ಮಾವು ಬೆಳೆಗೆ ಮತ್ತೊಂದು ನೋವು
ರಾಮನಗರ: ಬೂದಿ ರೋಗ ಮತ್ತು ಜಿಗಿ ಹುಳು ಬಾಧೆಯಿಂದ ಬಚಾವಾಗಿದ್ದ ಮಾವಿನ ಬೆಳೆಗೆ ಇದೀಗ ಮತ್ತೊಂದು ಕಂಟಕ ಎದುರಾಗಿದೆ. ಸಮೃದ್ಧವಾಗಿ ಕಚ್ಚಿದ್ದ ಮಾವಿನ ಹೂಗಳು ಮಾರಕ ಹಾಪ್ಪರ್ ಕೀಟಬಾಧೆಯಿಂದ ಉದುರುತ್ತಿದ್ದು, ಮಾವು ಉತ್ಪಾದನೆ ಗಣನೀಯ ಕುಸಿತದ ಆತಂಕ ಎದುರಾಗಿದೆ.
ಸತತ 3 ವರ್ಷ ಕಾಡಿದ ಭೀಕರ ಬರದ ನಡುವೆಯೂ ಮಾವಿನ ಮರಗಳು ಈ ಬಾರಿ ಸಮೃದ್ಧವಾಗಿ ಹೂ ಕಚ್ಚಿದ್ದವು. ಹಾಪ್ಪರ್ ಕೀಟಬಾಧೆಯಿಂದ ಹೂಗಳೆಲ್ಲಾ ಉದುರುತ್ತಿದ್ದು, ಗೊಂಚಲು ಜೋನಿಯಾಗಿವೆ. ಬಂಪರ್ ಬೆಳೆಯ ನಿರೀಕ್ಷೆಗೆ ಕೀಟಬಾಧೆ ಕುತ್ತು ತಂದೊಡ್ಡಿದೆ.
ಹೂ ಕಚ್ಚುವ ಹಂತದಲ್ಲೇ ಬೂದಿ ರೋಗ ಮತ್ತು ಜಿಗಿ ಹುಳು ಬಾಧೆ ವ್ಯಾಪಕವಾಗಿ ಕಾಣಿಸಿಕೊಂಡಿತ್ತು. ಬಳಿಕ ರೋಗ ಹತೋಟಿಗೆ ಬಂದಿತ್ತು. ಮರಗಳಲ್ಲಿ ಹೇರಳವಾಗಿ ಕಚ್ಚಿದ್ದ ಹೂಗಳಿಂದ ರೈತರು ಅಧಿಕ ಲಾಭದ ಕನಸು ಕಟ್ಟಿಕೊಂಡಿದ್ದರು. ಈಗ ಅದೆಲ್ಲ ನುಚ್ಚು ನೂರಾಗಿದೆ.
ಕೀಟಬಾಧೆ ಲಕ್ಷಣ: ಮಾವಿನ ಮರಗಳಲ್ಲಿ ಹೂ ಉದುರಿ ಬರೇ ಗೊಂಚಲು ಉಳಿಯುವುದನ್ನು ಜೋನಿ ಎಂದು ಕರೆಯಲಾಗುತ್ತಿದೆ. ಮಾವಿನ ಮರಗಳನ್ನು ಆವರಿಸಿರುವ ಹಾಪ್ಪರ್ ಕೀಟಗಳು ಮಕರಂದವನ್ನೆಲ್ಲಾ ಹೀರಿ ಹೂವನ್ನು ನಿಸ್ತೇಜಗೊಳಿಸಿ, ಅವುಗಳ ಉದುರುವಿಕೆಗೆ ಕಾರಣವಾಗುತ್ತಿವೆ.
ಮಾರಕವಾದ ಹಾಪ್ಪರ್ ಕೀಟಗಳ ಸಂತಾನೋತ್ಪತ್ತಿಯು ಅಧಿಕ ವೇಗವಾಗಿ ಬೆಳೆಯುತ್ತದೆ. ಪ್ರಾರಂಭಿಕ ಹಂತದಲ್ಲೇ ಕೀಟಗಳನ್ನು ನಿಯಂತ್ರಿಸದಿದ್ದಲ್ಲಿ ಅಪಾಯ ಹೆಚ್ಚು. ಈ ಕೀಟಗಳು ಆವರಿಸಿದ ಮರಗಳಿಂದ ಹೂ ಮಾತ್ರವಲ್ಲದೆ ಅಂಟು ದ್ರಾವಣವೂ ನೆಲಕ್ಕೆ ಉದುರುತ್ತದೆ. ಇದೇ ಕೀಟಬಾಧೆ ಲಕ್ಷಣವಾಗಿದೆ.
ಕೀಟನಾಶಕ ಅಗತ್ಯ: ಕೀಟನಾಶಕ ಸಿಂಪಡಣೆಯಿಂದ ಹಾಪ್ಪರ್ ಕೀಟಗಳನ್ನು ನಿಯಂತ್ರಿಸಬಹುದು. ಆದರೆ, ಹೂ ಕಚ್ಚಿರುವ ಹಂತದಲ್ಲಿ ಇಂತಹ ಪ್ರಯೋಗ ಇಳುವರಿ ಕುಸಿತಕ್ಕೂ ಕಾರಣವಾಗುತ್ತದೆ ಎನ್ನುವ ತೋಟಗಾರಿಕೆ ತಜ್ಞರ ಸಲಹೆಯು ರೈತರನ್ನು ಕಂಗಾಲಾಗಿಸಿದೆ.
ಹವಾಮಾನ ವೈಪರೀತ್ಯವು ಮಾವು ಬೆಳೆ ಮೇಲೂ ಪರಿಣಾಮ ಬೀರಿದೆ. ಜನವರಿ ಮಾಸಾಂತ್ಯಕ್ಕೆಲ್ಲಾ ಮಾವಿನ ಮರಗಳು ಕಾಯಿ ಕಚ್ಚಬೇಕಿತ್ತು. ಈ ಬಾರಿ 2-3 ಹಂತದಲ್ಲಿ ಹೂ ಕಚ್ಚಿದ್ದು, ಕೆಲವೆಡೆಯಷ್ಟೇ ಸಣ್ಣ ಗಾತ್ರದ ಕಾಯಿಗಳನ್ನು ಕಾಣಬಹುದಾಗಿದೆ. ಅಂತಹ ಕಡೆ ಕೀಟನಾಶ ಸಿಂಪಡಣೆ ಸೂಕ್ತವಾಗಿದೆ.
ವಿಜ್ಞಾನಿಗಳ ಭೇಟಿ: ಮಾವಿನ ಮರದಲ್ಲಿ ಹೂ ಉದುರುವಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ತೋಟಗಾರಿಕೆ ವಿಜ್ಞಾನಿಗಳ ತಂಡ ಈಗಾಗಲೇ ರಾಮನಗರ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ತೋಟಗಾರಿಕೆ ಇಲಾಖೆ ಉನ್ನತ ಅಧಿಕಾರಿಗಳ ತಂಡವೂ ಒಂದೆರಡು ದಿನದಲ್ಲಿ ಆಗಮಿಸುವ ಸಂಭವವಿದೆ.
ಮಾವಿನ ಮರಗಳಲ್ಲಿ ಹಾಪ್ಪರ್ ಕೀಟಬಾಧೆಯಿಂದಲೇ ಹೂ ಉದುರುತ್ತಿವೆ ಎನ್ನುವುದನ್ನು ಖಚಿತಪಡಿಸಿರುವ ವಿಜ್ಞಾನಿಗಳು, ಇದುವರೆಗೆ ಔಷಧೋಪಚಾರ ಮತ್ತು ಕೀಟಬಾಧೆ ನಿಯಂತ್ರಣ ಕ್ರಮದ ಬಗ್ಗೆ ಸೂಕ್ತ ವರದಿಯನ್ನು ನೀಡಿಲ್ಲ ಎಂದು ಹೇಳಲಾಗಿದೆ.
ಮೌನ ವಹಿಸಿದ ಇಲಾಖೆ: ಬೂದಿ ರೋಗ ಮತ್ತು ಜಿಗಿ ಹುಳುಬಾಧೆ ತಲೆದೋರಿದಾಗ ತಕ್ಷಣವೇ ಎಚ್ಚೆತ್ತಿದ್ದ ತೋಟಗಾರಿಕೆ ಇಲಾಖೆಯು ರಾಮನಗರ ಜಿಲ್ಲಾದ್ಯಂತ 3-4 ವಾರದ ಹಿಂದೆಯೇ ಪ್ರಾರಂಭಗೊಂಡು, ದಿನೇ ದಿನೇ ಹೆಚ್ಚುತ್ತಿರುವ ಮಾವಿನ ಹೂ ಉದುರುವಿಕೆ ವಿಷಯದಲ್ಲಿ ಮೌನ ವಹಿಸಿದೆ.
ಈಗಾಗಲೇ ಪರಿಶೀಲನೆ ನಡೆಸಿರುವ ತೋಟಗಾರಿಕೆ ವಿಜ್ಞಾನಿ ಮುರಳಿಮೋಹನ್ ತಂಡದ ಶಿಫಾರಸು ಮತ್ತು ಇನ್ನಷ್ಟೇ ಆಗಮಿಸಬೇಕಿರುವ ಇಲಾಖೆಯ ಉನ್ನತ ಅಧಿಕಾರಿಗಳ ಸಲಹೆಯನ್ನಾಧರಿಸಿ ರೈತರಿಗೆ ಮಾಹಿತಿ ನೀಡಲಾಗುವುದು ಎಂದು ಸ್ಥಳೀಯ ಅಧಿಕಾರಿಗಳು ಹೇಳುತ್ತಾರೆ.
ಸ್ವತಃ ಔಷಧ ಸಿಂಪಡಣೆ: ತನ್ಮಧ್ಯೆ, ಗೊಂದಲದಲ್ಲಿರುವ ರೈತರು ಸ್ಥಳೀಯವಾಗಿ ದೊರೆಯುವ ಸಲಹೆಗಳನ್ನು ಆಧರಿಸಿ ಕಾನ್ಫಿಡಾರ್ ಅಥವಾ ಲ್ಯಾಮ್ಡಾ ಔಷಧವನ್ನು ಪ್ರತಿ ಲೀಟರ್ ನೀರಿಗೆ 0.5 ಮಿ.ಲೀ.ನಂತೆ ಮಿಶ್ರಣ ಮಾಡಿಕೊಂಡು ಸಿಂಪಡಣೆಗೆ ಮುಂದಾಗಿರುವುದು ಕಂಡು ಬರುತ್ತಿದೆ. ಹೂ ಹಂತದಲ್ಲಿ ಕೀಟನಾಶಕ ಸಿಂಪಡಣೆ ಉಪಯುಕ್ತವಲ್ಲ ಎನ್ನುವ ತೋಟಗಾರಿಕೆ ಅಧಿಕಾರಿಗಳ ಸಲಹೆಗೆ ರೈತರು ಸೊಪ್ಪು ಹಾಕುತ್ತಿಲ್ಲ. ಸಾಧಕ-ಬಾಧಕವನ್ನು ಲೆಕ್ಕಿಸದೆ, ಅಳಿದುಳಿದ ಹೂಗಳನ್ನಾದರೂ ಉಳಿಸಿಕೊಂಡು ಅಷ್ಟಿಷ್ಟು ಮಾವು ಉತ್ಪಾದಿಸುವ ಗುರಿ ರೈತರದ್ದಾಗಿದೆ.
-ಮತ್ತೀಕೆರೆ ಜಯರಾಮ್