ಜಿಲ್ಲಾ ಕೇಂದ್ರಕ್ಕಾಗಿ ಆರ್ಟಿಐ ಗಾಂಧಿಗಿರಿ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ನಿರಂತರ ಧರಣಿ-ಸತ್ಯಾಗ್ರಹದ ಅಂಗವಾಗಿ ಬುಧವಾರ ತಾಲೂಕಿನ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ ನೇತೃತ್ವದಲ್ಲಿ ತಾಲೂಕು ಕಚೇರಿಯ ಮುಂದೆ ಧರಣಿ ನಡೆಸುವ ಮೂಲಕ ನ್ಯಾಯಯುತ ಬೇಡಿಕೆ ಮುಂದಿಟ್ಟು ಗಾಂಧಿಗಿರಿ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಹಿತಿ ಹಕ್ಕು ಕಾರ್ಯಕರ್ತ ಜೆ.ಆನಂದಮೂರ್ತಿ, ದೊಡ್ಡಬಳ್ಳಾಪುರಕ್ಕೆ ಈ ಹಿಂದೆಯೇ ದೊರೆಯಬೇಕಿದ್ದ ಜಿಲ್ಲಾ ಕೇಂದ್ರ ಸ್ಥಾನಮಾನ ಕೆಲ ರಾಜಕೀಯ ಇಚ್ಛಾಶಕ್ತಿ ಕೊರತೆ ಕುತಂತ್ರದಿಂದ ಕೈತಪ್ಪಿದೆ. ಈ ಬಾರಿ ಯಾವುದೇ ಕಾರಣಕ್ಕೂ ನಮಗೆ ಅನ್ಯಾಯವಾಗಲು ಬಿಡಲ್ಲ. ಸರ್ಕಾರ ಸಮನ್ವಯ ಸೂತ್ರಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ನ್ಯಾಯಯುತ ಬೇಡಿಕೆಗೆ ಸ್ಪಂದಿಸುವ ಪ್ರಾಮಾಣಿಕ ಪಾರದರ್ಶಕತೆ ಪ್ರದರ್ಶಿಸಲಿ. ಈಗಾಗಲೇ ತಾಲೂಕಿನಾದ್ಯಂತ ವ್ಯಾಪಕವಾಗಿ ಜಿಲ್ಲಾ ಕೇಂದ್ರ ಹೋರಾಟದ ಧ್ವನಿ ಕೇಳಿ ಬರುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನೂ ತೀವ್ರತೆ ಪಡೆದುಕೊಳ್ಳಲಿದ್ದು, ಜಿಲ್ಲಾ ಮಂತ್ರಿಗಳು, ಕಂದಾಯ ಇಲಾಖೆ ಮತ್ತು ರಾಜ್ಯ ಸರ್ಕಾರ ಕೂಡಲೇ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಘೋಷಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರಾದ ಎನ್.ಲಕ್ಷ್ಮೀನಾರಾಯಣ್, ರಾಜೇಂದ್ರಕುಮಾರ್, ಜಿಲ್ಲಾ ಕೇಂದ್ರ ಹೋರಾಟ ಸಮಿತಿಯ ಕೆ.ಎಂ.ಹನುಮಂತರಾಯಪ್ಪ, ಎಂ.ಕೃಷ್ಣಮೂರ್ತಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾ ಕೇಂದ್ರ ಹೋರಾಟ ಸಮಿತಿಯ ಮುಖಂಡರು ಮತ್ತು ಕಾರ್ಯಕರ್ತರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಮುಂದುವರೆಯಲಿದೆ ಧರಣಿ: ಜಿಲ್ಲಾ ಕೇಂದ್ರ ಘೋಷಣೆಯಾಗುವವರಿಗೆ ಸತ್ಯಾಗ್ರಹ ನಡೆಸುವ ಎಚ್ಚರಿಕೆ ನೀಡಿರುವ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಅಡಿಯಲ್ಲಿ ಶುಕ್ರವಾರ ಮಡಿವಾಳ ಮಾಚಿದೇವರ ಸಂಘ ಪ್ರತಿಭಟನೆ ನೇತೃತ್ವ ವಹಿಸಲಿದೆ. ಅದೇ ರೀತಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆ ,ಸೋಮವಾರ ಕರ್ನಾಟಕ ರಾಜ್ಯ ದಲಿತ ವಿಮೋಚನಾ ಸೇನೆ, ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ, ಬುಧವಾರ ತಾಲೂಕು ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ, ಗುರುವಾರ ತಾಲೂಕು ಕನ್ನಡ ಯುವ ಶಕ್ತಿ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ-ಚಳವಳಿ ಮುಂದುವರೆಯಲಿದೆ ಎಂದು ಪ್ರಕಟಿಸಿದೆ.