ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ ತಾಲೂಕು ಸಂಪೂರ್ಣ ಬಂದ್

Vishwanath S
Updated On : 14 Feb 2014, 12:37 pm

ದೊಡ್ಡಬಳ್ಳಾಪುರ: ಜಿಲ್ಲಾ ಕೇಂದ್ರದ ನ್ಯಾಯಯುತ ಬೇಡಿಕೆಗೆ ಇಡೀ ದೊಡ್ಡಬಳ್ಳಾಪುರ ತಾಲೂಕು ಒಕ್ಕೊರಲ ದನಿಗೂಡಿಸಿದೆ. ಪರಿಣಾಮ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಗುರುವಾರ ಕರೆ ನೀಡಿದ್ದ ದೊಡ್ಡಬಳ್ಳಾಪುರ ತಾಲೂಕು ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಬೆಳಗ್ಗೆ 6 ಗಂಟೆಯಿಂದಲೇ ತಾಲೂಕಿನ 5 ಹೋಬಳಿಗಳು ಸೇರಿದಂತೆ ದೊಡ್ಡಬಳ್ಳಾಪುರ ನಗರದಲ್ಲಿ ಜನ ಸ್ವಯಂಪ್ರೇರಿತರಾಗಿ ಬಂದ್ ಆಚರಿಸಿ ಹೋರಾಟಕ್ಕೆ ಬೆಂಬಲ ಘೋಷಿಸಿದರು. ಹಲವು ಸಂಘಟನೆಗಳ ನೂರಾರು ಕಾರ್ಯಕರ್ತರು ಇಡೀ ನಗರಾದ್ಯಂತ ಬೈಕ್ ರ್ಯಾಲಿ ನಡೆಸುತ್ತಾ ಬಂದ್ ಕುರಿತು ಜಾಗೃತಿ ಮೂಡಿಸಿದರು.
ಸ್ತಬ್ಧಗೊಂಡ ನಗರ: ಬಂದ್ ನಿಮಿತ್ತ ದೊಡ್ಡಬಳ್ಳಾಪುರ ಸ್ತಬ್ದಗೊಂಡಿತ್ತು.  ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ಸುಗಳ ಸಂಚಾರ ಸ್ಥಗಿತಗೊಳಿಸಿದ್ದವು. ಖಾಸಗಿ ಬಸ್ಸುಗಳು, ಮ್ಯಾಕ್ಸಿಕ್ಯಾಬ್, ಆಟೋ ಸೇರಿದಂತೆ ಸಾರ್ವಜನಿಕ ಸಾರಿಗೆ ಸಂಚಾರ ಬಂದ್ ಆಗಿತ್ತು.
ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲಾ-ಕಾಲೇಜುಗಳು ರಜೆ ಘೋಷಿಸಿದ್ದವು. ಚಿತ್ರಮಂದಿರಗಳು, ಹೋಟೆಲ್‌ಗಳೂ ತೆರೆಯಲಿಲ್ಲ. ಬ್ಯಾಂಕ್‌ಗಳು, ಅಂಚೆ ಕಚೇರಿ ಕೂಡ ಕಾರ್ಯನಿರ್ವಹಿಸಲಿಲ್ಲ.
ಕೈಗಾರಿಕಾ ಪ್ರದೇಶ ಬಂದ್: ಇಲ್ಲಿನ ಅರೆಪಲ್ ಪಾರ್ಕ್, ದೊಡ್ಡಬಳ್ಳಾಪುರ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ಪಾರ್ಕ್ ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ನೂರಾರು ಬಹುರಾಷ್ಟ್ರೀಯ ಕಂಪನಿಗಳು, ವಿವಿಧ ಕಾರ್ಖಾನೆಗಳು ಕೂಡ ಬಂದ್ ಬೆಂಬಲಿಸಿ ರಜೆ ಘೋಷಣೆ ಮಾಡಿದ್ದರು. ಪರಿಣಾಮವಾಗಿ ಸದಾ ಹತ್ತಾರು ಸಾವಿರ ಕಾರ್ಮಿಕರಿಂದ ತುಂಬಿರುತ್ತಿದ್ದ ಕೈಗಾರಿಕಾ ಪ್ರದೇಶ ಇಂದು ಬಿಕೋ ಎನ್ನುತ್ತಿತ್ತು.
ವಿವಿಧೆಡೆ ಪ್ರತಿಭಟನೆ: ನಗರದ ಡಿಕ್ರಾಸ್ ವೃತ್ತ, ರೈಲು ನಿಲ್ದಾಣ ಬಳಿಯ ವಿ.ಕೃ.ಗೋಕಾಕ ವೃತ್ತ, ಬಸವ ಭವನ ವೃತ್ತ, ತಾಲೂಕು ಕಚೇರಿ ವೃತ್ತ, ಸರ್.ಎಂ. ವಿಶ್ವೇಶ್ವರಯ್ಯ ವೃತ್ತ, ರಂಗಪ್ಪ ಸರ್ಕಲ್, ಜಯಚಾಮರಾಜೇಂದ್ರವೃತ್ತ ಸೇರಿದಂತೆ ಅನೇಕ ಕಡೆಗಳಲ್ಲಿ ಪ್ರತಿಭಟನಾ ಪ್ರದರ್ಶನಗಳು ನಡೆದವು. ಡಿಕ್ರಾಸ್‌ನಲ್ಲಿ ಆಟೋ ಚಾಲಕರು ಮತ್ತು ಪೊಲೀಸರ ನಡುವೆ ಸಣ್ಣ ವಾಗ್ವಾದ ನಡೆಯಿತು. ಗುರುವಾರ ನಿಗದಿಗೊಂಡಿದ್ದ ಅನೇಕ ಕಾರ್ಯಕ್ರಮಗಳೂ ಕೂಡ ಮುಂದೂಡಲ್ಪಟ್ಟಿದ್ದವು. ಬೆಳಗ್ಗಿನಿಂದ ಸಂಜೆಯವರೆಗೆ ಸಂಪೂರ್ಣ ಶಾಂತಿಯುತ ಬಂದ್ ಆಚರಿಸಲಾಯಿತು.
ಕನಸವಾಡಿಯಲ್ಲಿ ಧರಣಿ
ದೊಡ್ಡಬಳ್ಳಾಪುರ: ಜಿಲ್ಲಾ ಕೇಂದ್ರವಾಗಿ ದೊಡ್ಡಬಳ್ಳಾಪುರವನ್ನು ಘೋಷಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಕನಸವಾಡಿಯಲ್ಲಿ ಮಧುರೆ ಹೋಬಳಿಯ ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರ  ನೇತೃತ್ವದಲ್ಲಿ ನೆಲಮಂಗಲ-ದೊಡ್ಡಬಳ್ಳಾಪುರ ಹೆದ್ದಾರಿಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ, ರಸ್ತೆತಡೆ ನಡೆಸಿ ಪ್ರತಿಭಟಿಸಲಾಯಿತು. ಸರ್ಕಾರ ಈ ಕೂಡಲೇ ದೊಡ್ಡಬಳ್ಳಾಪುರ ನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸಿ.ಡಿ.ಸತ್ಯನಾರಾಯಣಗೌಡ,ಚುಂಚೇಗೌಡ, ಮುಖಂಡರಾದ ದಯಾನಂದಸ್ವಾಮಿ, ಆರ್.ಸಿ.ರಾಮಲಿಂಗಯ್ಯ, ಕೆ.ವಿ.ಪ್ರಕಾಶ್, ಕೆ.ಎಸ್.ಗಿರೀಶ್, ವಿಜಯಕುಮಾರ್ ಇದ್ದರು.
ತೂಬಗೆರೆ ಹೋಬಳಿಯಲ್ಲಿ
ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿಯಲ್ಲೂ ಬಂದ್ ಬಿಸಿ ವ್ಯಾಪಕವಾಗಿ ತಟ್ಟಿತ್ತು. ಸ್ಥಳೀಯ ಸಂಘಟನೆಗಳ ನೇತೃತ್ವದಲ್ಲಿ ಹೋಬಳಿಯಲ್ಲಿ ಸಂಪೂರ್ಣ ಬಂದ್ ಮಾಡಲಾಗಿತ್ತು. ಹಾಡೋನಹಳ್ಳಿ ಗ್ರಾಮದ ತೂಬಗೆರೆ ವೃತ್ತದಲ್ಲಿ ಟೈರುಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು. ಇಲ್ಲಿನ ಜನರ ಭಾವನೆಗಳಿಗೆ ಧಕ್ಕೆಯಾಗುವ ಹೇಳಿಕೆ ನೀಡಬಾರದು. ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಘೋಷಣೆ ಪರ ದನಿಯೆತ್ತಬೇಕು ಎಂದು ಆಗ್ರಹಿಸಿದರು.  ಘಾಟಿ ಸುಬ್ರಹ್ಮಣ್ಯ, ಪಾಲ್‌ಪಾಲ್‌ದಿನ್ನೆ, ಮೆಳೇಕೋಟೆ, ಜೆಡಿಎಸ್ ಮುಖಂಡ ಅಪ್ಪಯ್ಯಣ್ಣ ಸೇರಿದಂತೆ ಗ್ರಾಪಂ ಸದಸ್ಯರುಗಳು, ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ರಾಷ್ಟ್ರೀಯ ಹೆದ್ದಾರಿ ತಡೆ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಘೋಷಣೆಗೆ ಆಗ್ರಹಿಸಿ ತಾಲೂಕಿನ ದೊಡ್ಡಬೆಳವಂಗಲದಲ್ಲಿ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಬಂದ್ ಆಚರಿಸಿ, ರಾಷ್ಟ್ರೀಯ ಹೆದ್ದಾರಿ 207ರಲ್ಲಿ ರಸ್ತೆತಡೆ ನಡೆಸಿ ಪ್ರತಿಭಟಿಸಲಾಯಿತು.
ಹೋಬಳಿ ವ್ಯಾಪ್ತಿಯ ಹಣಬೆ, ಕೋಲಿಗೆರೆ, ದೊಡ್ಡಹೆಜ್ಜಾಜಿ, ಹಾದ್ರಿಪುರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಬಂದ್ ಯಶಸ್ವಿಯಾಗಿತ್ತು. ಗ್ರಾ.ಪಂ ಅಧ್ಯಕ್ಷ ಶಶಿಧರ್, ಮುಖಂಡರಾದ ರಾಜಗೋಪಾಲ್, ದಯಾನಂದ್, ರಾಮಾಂಜಿನಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಜಿಲ್ಲಾ ಕೇಂದ್ರ ದೊಡ್ಡಬಳ್ಳಾಪುರದ ಹಕ್ಕು...
ದೊಡ್ಡಬಳ್ಳಾಪುರ: ಜಿಲ್ಲಾ ಕೇಂದ್ರ ಘೋಷಣೆಗೆ ಆಗ್ರಹಿಸಿ ಗುರುವಾರ ಕರೆ ನೀಡಲಾಗಿದ್ದ ಬಂದ್ ಅಂಗವಾಗಿ ಇಲ್ಲಿನ ಸಿದ್ಧಲಿಂಗಯ್ಯ ವೃತ್ತ ಮತ್ತು ತಾಲೂಕು ಕಚೇರಿ ವೃತ್ತಗಳಲ್ಲಿ ನಡೆದ ಬೃಹತ್ ಸಾರ್ವಜನಿಕ ಬಹಿರಂಗ ಸಭೆಗಳನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿ, ರಾಜ್ಯದ ಇತಿಹಾಸದಲ್ಲಿ ರಚನೆಯಾಗಿರುವ ಎಲ್ಲ ಹೊಸ ಜಿಲ್ಲೆಗಳೂ ಕೂಡ ಉಪವಿಭಾಗ ಕೇಂದ್ರಗಳಲ್ಲೇ ರಚನೆಯಾಗಿವೆ. ಇದು ವೈಜ್ಞಾನಿಕವಾಗಿಯೂ ಸರಿ. ಬೆಂ.ಗ್ರಾ.ಜಿಲ್ಲೆಯ ಇಡೀ ಜಿಲ್ಲಾ ವ್ಯಾಪ್ತಿಗೆ ಹಾಲಿ ಇರುವುದು ಏಕೈಕ ಉಪವಿಭಾಗ. ಜಿಲ್ಲೆಯ 4 ತಾಲೂಕುಗಳೂ ಇದೇ ಕಂದಾಯ ವಿಭಾಗಕ್ಕೆ ಸೇರುತ್ತವೆ. ನಗರಸಭೆ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ, ಜನಸಂಖ್ಯೆ, ವಿಸ್ತೀರ್ಣ ಸೇರಿದಂತೆ ಎಲ್ಲ ಬಗೆಯ ಅಂಕಿ-ಅಂಶಗಳಲ್ಲೂ ಜಿಲ್ಲಾ ಕೇಂದ್ರವಾಗಲು ಯೋಗ್ಯ ಎನಿಸಿರುವ ಏಕೈಕ ತಾಲೂಕು ದೊಡ್ಡಬಳ್ಳಾಪುರ. ಈ ಕೂಡಲೇ ಸರ್ಕಾರ ಜಿಲ್ಲಾ ಕೇಂದ್ರದ ಅಧಿಕೃತ ಘೋಷಣೆ ಮಾಡಬೇಕೆಂದರು.
ಮಾನವ ಸರಪಳಿ: ಅವೈಜ್ಞಾನಿಕ ಕ್ರಮಕ್ಕೆ ಮುಂದಾಗಿ ದೊಡ್ಡಬಳ್ಳಾಪುರ-ದೇವನಹಳ್ಳಿ ತಾಲೂಕುಗಳ ನಡುವೆ ಜಿಲ್ಲಾ ಕೇಂದ್ರ ಸ್ಥಾಪಿಸುವ ಕುರಿತು ಜಿಲ್ಲಾಧಿಕಾರಿಗಳು ನೀಡಿರುವ ಮಾಹಿತಿ ಸಂಪೂರ್ಣ ಅವೈಜ್ಞಾನಿಕ. ಹಾಲಿ ಇರುವ ಪಟ್ಟಣ ಪ್ರದೇಶದಲ್ಲಿ ಜಿಲ್ಲಾಡಳಿತ ಕಾರ್ಯಾರಂಭ ಮಾಡಬೇಕೇ ವಿನಃ ಪಟ್ಟಣ ಪ್ರದೇಶಗಳಿಂದ 10-15 ಕಿ.ಮೀ ಹೊರಗೆ ಅಲ್ಲ. ಇಲ್ಲಿ ಎಲ್ಲರನ್ನೂ ಸಮಾಧಾನಿಸುವ ಸಮನ್ವಯ ಸೂತ್ರ ಬೇಕಿಲ್ಲ. ಜಿಲ್ಲಾ ಕೇಂದ್ರ ಅರ್ಹ ತಾಲೂಕಿಗೆ ಮಾತ್ರ ಸಲ್ಲಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಸಂಪೂರ್ಣ ವರದಿಯನ್ನು ಹೊಸದಾಗಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಹೋರಾಟ ಸಮಿತಿಯ ಎಲ್ಲ ಪದಾಧಿಕಾರಿಗಳು, ಕನ್ನಡ ಪಕ್ಷ, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ, ಕರ್ನಾಟಕರಾಜ್ಯ ರೈತಸಂಘ, ದಲಿತ ವಿಮೋಚನಾ ಸೇನೆ, ದಸಂಸ, ಹಸಿರುಸೇನೆ, ಕರವೇ ನಾರಾಯಣಗೌಡರ ಬಣ, ಭುವನೇಶ್ವರಿ ಕನ್ನಡ ಸಂಘ, ವಕೀಲರ ಸಂಘ, ಲೀಗರ್ ಫೋರಂ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಮಹಿಳೆಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement