ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನಿರ್ಲಕ್ಷ್ಯ ವಹಿಸಿದರೆ ವ್ಯಾಪಕ ಹೋರಾಟ

Vishwanath S
Updated On : 14 Feb 2014, 11:34 am

ದೊಡ್ಡಬಳ್ಳಾಪುರ: ಜನರ ಬೇಡಿಕೆಗಳನ್ನು ಸರ್ಕಾರ ಲಘುವಾಗಿ ತೆಗೆದುಕೊಂಡರೆ ಅಥವಾ ಹೋರಾಟಗಳನ್ನು ಹತ್ತಿಕ್ಕುವ ವ್ಯವಸ್ಥಿತ ಪಿತೂರಿ ನಡೆಸಿದರೆ ಚಳವಳಿ ಗಂಭೀರ ಸ್ವರೂಪ ಪಡೆಯಲಿದೆ ಎಂದು ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.
ಶುಕ್ರವಾರ ಇಲ್ಲಿನ ತಾಲೂಕು ಮಡಿವಾಳ ಮಾಚಿದೇವರ ಸಂಘದ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಘೋಷಣೆಗೆ ಆಗ್ರಹಿಸಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರಂಗಸ್ವಾಮಿ, ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವಾಗಬೇಕು ಎಂಬುದು ಇಂದು-ನಿನ್ನೆಯ ಬೇಡಿಕೆಯಲ್ಲ. 7 ವರ್ಷಗಳ ನಿರಂತರ ಹೋರಾಟ ಹೊಂದಿರುವ ಬೇಡಿಕೆಯಾಗಿದೆ. ನೆರೆಯ ತಾಲೂಕಿನಲ್ಲಿ ಈ ಹೋರಾಟ ಆರಂಭವಾಗಿರುವುದು ಇತ್ತೀಚೆಗೆ. ನಮ್ಮದು ನ್ಯಾಯಬದ್ಧ ಮತ್ತು ಸಾಂವಿಧಾನಿಕ ಒತ್ತಾಯ. ಸರ್ಕಾರ ಎಲ್ಲ ಬಗೆಯ ಅಂಕಿ-ಅಂಶಗಳ ಪರಿಶೀಲನೆ ನಡೆಸಿದ ನಂತರವೇ ಜಿಲ್ಲಾ ಕೇಂದ್ರ ಘೋಷಿಸಲಿ. ಯೋಗ್ಯತಾನುಸಾರ ದೊಡ್ಡಬಳ್ಳಾಪುರ ಜಿಲ್ಲೆಯಾಗಬೇಕಿದೆ ಎಂದರು.
ಕೂಡಲೇ ದೊಡ್ಡಬಳ್ಳಾಪುರ ಜನರ ಬೇಡಿಕೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಸ್ಪಷ್ಟ ಉತ್ತರ ನೀಡಬೇಕು. ಜಿಲ್ಲಾ ಕೇಂದ್ರ ಘೋಷಣೆ ವಿಚಾರದಲ್ಲಿ ಸರ್ಕಾರದ ನಿಲುವು ಸ್ಪಷ್ಟಪಡಿಸಬೇಕು. ದೊಡ್ಡಬಳ್ಳಾಪುರ ನಗರವನ್ನೇ ಜಿಲ್ಲೆಯ ಕೇಂದ್ರವಾಗಿ ಮಾಡಬೇಕು ಎಂಬ ಹಕ್ಕೊತ್ತಾಯ ಮಂಡಿಸಿದರು. ನಂತರ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಜಿಲ್ಲಾ ಕೇಂದ್ರ ಹೋರಾಟ ಸಮಿತಿಯ ಹತ್ತಾರು ಪದಾಧಿಕಾರಿಗಳು, ತಾಲೂಕು ಮಡಿವಾಳ ಮಾಚಿದೇವರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.
ಕೃತಜ್ಞತೆ: ಇದೇ ಸಂದರ್ಭದಲ್ಲಿ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಗುರುವಾರ ಕರೆ ನೀಡಿದ್ದ ದೊಡ್ಡಬಳ್ಳಾಪುರ ತಾಲೂಕು ಬಂದ್‌ಗೆ ವ್ಯಾಪಕ ಬೆಂಬಲ ಮತ್ತು ಅಭೂತಪೂರ್ವ ಪ್ರತಿಕ್ರಿಯೆ ಕೊಟ್ಟು ಬಂದ್ ಶಾಂತಿಯುತವಾಗಿ ಯಶಸ್ವಿಗೊಳಿಸಿದ ಎಲ್ಲ ನಾಗರಿಕರಿಗೆ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಕೃತಜ್‌ಞತೆ ಸಲ್ಲಿಸಿದೆ.
ಬಂದ್ ಅನ್ನು ಬೆಂಬಲಿಸಿ, ದೊಡ್ಡಬಳ್ಳಾಪುರದ ಸ್ವಾಭಿಮಾನಿ ಹೋರಾಟವನ್ನು ಸರ್ಕಾರಕ್ಕೆ ಮುಟ್ಟಿಸಿದ ವಿದ್ಯಾರ್ಥಿಗಳು, ಮಹಿಳೆಯರು, ವ್ಯಾಪಾರಸ್ಥರು, ನೇಕಾರರು, ರೈತರು, ಸರ್ಕಾರಿ ಇಲಾಖೆ ಅಧಿಕಾರಿಗಳು, ಶಾಲಾ-ಕಾಲೇಜು ಸಿಬ್ಬಂದಿ, ಕೈಗಾರಿಕಾ ಪ್ರದೇಶ ಸಿಬ್ಬಂದಿ, ಸಂಘ-ಸಂಸ್ಥೆಗಳ ಮುಖಂಡರು, ರಾಜಕೀಯ ನಾಯಕರು ಮತ್ತು ಎಲ್ಲ ಸಾರ್ವಜನಿಕರಿಗೆ ಕೃತಜ್ಞತೆ ಹೇಳಿರುವ ಸಮಿತಿ ಮುಂದಿನ ಹೋರಾಟವನ್ನೂ ಬೆಂಬಲಿಸುವಂತೆ ಮನವಿ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement