'ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನೂ ಪ್ರಧಾನಿಯಾಗಲು ಸಾಧ್ಯ'
ಆನೇಕಲ್ಲು: ಭಾರತೀಯ ಜನತಾ ಪಕ್ಷ ಜನ ಸಾಮಾನ್ಯರ ಪಕ್ಷವಾಗಿದ್ದು ಸಾಮಾನ್ಯ ಕಾರ್ಯಕರ್ತನೊಬ್ಬ ಪ್ರಧಾನಿ ಹುದ್ದೆಗೆ ಏರಲು ಸಾಧ್ಯ ಎನ್ನುವುದಾದರೇ ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಮಾಜಿ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದ್ದಾರೆ. ಅವರು ಆನೇಕಲ್ಲಿನ ತಾಲೂಕು ಕ:ಕೇರಿ ಸಮೀಪ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಚಾಯ್ ಪೇ ಚರ್ಚಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದೇಶವನ್ನಾಳುವವರಿಗೆ ಸಮಗ್ರತೆ, ಅಖಂಡತೆ ಹಾಗೂ ಅಭಿವೃದ್ಧಿ ಪಥದ ಕ್ರಿಯಾಶೀಲ ಆಲೋಚನೆಗಳಿರಬೇಕು. ಬರೆದುಕೊಟ್ಟ ಭಾಷಣವನ್ನು ಬಾಲಿಷವಾಗಿ ಓದುವ ವ್ಯಕ್ತಿಗಳಿಂದ ಈ ದೇಶವನ್ನು ಮುನ್ನಡೆಸಲು ಅಸಾಧ್ಯ ಎಂದರು. ವಿದ್ಯಾವಂತ ಸಮುದಾಯ ಈ ದೇಶವನ್ನು ಭ್ರಷ್ಟಾಚಾರ ಮುಕ್ತ, ಬಲಿಷ್ಠ ರಾಷ್ಟ್ರವನ್ನಾಗಿಸಲು ಮುಂದೆ ಬರಬೇಕೆಂದು ಕರೆ ನೀಡಿದ ಅವರು ದೇಶದ ಬಹು ರಾಜ್ಯಗಳಲ್ಲಿ ಬಿಜೆಪಿ ತನ್ನ ಶಕ್ತಿಯನ್ನು ವೃದ್ಧಿಸಿಕೊಂಡಿದ್ದು ನರೇಂದ್ರ ಮೋದಿ ಅಲೆಯು ಎಲ್ಲ ಕಡೆ ವಿಜೃಂಭಿಸುತ್ತಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಉತ್ತಮ ಆಡಳಿತಕ್ಕೆ ನಾಂದಿ ಹಾಡಬೇಕೆಂದು ಮನವಿ ಮಾಡಿದರು. ಮುಖಂಡರಾದ ನಾರಾಯಣಪ್ಪ, ರಾಜರತ್ನಂ, ಮಧು, ಕೆ. ನಾಗರಾಜು, ಶಿವರಾಂ, ಎಂ.ಆರ್. ಯಲ್ಲ್ಪಪ್ಪ, ರಾಮಚಂದ್ರ, ರಾಮಕೃಷ್ಣ ಇದ್ದರು.
ಘಾಟಿ ಸುಬ್ರಹ್ಮಣ್ಯದಲ್ಲಿ ವೈಭವದ ತೆಪ್ಪೋತ್ಸವ
ದೊಡ್ಡಬಳ್ಳಾಪುರ: ತಾಲೂಕಿನ ಸುಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಘಾಟಿ ಶ್ರೀಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ವೈಭವದ ತೆಪ್ಪೋತ್ಸವ ಕಾರ್ಯಕ್ರಮ ನಡೆಯಿತು. ಕ್ಷೇತ್ರದ ಐತಿಹಾಸಿಕ ಕಲ್ಯಾಣಿಯಲ್ಲಿ ತೆಪ್ಪದ ಮೇಲೆ ನಿರ್ಮಿಸಿದ್ದ ತೇಲುವ ಮಂಟಪದಲ್ಲಿ ಶ್ರೀಸ್ವಾಮಿಯ ಉತ್ಸವ ಮೂರ್ತಿಯನ್ನಿಟ್ಟು ಸಂಭ್ರಮದ ತೆಪ್ಪದ ಮೆರವಣಿಗೆ ಏರ್ಪಡಿಸಲಾಗಿತ್ತು. ಕಲ್ಯಾಣಿಯ ಒಂದು ಬದಿಯಿಂದ ಮತ್ತೊಂದು ಬಂದಿಗೆ ನೀರಿನಲ್ಲಿ ಉತ್ಸವ ನಡೆಸಲಾಯಿತು. ನಾದಸ್ವರ ಸೇವೆಯ ಮೂಲಕ ಕಲಾವಿದರು ತೆಪ್ಪೋತ್ಸವಕ್ಕೆ ಕಳೆ ತಂದಿತ್ತರು. ಇದೇ ಸಂದರ್ಭದಲ್ಲಿ ಕ್ಷೇತ್ರದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ದೊಡ್ಡಬಳ್ಳಾಪುರ ಮತ್ತು ಬೆಂಗಳೂರಿನ ಹಲವಾರು ಕಲಾವಿದರಿಂದ, ಪುಟಾಣಿ ಮಕ್ಕಳಿಂದ ಭಾರತೀಯ ಸಾಂಸ್ಕೃತಿಕ ಕಲಾ ಪ್ರಕಾರಗಳ ಅನಾವರಣ ನಡೆಯಿತು.
ಜಗಳ ಕೊಲೆಯಲ್ಲಿ ಅಂತ್ಯ
ನೆಲಮಂಗಲ: ಅಕ್ಕ ತಮ್ಮನ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಪಟ್ಟಣದ ರಾಯನ್ನಗರದಲ್ಲಿ ಗುರುವಾರ ರಾತ್ರಿ ನಡೆದಿದೆ. ಕೊಲೆಯಾದವಳನ್ನು ಆಯಿಷಾ (22) ಎಂದು ಗುರುತಿಸಲಾಗಿದೆ. ಈಕೆಗೂ ಆರೋಪಿಯಾದ ತಮ್ಮ ಸಿಖಂದರ್ ಪಾಷ (21) ನಿಗೂ ಮನೆಯಲ್ಲಿ ಅಕ್ಕ ಆಯಿಷಾ ಮಾಡಿರುವ ಸಾಲದ ವಿಷಯ ಹಾಗೂ ನಿನ್ನ ನಡತೆ ಸರಿಯಿಲ್ಲ ಎಂದು ಪ್ರಾರಂಭವಾದ ಜಗಳ ವಿಕೋಪಕ್ಕೆ ಹೋದ ಪರಿಣಾಮ ಆತ ಚಾಕುವಿನಿಂದ ಆಕೆಯ ಕತ್ತುಕೊಯ್ದ ಪರಿಣಾಮ ಆಯಿಷಾ ಸಾವನ್ನಪ್ಪಿದ್ದಾಳೆ. ಈ ಬಗ್ಗೆ ಮಾಹಿತಿ ಪಡೆದ ಪಟ್ಟಣದ ಸಬ್ಇನ್ಸ್ಪೆಕ್ಟರ್ ಸಂದೀಪ್ ಆಕೆಯ ತಮ್ಮ ಆರೋಪಿ ಸಿಖಂದರ್ ಪಾಷನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಇಂದು ರಥೋತ್ಸವ
ದೊಡ್ಡಬಳ್ಳಾಪುರ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಫೆ.15ರ ಶನಿವಾರ ತೇರಿನಬೀದಿಯಲ್ಲಿ ನಡೆಯಲಿದೆ. ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ದೇವಾಲಯದಲ್ಲಿ ತಾಲೂಕು ಆಡಳಿತದ ನೇತೃತ್ವದಲ್ಲಿ ಬ್ರಹ್ಮರಥೋತ್ಸವ ನಡೆಯುತ್ತಿದೆ.
ನಾಟಕೋತ್ಸವ
ದೊಡ್ಡಬಳ್ಳಾಪುರ: ಇಲ್ಲಿನ ಶ್ರೀಪ್ರಸನ್ನ ಲಕ್ಷ್ಮೀವೆಂಕಟರಮಣಸ್ವಾಮಿ ಜಾತ್ರಾ ಸಾಂಸ್ಕೃತಿಕ ಸಮಿತಿಯ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅನಿಕೇತನ ಟ್ರಸ್ಟ್ ಸಹಯೋಗದಲ್ಲಿ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಅಂಗವಾಗಿ 2 ದಿನಗಳ ನಾಟಕೋತ್ಸವ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಫೆ.15ರ ಶನಿವಾರ ಮತ್ತು 16ರ ಭಾನುವಾರ ನಡೆಯಲಿದೆ.