ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮರಳು ದಿಬ್ಬ ಕುಸಿದು ಕಾರ್ಮಿಕ ಸಾವು

Vishwanath S
Updated On : 14 Feb 2014, 11:34 am

ಚನ್ನಪಟ್ಟಣ: ಮರಳು ದಿಬ್ಬ ಕುಸಿದು ಮರಳು ತುಂಬುತ್ತಿದ್ದ ಕಾರ್ಮಿಕ ಸಾವಿಗೀಡಾಗಿರುವ ಘಟನೆ ತಾಲೂಕಿನ ಹೊಡಿಕೆ ಹೊಸಹಳ್ಳಿ ಗ್ರಾಮದ ಕೆರೆಯಲ್ಲಿ ಶುಕ್ರವಾರ ಬಳಿಗ್ಗೆ ಸಂಭವಿಸಿದೆ.
ಗ್ರಾಮದ ನಾಗರಾಜು(40) ಮೃತ ವ್ಯಕ್ತಿಯಾಗಿದ್ದು, ಶುಕ್ರವಾರ ಮುಂಜಾನೆ ಮರಳು ತುಂಬುತ್ತಿರುವಾಗ ದೊಡ್ಡ ಗಾತ್ರದ ದಿಬ್ಬ ಕುಸಿದು ಮರಳಿನಡಿ ಹೂತು ಹೋಗಿದ್ದಾನೆ. ಸ್ಥಳೀಯರು ಆಗಮಿಸಿ ಈತನನ್ನು ಮೇಲೆತ್ತಲು ಶ್ರಮಿಸಿದರಾದರೂ ಮರಳು ಗುಂಡಿಯಿಂದ ಹೊರ ತೆಗೆಯುವ ವೇಳೆಗೆ ಈತ ಮೃತಪಟ್ಟಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ಶವಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಕ್ರಮ ಸಾಗಣೆ ಮಾಹಿತಿ ಇತ್ತು: ಹೊಡಿಕೆಹೊಸಹಳ್ಳಿ ಗ್ರಾಮದ ಕೆರೆಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ತಾಲೂಕು ಆಡಳಿತಕ್ಕೆ ಗ್ರಾಮಸ್ಥರು ಮಾಹಿತಿ ನೀಡಿದ್ದರಾದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪ ಎಸಗಿದ್ದಾರೆ.
ಕಳೆದ ವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನಡೆದ ಸಭೆಯಲ್ಲಿ ಹೊಡಿಕೆ ಹೊಸಹಳ್ಳಿಯ ನಾಗರಾಜು ಎಂಬವರು ಕೆರೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯ ಬಗ್ಗೆ ಮಾಹಿತಿ ನೀಡಿದ್ದರು. ಆದರೂ ತಹಸೀಲ್ದಾರ್ ಕ್ರಮ ಕೈಗೊಂಡಿಲ್ಲ ಎಂದು ನಾಗರಾಜು ಆರೋಪಿಸಿದ್ದಾರೆ.
ನಿಲ್ಲದ ಮರಳು ದಂಧೆ: ಸರ್ಕಾರದ ನಿಷೇಧದ ನಡುವೆಯೂ ಅಕ್ರಮ ಮರಳು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದ್ದು, ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕುವಲ್ಲಿ ತಾಲೂಕು ಆಡಳಿತದ ವೈಫಲ್ಯವನ್ನು ಇಂಥ ಘಟನೆಗಳು ಆಗಾಗ್ಗ ಎತ್ತಿ ತೋರಿಸುತ್ತಿದ್ದರೂ ದಂಧೆಗೆ ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ಮೌನ ತಳೆದಿರುವುದು ಸಾಕಷ್ಟು ಗುಮಾನಿಗೆ ಎಡೆ ಮಾಡಿಕೊಟ್ಟಿದೆ.
ಮರಳೆಂಬ ಮರಣ ಮೃದಂಗ: 2000ನೇ ಇಸವಿಯಲ್ಲಿ ಮರಳು ಗಣಿಗಾರಿಕೆಯನ್ನು ಸರ್ಕಾರ ನಿಷೇಧಿಸಿದೆಯಾದರೂ, ಕಾನೂನಿನ ಕಣ್ಣಿಗೆ ಮಣ್ಣೆರಚಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಅಮಾಯಕ ಕೂಲಿ ಕಾರ್ಮಿಕರನ್ನು, ಸಾರ್ವಜನಿಕರನ್ನು ಬಲಿ ತೆಗೆದುಕೊಳ್ಳುತ್ತಿದೆ. 2002ನೇ ಇಸವಿಯಿಂದ ಅಕ್ರಮ ಮರಳು ಗಣಿಗಾರಿಕೆ ಅಮಾಯಕರನ್ನು ಬಲಿ ಪಡೆಯಲಾರಂಭಿಸಿದ್ದು ಇದುವರೆಗೆ 32 ಮಂದಿ ಮರಳು ದಂಧೆಯಿಂದ ಸಾವಿಗೀಡಾಗಿರುವ ಮಾಹಿತಿ ಹೊರಜಗತ್ತಿಗೆ ಗೋಚರವಾಗಿದೆ. ಇನ್ನು ಕೆಲ ಪ್ರಕರಣಗಳು ಹಾಗೇ ಮುಚ್ಚಿ ಹೋಗಿದ್ದು ಇದಕ್ಕೆ ಲೆಕ್ಕ ಇಲ್ಲ. ಮರಳುದಿಣ್ಣೆ ಕುಸಿದು ಸಾವಿಗೀಡಾಗುವ ಕಾರ್ಮಿಕರ ಕುಟುಂಬದವರನ್ನು ಅಧಿಕಾರಿಗಳು ಮತ್ತು ಮರಳು ದಂಧೆ ನಡೆಸುತ್ತಿರುವ ಬಲಾಢ್ಯರು ಪುಸಲಾಯಿಸಿ ಅಪಘಾತ, ಮಣ್ಣುಗುಡ್ಡೆ ಕುಸಿತ ಎಂದು ಪ್ರಕರಣ ಬದಲಾಯಿಸಿ ನುಣುಚಿಕೊಳ್ಳುತ್ತಿದ್ದಾರೆ.
ಅಧಿಕಾರಿಗಳೇ ನೇರ ಹೊಣೆ
ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯಿಂದ ಸಂಭವಿಸಿರುವ ಸಾವು ನೋವಿಗೆ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೇ ನೇರ ಹೊಣೆ ಎಂದು ಮರಳು ಗಣಿಗಾರಿಕೆ ವಿರುದ್ಧ ಕಳೆದ 26 ದಿನಗಳಿಂದ ನಿರಂತರ ಸತ್ಯಾಗ್ರಹ ನಡೆಸುತ್ತಿರುವ ಸಿದ್ದರಾಮ ಹೆಗ್ಗಡೆ ಆರೋಪಿಸಿದ್ದಾರೆ. ಅಕ್ರಮ ಮರಳು ಗಣಿಗಾರಿಕೆಯ ಬಗ್ಗೆ ಮಾಹಿತಿ ಇದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮರಳು ಗಣಿಗಾರಿಕೆಯನ್ನು ನಿಯಂತ್ರಿಸುವಲ್ಲಿ ವಿಫಲಗೊಂಡಿರುವ ಆ ಭಾಗದ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ ಹಾಗೂ ಮಾಹಿತಿ ನೀಡಿದರೂ ಸ್ಥಳಕ್ಕೆ ತೆರಳದ ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೆಗ್ಗಡೆ ಆರೋಪಿಸಿದ್ದಾರೆ. ಹಲವಾರು ವರ್ಷಗಳಿಂದ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ ಸ್ಥಾನದಲ್ಲಿ ಇರುವ ತಿಮ್ಮಪ್ಪ ಅಕ್ರಮ ಮರಳು ಗಣಿಗಾರಿಕೆಗೆ ಸಹಕಾರ ನೀಡುತ್ತಿದ್ದು ಇವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಬೇಕು. ಈ ಸಾವಿನಿಂದಾಗಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದ ನಾಗರಾಜು ಕುಟುಂಬ ಅನಾಥವಾಗಿದ್ದು ಸರ್ಕಾರ ತನ್ನ ವೈಫಲ್ಯದ ಹೊಣೆ ಹೊತ್ತು ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement