ಆಂಗ್ಲ ಮಾಧ್ಯಮದ ಮೇಲೆ ವ್ಯಾಮೋಹ
ವಿಜಯಪುರ: ಎಲ್ಲರಲ್ಲೂ ಆಂಗ್ಲ ಮಾಧ್ಯಮದ ಮೇಲೆ ವ್ಯಾಮೋಹ ಹೆಚ್ಚಾದ್ದರಿಂದ ಕನ್ನಡ ಶಾಲೆಗಳು ಅದರಲ್ಲೂ ಸರ್ಕಾರಿ ಶಾಲೆಗಳು ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ ಎಂದು ದೇವನಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಬೆಟ್ಟಕೋಟೆ ನಾಗೇಶ್ ಕಳವಳ ವ್ಯಕ್ತಪಡಿಸಿದರು.
ಇವರು ಸಮೀಪದ ಯಲಿಯೂರು ಗ್ರಾಮದಲ್ಲಿ ನಡೆದ 20ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಜರ್ಮನಿ, ಇಟಲಿ ಫ್ರಾನ್ಸ್ಗಳಂತಹ ಸಾಕಷ್ಟು ದೇಶಗಳಲ್ಲಿ ತಮ್ಮದೇ ಭಾಷೆಯನ್ನು ಬಳಸಿಕೊಂಡು ಸ್ವಾಭಿಮಾನದಿಂದ ಆಗರ್ಭ ಶ್ರೀಮಂತರಾಗಿ ಬದುಕು ನಡೆಸುತ್ತಿದ್ದಾರೆ ಎಂದ ಅವರು, ಆಂಗ್ಲ ಭಾಷೆ ಒಂದು ಭಾಷೆಯಾಗಿ ಕಲಿಯೋಣ. ಅದರ ಸಂಸ್ಕೃತಿ ನಮಗೆ ಬೇಡ ಎಂದರು.
ದೇವನಹಳ್ಳಿ ಕ್ಷೇತ್ರ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ ಸಾಹಿತ್ಯ ಲೋಕದ ಕಂಪನ್ನು ಎಲ್ಲರಲ್ಲೂ ಪಸರಿಸುತ್ತಾ ಬಂದಿದೆ ಎಂದರು. ಬೆಂ.ಗ್ರಾ.ಜಿ ಕಸಾಪ ಅಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿದರು. ತಾಲೂಕು ದಂಡಾಧಿಕಾರಿ ಡಾ.ವೆಂಕಟರಾಜು ಮಾತನಾಡಿದರು. ದೇವನಹಳ್ಳಿ ಪ್ರದೇಶವು ಎಲ್ಲಾ 4 ತಾಲೂಕು ಸಂಪರ್ಕ ಕಲ್ಪಿಸುವ ಪ್ರದೇಶವಾದ್ದರಿಂದ ಇದನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂದು ಸರ್ಕಾರವನ್ನು ಒಕ್ಕೊರಲಿನಿಂದ ಒತ್ತಾಯಿಸಲಾಯಿತು. ತಾಲೂಕು ಕಸಾಪ ಅಧ್ಯಕ್ಷ ಎನ್.ರಾಜ್ಗೋಪಾಲ್, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಚಿ.ಮಾ. ಸುಧಾಕರ್ ಇದ್ದರು. ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಶಿಕ್ಷಕ ಮುದ್ದಪ್ಪ ಚಿತ್ರಕಲಾ ಪ್ರದರ್ಶನ ಹಾಗೂ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ತೆರೆದಿದ್ದರು. ಹಿಂದಿನ ಸಮ್ಮೇಳನಾಧ್ಯಕ್ಷ ಜಿ. ವಿಜಯಕುಮಾರ್, ಹಾಲಿ ಸಮ್ಮೇಳನಾಧ್ಯಕ್ಷ ನಾಗೇಶ್ ಬೆಟ್ಟಕೋಟೆ ಅವರಿಗೆ ಧ್ವಜ ಹಸ್ತಾಂತರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಮುನಿರಾಜು, ಮುನಿಯಪ್ಪ, ಇತರರು ರತ್ನಮ್ಮ ಭಾಗವಹಿಸಿದ್ದರು.