ದೇವನಹಳ್ಳಿ ತಾಲೂಕು ಅರ್ಹತೆ ದೊಡ್ಡಬಳ್ಳಾಪುರದವರಿಗೇನು ಗೊತ್ತು?
ದೇವನಹಳ್ಳಿ: ದೊಡ್ಡಬಳ್ಳಾಪುರ ಜಿಲ್ಲಾ ಹೋರಾಟ ಸಮಿತಿಯವರು ತಮ್ಮ ತಾಲೂಕಿನ ಅರ್ಹತೆ ಬಗ್ಗೆ ಸತ್ಯ ಸುಳ್ಳು
ಏನಾದರೂ ಹೇಳಿಕೊಳ್ಳಲಿ, ಆದರೆ ದೇವನಹಳ್ಳಿ ತಾಲೂಕಿನ ಅರ್ಹತೆ ಬಗ್ಗೆ ಮಾತನಾಡುವ ಅಧಿಕಾರ ಅವರಿಗಿಲ್ಲ. ಆದರೆ ವಾಸ್ತವಾಂಶ ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಜಿಲ್ಲಾ ಹೋರಾಟ ಸಮಿತಿ ಮುಖ್ಯ ಸಂಚಾಲಕ ಬಿ.ಕೆ.ಶಿವಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದೊಡ್ಡಬಳ್ಳಾಪುರ ಜಿಲ್ಲಾ ಹೋರಾಟಗಾರರು ಇತರರ ತಟ್ಟೆಯಲ್ಲಿ ಬಿದ್ದಿರುವ ನೊಣವನ್ನು ತೋರಿಸುತ್ತಾರೆ. ಆದರೆ ಅವರ ತಟ್ಟೆಯಲ್ಲಿರುವ ಜಿರಳೆ ಅವರ ಕಣ್ಣಿಗೆ ಕಾಣಿಸುವುದಿಲ್ಲ. ಆದ್ದರಿಂದ ಜಿಲ್ಲಾ ಕೇಂದ್ರಸ್ಥಾನ ಮಾಡುವುದು ಸರ್ಕಾರದ ಕೆಲಸ. ಸರ್ಕಾರಕ್ಕೆ ಎಲ್ಲ ವಾಸ್ತವಾಂಶವನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಮುಂದಾದರೂ ವಾಸ್ತವಾಂಶ ಅರಿತು ಹೇಳಿಕೆ ಕೊಡಲಿ ಎಂದು ಶಿವಪ್ಪ ತಿಳಿಸಿದರು. ದೇವನಹಳ್ಳಿ ತಾಲೂಕು ಜಿಲ್ಲಾ ಕೇಂದ್ರವಾಗಲು ಇರುವ ಅರ್ಹತೆಯ ಬಗ್ಗೆ ಹಿರಿಯ ಹೋರಾಟಗಾರರಾದ ಸೂ.ರಂ.ರಾಮಯ್ಯ, ಹಾಗೂ ಬಿ.ಕೆ.ಶಿವಪ್ಪ ಜಂಟಿಯಾಗಿ ಹೇಳಿಕೆ ನೀಡಿದ್ದಾರೆ.
1. ದೇವನಹಳ್ಳಿಯಲ್ಲಿ ನಾಡಪ್ರಭು ಕೆಂಪೇಗೌಡರ ವಂಶಸ್ಥರು ಜನಿಸಿದ ತಾಲೂಕು, ಅಲ್ಲದೆ ಸಾಹಿತಿಗಳಾದ ನವರತ್ನ ರಾಮರಾಯರು, ತಾ.ಪು. ವೆಂಕಟರಾಂ, ವಿ. ಸೀತಾರಾಮಯ್ಯ, ಕೆ.ಎಸ್.ನಿಸಾರ್ ಅಹಮದ್, ಗಾಯಕರಾದ ಸಿ. ಅಶ್ವತ್ಥ್, ಡಿ.ವಿ. ಗುಂಡಪ್ಪ ಅಲ್ಲದೆ ಮೈಸೂರು ಹುಲಿ ಟಿಪ್ಪೂ ಸುಲ್ತಾನ್ ಜನ್ಮ ನೀಡಿದ ತಾಲೂಕು.
2. ವಿಶ್ವ ಭೂಪಟದಲ್ಲಿ ಗುರುತಿಸಲು ಅರ್ಹವಾಗಿರುವ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ.
3. ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಉದ್ದಿಮೆಗಳು ತಲೆ ಎತ್ತುತ್ತಿರುವುದು ಇದೇ ತಾಲೂಕಿನಲ್ಲಿ.
4. ರಾ.ಹೆದ್ದಾರಿಗಳಾದ ನಂ.7 ಮತ್ತು ನಂ. 207 ಹಾದೂ ಹೋಗುವುದು ದೇವನಹಳ್ಳಿಯ ಮೂಲಕ
5. ಜಿಲ್ಲಾ ಮಟ್ಟದ ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ.
6. ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ನೂತನ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿದೆ.
7. ರಾಜ್ಯದ ಯಾವುದೇ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಇಲ್ಲದೆ ಇರುವ 30ಕ್ಕೂ ಹೆಚ್ಚು ರಾಷ್ಟ್ರೀಕೃತ ಬ್ಯಾಂಕ್ಗಳು.
8. ಎರಡು ಪುರಸಭೆಗಳನ್ನು ಹೊಂದಿರವ ಏಕೈಕ ತಾಲೂಕು.
9. ಜಿಲ್ಲೆಯಲ್ಲೇ ಅತಿ ಹೆಚ್ಚು ಹಾಲು ಉತ್ಪಾದನೆ, ರೇಷ್ಮೆ ಉತ್ಪಾದನೆ, ದ್ರಾಕ್ಷಿ ಬೆಳೆಯುವ ಪ್ರದೇಶ ಇರುವುದು ಇದೇ ತಾಲೂಕಿನಲ್ಲಿ.
10. ರಾಷ್ಟ್ರಪ್ರಶಸ್ತಿ ಪಡೆದ ದಿವಂಗತ ಶಿಲ್ಪಿ ಹನುಮಂತಾಚಾರ್ಯ ಜನಿಸಿದ್ದು ಇಲ್ಲೇ. ಇಲ್ಲಿನ ಶಿಲ್ಪಕಲಾ ಶಾಲೆ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದೆ. ಇದೇ ತಾಲೂಕಿನ ಕೊಯಿರ ಬಂಡೆಯ ಕಲ್ಲುಗಳು ಜಗತ್ ಪ್ರಸಿದ್ಧವಾಗಿದೆ.
ಇಷ್ಟೇ ಅಲ್ಲದೆ ಸರ್ಕಾರ ಕೇಳುವ ಅಭಿವೃದ್ಧಿ ಕಾರ್ಯಗಳಿಗೆ ರೈತರು ತಮ್ಮ ಜಮೀನುಗಳನ್ನು ಕೊಟ್ಟಿದ್ದಾರೆ ಎಂದು ಶಿವಪ್ಪ ತಿಳಿಸಿ ಎರಡು ತಾಲೂಕುಗಳ ಸಾಮರಸ್ಯ ಕದಡುವಂತಹ ಹೇಳಿಕೆ ನೀಡುವುದನ್ನು ದೊಡ್ಡಬಳ್ಳಾಪುರದ ಮುಖಂಡರು ನಿಲ್ಲಿಸಬೇಕು ಎಂದು ತಿಳಿಸಿದರು.