೇಸಿಗೆಗೆ ಮುನ್ನವೇ ತಲೆದೋರಿರುವ ಕುಡಿಯುವ ನೀರಿನ ಬವಣೆ ಸೇರಿದಂತೆ ಗಂಭೀರ ವಿಷಯಗಳ ಮೇಲೆ ಸಭೆಯಲ್ಲಿ ಚರ್ಚೆ ಸಾಗಿತ್ತು. ಅದ್ಯಾವುದರ ಪರಿವೇ ಇಲ್ಲದಂತೆ ಅಧಿಕಾರಿಗಳು ತಮ್ಮ ಪಾಡಿಗೆ ಆಕಳಿಕೆ, ತೂಕಡಿಕೆ ಮತ್ತು ಮೊಬೈಲ್ ಸಂಭಾಷಣೆಯಲ್ಲಿ ನಿರತರಾಗಿದ್ದರು.
ಅಧ್ಯಕ್ಷ ಪೀಠ ಅಲಂಕರಿಸಿದ್ದ ರಾಜು ಅವರಾಗಲೀ, ಜಿಪಂ ಆಡಳಿತಕ್ಕೆ ಚುರುಕು ಮುಟ್ಟಿಸಲು ಪಣ ತೊಟ್ಟಿರುವ ಸಿಇಒ ಡಾ.ವೆಂಕಟೇಶ್ ಅವರಾಗಲೀ ಅಧಿಕಾರಿಗಳ ಚಲನವಲನ ಗಮನಿಸುವ ಗೋಜಿಗೆ ಹೋಗಲಿಲ್ಲ. ಕಂಡೂ ಕಾಣದಂತಾಗಿದ್ದು ವಿಪರ್ಯಾಸದ ಸಂಗತಿ.
ಕೆಲವರಂತೂ ಕುಳಿತಲ್ಲೇ ಸಾಕಷ್ಟು ಹೊತ್ತು ನಿದ್ರೆ ಕಳೆದೇಬಿಟ್ಟರು. ಫೋಟೋ ಕ್ಲಿಕ್ಕಿಸುತ್ತಿದ್ದಂತೆಯೇ ಕಣ್ಣು ಬಿಟ್ಟು, ಹೌಹಾರಿದರು. ಮತ್ತೆ ಕೆಲವರು ಕ್ಯಾಮೆರಾ ಕಣ್ಣುಗಳನ್ನು ಕಂಡರೂ ಮೊಬೈಲ್ ಸಂಭಾಷಣೆ ಮುಂದುವರೆಸಿ ಸಭಾ ಗಾಂಭಿರ್ಯಕ್ಕೆ ಚ್ಯುತಿ ತಂದರು.