ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಇಂದು ದೊಡ್ಡಬಳ್ಳಾಪುರ ತಾಲೂಕು ಬಂದ್

Vishwanath S
Updated On : 13 Feb 2014, 1:30 am

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಘೋಷಣೆಗೆ ಆಗ್ರಹಿಸಿ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ನೇತೃತ್ವದಲ್ಲಿ ಗುರುವಾರ ದೊಡ್ಡಬಳ್ಳಾಪುರ ತಾಲೂಕು ಬಂದ್ ಕರೆ ನೀಡಿರುವ ಹಿನ್ನಲೆಯಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ಬಂದ್‌ಗೆ ಈಗಾಗಲೇ ಹತ್ತಾರು ಸಂಘಟನೆಗಳು ಬೆಂಬಲ ಸೂಚಿಸಿದ್ದು, ತಾಲೂಕಿನ ಹೋಬಳಿ ಕೇಂದ್ರಗಳೂ ಸೇರಿದಂತೆ ಎಲ್ಲೆಡೆ ಸಂಪೂರ್ಣ ಬಂದ್ ಆಚರಿಸಲು ಸಿದ್ಧತೆ ನಡೆದಿದೆ.
ಈ ಕುರಿತು ಹೇಳಿಕೆ ನೀಡಿರುವ ಜಿಲ್ಲಾ ಕೇಂದ್ರ ಹೋರಾಟ ಸಮಿತಿ, ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸ್ವಯಂ ಪ್ರೇರಿತರಾಗಿ ಸಂಪೂರ್ಣ ಶಾಂತಿಯುತ ಬಂದ್ ಆಚರಿಸಲು ಜನರಲ್ಲಿ ಮನವಿ ಮಾಡಲಾಗಿದೆ. ತಾಲೂಕಿನ ತೂಬಗೆರೆ, ಸಾಸಲು, ದೊಡ್ಡಬೆಳವಂಗಲ, ಕನಸವಾಡಿ, ಕಸಬಾ ಹೋಬಳಿ ಕೇಂದ್ರಗಳು ಮತ್ತು ಪ್ರಮುಖ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲೂ ರಸ್ತೆ ಸಂಚಾರ, ವ್ಯಾಪಾರ-ವಹಿವಾಟು ಬಂದ್ ನಡೆಸಲಾಗುವುದು. ಹೋಬಳಿಗಳಲ್ಲಿ ಬಂದ್ ನಡೆಸಿ ಕಾರ್ಯಕರ್ತರು ದೊಡ್ಡಬಳ್ಳಾಪುರಕ್ಕೆ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಶಾಲಾ-ಕಾಲೇಜು ರಜೆ: ಬಂದ್‌ಗೆ ತಾಲೂಕು ಖಾಸಗಿ ಶಾಲಾ ಆಡಳಿತ ಮಂಡಲಿಗಳ ಒಕ್ಕೂಟ ಬೆಂಬಲಿಸಿದ್ದು, ಬಹುತೇಕ ಶಾಲಾ-ಕಾಲೇಜುಗಳು ಬಂದ್ ಆಗಲಿವೆ. ಈಗಾಗಲೇ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಶಿಕ್ಷಣ ಸಂಸ್ಥೆಗಳು ಬಂದ್ ಅಂಗವಾಗಿ ಮುಚ್ಚಲಿವೆ.
ಪಿಯು ಪರೀಕ್ಷೆ ಮುಂದೂಡಿಕೆ: ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜು ಮತ್ತು ದೇವರಾಜ ಅರಸ್ ಪದವಿ ಪೂರ್ವ ಕಾಲೇಜುಗಳ ಕೇಂದ್ರದಲ್ಲಿ ನಡೆಯುತ್ತಿರುವ ದ್ವಿತೀಯ ಪಿಯುಸಿ ವಿಜ್ಞಾನ ಪ್ರಾಯೋಗಿಕ ಪಬ್ಲಿಕ್ ಪರೀಕ್ಷೆಗಳನ್ನು ಬಂದ್ ಅಂಗವಾಗಿ ಮುಂದೂಡಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಪ.ಪೂ.ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರು, ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಕೊಂಗಾಡಿಯಪ್ಪ ಕಾಲೇಜಿನಲ್ಲಿ ಫೆ.13ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಫೆ.19ಕ್ಕೆ ಮತ್ತುಫೆ.13ರಂದು ನಡೆಯಬೇಕಿದ್ದ ಪರೀಕ್ಷೆ ಫೆ.15ಕ್ಕೆ ಮುಂದೂಡಲಾಗಿದೆ.
ಏನೇನು ಸ್ತಬ್ಧ: ಖಾಸಗಿ ಬಸ್ ಮಾಲೀಕರ ಸಂಘ, ಆಟೋಚಾಲಕರು ಮತ್ತು ಮಾಲೀಕರ ಸಂಘ ಕೂಡ ಬಂದ್ ಬೆಂಬಲಿಸಿದ್ದು, ಸಾರಿಗೆ ಸಂಚಾರ ಸಂಪೂರ್ಣ ಸ್ತಬ್ಧಗೊಳ್ಳಲಿದೆ. ಮಾರುಕಟ್ಟೆ ವರ್ತಕರ ಸಂಘ, ಬೀದಿಬದಿ ವ್ಯಾಪಾರಿಗಳ ಸಂಘ, ಜವಳಿ ವರ್ತಕರು, ದಿನಸಿ ವರ್ತಕರು, ನೇಕಾರರು, ಚಿತ್ರಮಂದಿರಗಳ ಮಾಲೀಕರು, ಹೋಟೆಲ್ ಉದ್ಯಮಿಗಳು, ವಿವಿಧ ಪ್ರಗತಿಪರ ಸಂಘಟನೆಗಳು, ರಾಜಕೀಯ ಪಕ್ಷಗಳು, ರೈತ ಸಂಘಗಳು, ಕನ್ನಡಪರ, ದಲಿತ ಮತ್ತು ಮಹಿಳಾ, ವಿದ್ಯಾರ್ಥಿ ಸಂಘಟನೆಗಳು ಬಂದ್ ಬೆಂಬಲಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement