ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಜೆಟ್‌ನಲ್ಲಿ ರಾಮನಗರ ಕಡೆಗಣನೆ

Vishwanath S
Updated On : 14 Feb 2014, 11:34 am

ರಾಮನಗರ: ರಾಜ್ಯ ಬಜೆಟ್‌ನಲ್ಲಿ ಬೆಂಗಳೂರು, ಮೈಸೂರು ಸಹಿತ ನಾನಾ ನಗರ ಮತ್ತು ಜಿಲ್ಲೆಗಗಳಿಗೆ ಸಾಕಷ್ಟು ಕೊಡುಗೆಗಳು ಸಿಕ್ಕಿವೆ. ರಾಜಧಾನಿ ಮಗ್ಗುಲಲ್ಲೇ ಇದ್ದರೂ ರಾಮನಗರವನ್ನು ಸಿದ್ದರಾಮಯ್ಯ ಕೂಡ ಮರೆತಿದ್ದಾರೆ. ಮತ್ತದೇ ತಾತ್ಸಾರ ರೇಷ್ಮೆನಾಡಿನ ಜನತೆಯಲ್ಲಿ ಬೇಸರ ಮೂಡಿಸಿದೆ.  
ಭೂ ಮಾಪನ ಪೈಲಟ್ ಯೋಜನೆಗೆ ಆಯ್ಕೆಯಾದ ಐದು ಜಿಲ್ಲೆಗಳ ಪೈಕಿ ರಾಮನಗರದ ಹೆಸರು ಪ್ರಸ್ತಾಪವಾಗಿದ್ದಷ್ಟೇ ಪುಣ್ಯ. ಅದರ ಹೊರತಾಗಿ ಯಾವೊಂದು ವಿಶೇಷ ಕಾರ್ಯಕ್ರಮದಲ್ಲೂ ಈ ಜಿಲ್ಲೆ ಹೆಸರು ಅಪ್ಪಿತಪ್ಪಿಯೂ ಸಿದ್ದರಾಮಯ್ಯ ಬಾಯಲ್ಲಿ ಬರಲೇ ಇಲ್ಲ.
ಕಹಿ ಉಣಬಡಿಸಿದರು: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಮತ ಗಳಿಕೆಗೆ ಎಲ್ಲ ಸಮುದಾಯದವರ ಮೂಗಿಗೂ
ತುಪ್ಪ ಸವರುವ ಕೆಲಸವಷ್ಟೇ ನಡೆದಿದೆ. ಅಂತಹ ಒಂದಿಷ್ಟು ಕಾರ್ಯಕ್ರಮಗಳು ಯಥಾ ಪ್ರಕಾರ ಈ ಜಿಲ್ಲೆಗೂ ಅನ್ವಯ. ಇನ್ನುಳಿದಂತೆ ಜಿಲ್ಲೆ ಜನತೆಗೆ ಉಣಬಡಿಸಿದ್ದೆಲ್ಲವೂ ಕಹಿಯೇ ಆಗಿದೆ.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆಪರೇಷನ್ ಕಮಲದಿಂದ ತೆಕ್ಕೆಗೆ ಬಿದ್ದ ಚನ್ನಪಟ್ಟಣ ಹೊರತುಪಡಿಸಿದ ರಾಮನಗರ ಜಿಲ್ಲೆ ಕಡೆಗಣಿಸಲ್ಪಟ್ಟಿತ್ತು. ತಾವು ಮಂಡಿಸಿದ ಸತತ ಎರಡೂ ಆಯವ್ಯಯಗಳಲ್ಲಿ ಸಿದ್ದರಾಮಯ್ಯ ಅವರು ರಾಮನಗರ ಜಿಲ್ಲೆಗೆ ಕವಡೆ ಕಾಸಿನ ಕಿಮ್ಮತ್ತನ್ನಷ್ಟೇ ನೀಡಿದ್ದಾರೆ.
ಕಾಣದ ಗತ ವೈಭವ: ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಸ್ತಿತ್ವಕ್ಕೆ ಬಂದ ರಾಮನಗರ ಜಿಲ್ಲೆಗೆ ಭರಪೂರ ಕಾರ್ಯಕ್ರಮಗಳ ಕೊಡುಗೆ ಸಿಕ್ಕಿತ್ತು. ಅನುದಾನ ಹಂಚಿಕೆಯಲ್ಲಿ ತಾರತಮ್ಯದ ಆರೋಪವಿದ್ದರೂ ಸಹಸ್ರಾರು ಕೋಟಿ ರು. ಅನುದಾನ ಹರಿದು ಬಂದಿತ್ತು.  
ಆಗ ಘೋಷಣೆಯಾದ ಯೋಜನೆಗಳ ಪೈಕಿ ರು.350 ಕೋಟಿ ವೆಚ್ಚದ ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಇನ್ನೂ ಚಾಲನೆ ಸಿಕ್ಕಿಲ್ಲ. ಜಿಲ್ಲಾಸ್ಪತ್ರೆ ಸ್ಥಳಾಂತರ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಜಿಲ್ಲಾಡಳಿತ ಭವನವಿನ್ನೂ ಪೂರ್ಣಗೊಂಡಿಲ್ಲವೆನ್ನುವ ಕೊರುಗು ಕಾಡುತ್ತಿದೆ.
ಬರದ ಜಿಲ್ಲೆಗೆ ಬರೆ: ರಾಮನಗರ ಜಿಲ್ಲೆಯನ್ನು ಸತತ ಮೂರು ವರ್ಷದಿಂದಲೂ ಭೀಕರ ಬರ ಕಾಡಿದೆ. ಈ ಬಾರಿ ಎಲ್ಲ ನಾಲ್ಕೂ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದ್ದು, ಬರದ ಬೇಗೆ ನೀಗಿಸುವ ನಿಟ್ಟಿನಲ್ಲಿ ಯಾವುದೇ ಪ್ರಮುಖ ಯೋಜನೆಗಳನ್ನು ಪ್ರಕಟಿಸಲಾಗಿಲ್ಲ.
ಮಳೆಗಾಲದಲ್ಲಷ್ಟೇ ಹರಿಯುವ ಶಿಂಷಾ ನದಿಯಿಂದ ಕನಕಪುರ ಕ್ಷೇತ್ರದ ಸಾತನೂರು ಮತ್ತು ರಾಮನಗರದ ಕೈಲಾಂಚ ಹೋಬಳಿಗಳ ಕೆರೆಗಳನ್ನು ತುಂಬಿಸುವ ಯೋಜನೆಯನ್ನಷ್ಟೇ ಘೋಷಿಸಲಾಗಿದೆ. ಇಗ್ಗಲೂರು
ಬ್ಯಾರೇಜ್ ಅಚ್ಚುಕಟ್ಟು, ಕಾವೇರಿ-ಕಣ್ವ ಯೋಜನೆಗೇ ನೀರು ಪೂರೈಕೆ ಸಾಲದೆನ್ನುವಾಗ ಶಿಂಷಾದಿಂದಲೇ ಮತ್ತೊಂದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಎದುರಾಗಿದೆ.  
ಸುಗಂಧಿತ ಅಡಕೆ ಮೇಲಿನ ತೆರಿಗೆಯನ್ನು ಗಣನೀಯವಾಗಿ ಇಳಿಸಿದ ಸಿದ್ದರಾಮಯ್ಯ, ಹಳೆ ಮೈಸೂರು ಭಾಗದಲ್ಲಿ ಪ್ರಮುಖ ತೋಟಗಾರಿಕೆ ಬೆಳೆಯಾಗಿರುವ ತೆಂಗು ಬೆಳೆ ಉಳಿಸುವ ಮತ್ತು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾಳಜಿ ವಹಿಸಿಲ್ಲ ಏಕೆ ಎನ್ನುವ ಪ್ರಶ್ನೆ ಇಲ್ಲಿನ ರೈತರನ್ನು ಕಾಡುತ್ತಿದೆ.
ಸಿಟ್ಟು ಯಾರ ಮೇಲೆ: ರಾಮನಗರ ಎಂದಾಕ್ಷಣ ಎಚ್.ಡಿ. ಕುಮಾರಸ್ವಾಮಿ ಹೆಸರು ಕಾಣುತ್ತದೆ. ಇದೀಗ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಈ ಜಿಲ್ಲೆಯಲ್ಲಿ ಪ್ರಾಬಲ್ಯ ಸಾಧಿಸಲು ಹವಣಿಸುತ್ತಿದ್ದಾರೆ. ಇಬ್ಬರ ಪೈಕಿ ಯಾರ ಮೇಲಿನ ಸಿಟ್ಟಿಗೆ ಸಿದ್ದರಾಮಯ್ಯ ರಾಮನಗರ ಕಡೆಗಣಿಸಿದ್ದಾರೋ ತಿಳಿಯದಾಗಿದೆ.
ಬಜೆಟ್‌ನಲ್ಲಿ ರಾಮನಗರ ಕಡೆಗಣನೆ ಕುಮಾರಸ್ವಾಮಿಗೆ ಲಾಭವಾದರೆ, ಶಿವಕುಮಾರ್‌ಗೆ ಹಿನ್ನಡೆ ತಂದಿದೆ. ಸಾಕಷ್ಟು ಕಾರ್ಯಕ್ರಮ ಮಂಜೂರು ಮಾಡಿಸಿ, ಈ ಜಿಲ್ಲೆಯಲ್ಲಿ ಪ್ರಭುತ್ವ ಸಾಧಿಸುವ ಶಿವಕುಮಾರ್ ಆಸೆಗೆ ಸಿದ್ದರಾಮಯ್ಯ ತಣ್ಣೀರು ಎರೆಚಿದ್ದಾರೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.  
ಇದು ಡಿಕೆಶಿ ವೈಫಲ್ಯ
ಕಾಂಗ್ರೆಸ್ ಸರ್ಕಾರದಲ್ಲಿ ಪ್ರಭಾವಿ ಸಚಿವ ಎನಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ತಮ್ಮದೇ ಉಸ್ತುವಾರಿಯಲ್ಲಿರುವ ತವರು ಜಿಲ್ಲೆಗೆ ಬಜೆಟ್‌ನಲ್ಲಿ ಹೇಳಿಕೊಳ್ಳುವಂತಹ ಕೊಡುಗೆಗಳನ್ನು ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಸಿದ್ದರಾಮಯ್ಯ ಅವರ ಈ ಬಜೆಟ್‌ನಲ್ಲಿ ಮಣ್ಣೂ ಇಲ್ಲ. ಪ್ರತಿಕ್ರಿಯಿಸಲೂ ಬೇಸರವಾಗುವಷ್ಟು ಅಸಹ್ಯಕರ ಬಜೆಟ್ ಇದಾಗಿದೆ.
 -ಎಚ್.ಸಿ.ಬಾಲಕೃಷ್ಣ, ಜೆಡಿಎಸ್ ಶಾಸಕ.


-ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement