ಡಿಕೆಎಸ್ ಸಹೋದರರದು ಬರೀ ಬೊಗಳೆ: ಕೆ.ರಾಜು ಆರೋಪ
ರಾಮನಗರ: ಜಿಲ್ಲೆಗೆ ನೀರಾವರಿ ಯೋಜನೆ ಅನುಷ್ಠಾನ ವಿಷಯದಲ್ಲಿ ಡಿಕೆಎಸ್ ಸಹೋದರರು ಬರೇ ಬೊಗಳೆ ಬಿಡುವುದರಲ್ಲೇ ಕಾಲಹರಣ ಮಾಡುತ್ತಿದ್ದು, ಮತ ಗಳಿಕೆಗೆ ಹುನ್ನಾರ ನಡೆಸಿದ್ದಾರಷ್ಟೇ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ರಾಜು ಆರೋಪಿಸಿದರು.
ಭೀಕರ ಬರದಿಂದ ಕಂಗೆಟ್ಟಿರುವ ರಾಮನಗರ ಜಿಲ್ಲೆಗೆ ಸಮಗ್ರ ನೀರಾವರಿ ಕಲ್ಪಿಸುತ್ತೇವೆನ್ನುವ ಅವರ ಘೋಷಣೆ ಹುಸಿಯಾಗಿರುವುದಕ್ಕೆ ಪ್ರಸಕ್ತ ಆಯವ್ಯಯದಲ್ಲಿ ಆ ವಿಷಯ ಎಲ್ಲೂ ಪ್ರಸ್ತಾಪ ಆಗದಿರುವುದೇ ಸಾಕ್ಷಿ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ರಾಮನಗರ ಜಿಲ್ಲೆಯ ರೆಡಿಮೇಡ್ ಗಂಡುಗಳು ತಾವೆಂದು ಹೇಳಿಕೊಂಡಿರುವ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರು ತವರು ಜಿಲ್ಲೆಗೆ ಬಜೆಟ್ನಲ್ಲಿ ವಿಶೇಷ ಕೊಡುಗೆಗಳನ್ನು ಕೊಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅವರು ಹೇಳಿದರು. ಡಿಕೆಎಸ್ ಸಹೋದರರು ಮಾಧ್ಯಮಗಳಿಗೆ ಹೇಳಿಕೆ ಕೊಡುವುದರಲ್ಲಿ ನಿಸ್ಸೀಮರೇ ಹೊರತು ಯಾವುದೇ ಒಂದು ಯೋಜನೆಯನ್ನೂ ಅನುಷ್ಠಾನಕ್ಕೆ ತಂದ ನಿದರ್ಶನವಿಲ್ಲ. ನೀರಿನ ವಿಚಾರದಲ್ಲಿ ರಾಜಕಾರಣ ಮಾಡದೆ, ಇನ್ನಾದರೂ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಮುಂದಾಗಲಿ ಎಂದು ರಾಜು ಆಗ್ರಹಿಸಿದರು.
ಜೆಡಿಎಸ್ ಪ್ರತಿಭಟನೆ: ಗ್ರಾಮೀಣ ಭಾಗದಲ್ಲಿ ಕೊಳವೆ ಬಾವಿ ಬತ್ತಿದ್ದು, ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಜಿಲ್ಲಾಧಿಕಾರಿ ಡಾ.ವಿಶ್ವನಾಥ್ ಅನುಮತಿ ನಿರಾಕರಿಸಿದ್ದು, ಈ ವಿರುದ್ಧ ಜೆಡಿಎಸ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಟ್ಯಾಂಕರ್ ಇಲ್ಲವೇ ಸೂಕ್ತ ಮೂಲದಿಂದ ಸಮರ್ಪಕ ಕುಡಿಯುವ ನೀರು ಪೂರೈಕೆ ವಿಷಯದಲ್ಲಿ ಕ್ರಮ ಕೈಗೊಳ್ಳಲು 10 ದಿನ ಗಡುವು ನೀಡಲಾಗುವುದು. ಒಂದೊಮ್ಮೆ ವಿಫಲರಾದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದು ಅವರು ತಿಳಿಸಿದರು.
ಮತದಾರರಿಗೆ ಕೃತಜ್ಞತೆ: ರಾಮನಗರದ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ (ಪಿಎಲ್ಡಿಬಿ) ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಲ್ಲ 11 ಸ್ಥಾನಗಳು ಜೆಡಿಎಸ್ ಪಾಲಾಗಿದ್ದಾರೆ. ಪಕ್ಷದ ವತಿಯಿಂದ ವಿಜೇತರಿಗೆ ಅಭಿನಂದನೆ ಮತ್ತು ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ರಾಜು ಹೇಳಿದರು.