ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಜೆಟ್‌ನಲ್ಲಿ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ

Vishwanath S
Updated On : 14 Feb 2014, 12:36 pm

ರಾಮನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಬಾರಿಯ ಬಜೆಟ್‌ನಲ್ಲಿ ಲೋಕಸಭೆ ಚುನಾವಣೆಗೆ ಮತ ಗಳಿಸುವ
ತಾತ್ಕಾಲಿಕ ಜನಪ್ರಿಯ ಕಾರ್ಯಕ್ರಮಗಳ ಹೊರತಾಗಿ ಮತ್ತಿನ್ನೇನನ್ನೂ ನಿರೀಕ್ಷಿಸಲಾಗದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.  
ಕಳೆದ ಬಜೆಟ್‌ನಲ್ಲಿ ಮಂಡಿಸಿದ ಸಾಕಷ್ಟು ಕಾರ್ಯಕ್ರಮಗಳು ಸಮರ್ಪಕವಾಗಿ ಜಾರಿಗೊಳ್ಳದೆ ಹಳ್ಳ ಹಿಡಿದಿವೆ. ಹೀಗಿರುವಾಗ ಪ್ರಸಕ್ತ ಬಜೆಟ್‌ನಲ್ಲಿ ಘೋಷಿಸಲ್ಪಡುವ ಕಾರ್ಯಕ್ರಮಗಳ ಬಗ್ಗೆ ಭರವಸೆ ಮೂಡುವುದಾದರೂ ಹೇಗೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.  
ಅಧಿಕಾರಿಗಳು ಆತುರಾತುರವಾಗಿ ಸಿದ್ಧಪಡಿಸಿದ ವರದಿಯನ್ನು ಓದುವುದಷ್ಟೇ ಸಿದ್ದರಾಮಯ್ಯ ಬಜೆಟ್. ಸ್ವತಃ ಅವರು ಕಸರತ್ತು ನಡೆಸಿ, ಸಿದ್ಧಪಡಿಸಿರುವುದು ಏನೂ ಇರಲಾರದು. ಈ ಬಜೆಟ್‌ನಿಂದ ರಾಜ್ಯದ ಅಭಿವೃದ್ಧಿಗೆ ಹೇಳಿಕೊಳ್ಳುವ ಕೊಡುಗೆ ಸಿಗದು ಎಂದು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ ಹುದ್ದೆಯ ಕಾರ್ಯಭಾರದ ಒತ್ತಡ ಮತ್ತು ಜವಾಬ್ದಾರಿಗಳ ನಡುವೆ ಹಣಕಾಸು ಖಾತೆ ನಿಭಾಯಿಸಲು ಸಮಯಾವಕಾಶ ಸಿಗುತ್ತಿಲ್ಲವೆಂದು ಸ್ವತಃ ಸಿದ್ದರಾಮಯ್ಯ ತಿಳಿಸಿದ್ದಾರೆ. ಹಾಗಾದರೆ ಅವರು ಹಣಕಾಸು ಖಾತೆಯನ್ನು ಬೇರೆ ಯಾರಿಗಾದರೂ ವಹಿಸಬಹುದಲ್ಲವೇ ಎಂದರು.  
ಭರಪೂರ ಕಾರ್ಯಕ್ರಮ: ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರ  ಉತ್ಸಾಹ, ಓಡಾಟವನ್ನು ಗಮನಿಸಿದರೆ ಈ ಬಾರಿ ಬಜೆಟ್‌ನಲ್ಲಿ ರಾಮನಗರ ಜಿಲ್ಲೆಗೆ ಭರಪೂರ ಕಾರ್ಯಕ್ರಮಗಳ ಘೋಷಣೆ ಆಗಬಹುದು ಎಂದು ಕುಮಾರಸ್ವಾಮಿ ತಿಳಿಸಿದರು.
ಸಿದ್ದರಾಮಯ್ಯ ಅವರ ಮೇಲೆ ಒತ್ತಡ ತಂದು ರಾಮನಗರ ಜಿಲ್ಲೆಗೆ ಘೋಷಣೆ ಮಾಡಿಸುತ್ತಿರುವ ಕಾರ್ಯಕ್ರಮಗಳು ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆಯನ್ನೇ ಗುರಿಯಾಗಿಸಿಕೊಂಡಿರುತ್ತವೆ. ಅದರ ವಿನಃ ಬೇರೆ ಉದ್ದೇಶವಿಲ್ಲ ಎಂದು ಛೇಡಿಸಿದರು.
ಹೊಸ ಸಂಪ್ರದಾಯ: ಜಿಲ್ಲಾ ಉಸ್ತುವಾರಿ ಸಚಿವರಾದವರು ಜಿಲ್ಲಾ ಮಟ್ಟದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸುವುದು ವಾಡಿಕೆ. ಅದನ್ನು ತಾಲೂಕು ಮಟ್ಟದಲ್ಲಿ ನಡೆಸಲು ಮುಂದಾಗುವ ಮೂಲಕ ಡಿ.ಕೆ. ಶಿವಕುಮಾರ್ ಹೊಸ ಸಂಪ್ರದಾಯಕ್ಕೆ ಮುಂದಡಿ ಇಟ್ಟಿದ್ದಾರೆ ಎಂದು ಅವರು ಗೇಲಿ ಮಾಡಿದರು.
ನಾನು ಮುಖ್ಯಮಂತ್ರಿ ಆಗಿದ್ದಾಗ, ಸಂಸದನಾಗಿದ್ದಾಗ ಸಾತನೂರು ಕ್ಷೇತ್ರದಲ್ಲಿ ಅಭಿವೃದ್ಧಿ ಕೈಗೊಳ್ಳಲು ಮುಂದಾದ ಸಂದರ್ಭದಲ್ಲಿ ಆ ಕ್ಷೇತ್ರದ ಶಾಸಕರಾಗಿದ್ದ ಶಿವಕುಮಾರ್ ಯಾವ ಮಟ್ಟಕ್ಕೆ ಸಹಕಾರ ನೀಡಿದರು. ಯಾವ ರೀತಿ ನಡೆಸಿಕೊಂಡರು ಎನ್ನುವುದನ್ನು ಜನತೆಯೇ ಕಂಡಿದ್ದಾರೆ ಎಂದರು.
ಈಗ ಅದೇ ಶಿವಕುಮಾರ್ ಮತ್ತು ಸುರೇಶ್ ರಾಮನಗರ ಕ್ಷೇತ್ರದ ಅಭಿವೃದ್ಧಿಗೆ ಒತ್ತಾಸೆಯಾಗುವ ನಾಟಕವಾಡುತ್ತಿದ್ದಾರೆ. ಅವರಿಂದ ರಾಮನಗರ ಕ್ಷೇತ್ರಕ್ಕೆ ಆಗಬೇಕಿರುವುದು ಏನೂ ಇಲ್ಲ. ಶಾಸಕನಾಗಿ ನಾನಿಲ್ಲ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿರುವೆ ಎಂದು ಸ್ಪಷ್ಟಪಡಿಸಿದರು.
ಅಕ್ರಮ ಸಂಪರ್ಕ ಕಡಿತ: ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಕ್ರಮ ಸಂಪರ್ಕಗಳು ಹೆಚ್ಚಾಗಿವೆ. ಇದೇ ನೀರನ್ನು ರೇಷ್ಮೆ ನೂಲು ಬಿಚ್ಚಾಣಿಕೆ ಕೇಂದ್ರಗಳೂ ದುರ್ಬಳಕೆ ಮಾಡಿಕೊಳ್ಳುತ್ತಿವೆ. ಅಕ್ರಮ ಸಂಪರ್ಕಗಳನ್ನು ಕಡಿತಗೊಳಿಸದ ಹೊರತು ಸಮರ್ಪಕ ನೀರು ಪೂರೈಕೆ ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.  
ಅಕ್ರಮ ಸಂಪರ್ಕ ಕಡಿತಕ್ಕೆ ಮುಂದಾಗುವ ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅಕ್ರಮ ಸಂಪರ್ಕ ಪಡೆದ ರೇಷ್ಮೆ ನೂಲು ಬಿಚ್ಚಾಣಿಕೆ ಕೇಂದ್ರಗಳಿಗೆ ಕಾಂಗ್ರೆಸ್ ಮುಖಂಡರದ್ದೇ ಕುಮ್ಮಕ್ಕಿದೆ. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸರ್ಕಾರದ ವೈಫಲ್ಯವೇ ಕಾರಣ ಎಂದು ಅವರು  ಆರೋಪಿಸಿದರು.
ಡಿಕೆಶಿಗೆ ಸವಾಲ್: ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರು ರಾಮನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಕಾಳಜಿ ತೋರುವಂತೆ ಮಾತನಾಡುತ್ತಿದ್ದಾರೆ. ಮತಕ್ಕಾಗಿ ಓಲೈಕೆ ನಡೆಸುವ ಬದಲು ಅಕ್ರಮ ನೀರಿನ ಸಂಪರ್ಕ ಕಡಿತಕ್ಕೆ ಮುಂದಾಗುವ ಅಧಿಕಾರಿಗಳಿಗೆ ರಕ್ಷಣೆ ನೀಡಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ನೂಲು ಬಿಚ್ಚಾಣಿಕೆ ಕೇಂದ್ರಗಳಿಂದ ನೀರು ದುರ್ಬಳಕೆ ಮತ್ತು ಅಕ್ರಮ ಸಂಪರ್ಕಗಳ ಕಡಿತದ ಹೊರತು ನೂರು ಕೊಳವೆ ಬಾವಿಗಳನ್ನು ಕೊರೆಸಿದರೂ ರಾಮನಗರದಲ್ಲಿ ನೀರಿನ ಬವಣೆ ನೀಗಿಸಲಾಗದು. ಈ ವಿಷಯದಲ್ಲಿ ಶಿವಕುಮಾರ್ ಅವರು ಜನಪರ ಕಾಳಜಿ ಮತ್ತು ಬದ್ಧತೆ ತೋರಲಿ ಎಂದು ಅವರು ಆಗ್ರಹಿಸಿದರು.
ಖಾತೆಯಲ್ಲಿ ವೈಫಲ್ಯ: ಇಂಧನ ಸಚಿವರಾಗುತ್ತಿದ್ದಂತೆಯೇ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ತಂದೇ ಬಿಟ್ಟೆ ಎನ್ನುವಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಶಿವಕುಮಾರ್ ಅವರು ಸಾಕಷ್ಟು ವೈಫಲ್ಯ ಕಂಡಿದ್ದಾರೆ. 1 ತಾಸು ಹೆಚ್ಚಿಸಿದ ತ್ರೀಫೇಸ್ ವಿದ್ಯುತ್ತನ್ನು ರಾತ್ರಿ ವೇಳೆ ನೀಡಿ, ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿ ಕಾರಿದರು.
ಇಂಧನ ಸಚಿವರ ತವರಿನಲ್ಲೇ ರಾತ್ರಿ ವೇಳೆ ನೀರು ಹಾಯಿಸುವಾಗ ರೈತ ಮಹಿಳೆ ಮೇಲೆ ಕರಡಿ ದಾಳಿ ನಡೆಸಿದೆ. ರಾಮನಗರ ಜಿಲ್ಲೆಯಲ್ಲಿ ವನ್ಯ ಜೀವಿಗಳ ಹಾವಳಿ ಹೆಚ್ಚಿದೆ. ತ್ರೀಫೇಸಸ್ವಿದ್ಯುತ್ತನ್ನು ಹಗಲು ವೇಳೆ ವಿಸ್ತರಿಸಲು ಸಚಿವರಿಗೆ ಸಮಸ್ಯೆಯಾದರೂ ಏನು ಎಂದು ಅವರು ಪ್ರಶ್ನಿಸಿದರು. ಗೋಷ್ಠಿಯಲ್ಲಿ ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು, ಶಾಸಕ ಅಪ್ಸರ್ ಆಗಾ, ಮಾಜಿ ಶಾಸಕ ಕೆ.ರಾಜು, ಕೆ. ದೇವೇಗೌಡ ಹಾಜರಿದ್ದರು.
ಬಹುಶ: ಹಾಸನದಲ್ಲೇ ಸ್ಪರ್ಧೆ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತಮ್ಮ ರಾಜಕೀಯ ಜೀವನದ ಕಟ್ಟ ಕಡೆಯ ಚುನಾವಣೆಯನ್ನು ಬಹುಶಃ ಸ್ವಕ್ಷೇತ್ರ ಹಾಸನದಿಂದಲೇ ಎದುರಿಸಲಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಕ್ಷೇತ್ರದಲ್ಲೇ ಸ್ಪರ್ಧಿಸಿ ಎನ್ನುವ ಒತ್ತಡವನ್ನು ಹಾಸನ ಮತ್ತು ಬೆಂಗಳೂರು ಗ್ರಾಮಾಂತರ ಉಭಯ ಕ್ಷೇತ್ರಗಳ ಕಾರ್ಯಕರ್ತರು ದೇವೇಗೌಡರ ಮೇಲೆ ಹೇರುತ್ತಿದ್ದಾರೆ. ಹೀಗಾಗಿ ಅವರ ಹೆಸರು ಎರಡೂ ಕಡೆ ಹರಿದಾಡುತ್ತಿದೆಯಷ್ಟೇ ಎಂದರು. ಇನ್ನು 2-3 ದಿನದಲ್ಲಿ ಲೋಕಸಭೆ ಕ್ಷೇತ್ರವಾರು ಮುಖಂಡರ ಸಭೆ ನಡೆಸಿ, ರಾಜ್ಯದ ಎಲ್ಲ 28 ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ನಂತರ ಪಟ್ಟಿ ಬಿಡುಗಡೆಯಾಗಲಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement