ಪ್ರತಿ ಹಳ್ಳಿಗೆ ಶುದ್ಧ ಕುಡಿಯುವ ನೀರು: ರಾಮಲಿಂಗಾರೆಡ್ಡಿ
ಆನೇಕಲ್ಲು: ಕೈಗಾರಿಕೆಗಳು, ವಾಹನ ದಟ್ಟಣೆ ಹಾಗೂ ಜನ ಸಾಂದ್ರತೆಯಿಂದಾಗಿ ಪರಿಸರ ಮಾಲಿನ್ಯ ಹಾಗೂ ಅಂತರ್ಜಲ ಕುಸಿತವೂ ಉಂಟಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಶುದ್ಧ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡುತ್ತಿದೆ. ಆಯ್ದ ಕಡೆ ಶುದ್ಧ ನೀರು ಕುಡಿಯುವ ಘಟಕ ಸ್ಥಾಪಿಸಿದ್ದು ಕೇವಲ ರು. 2 ನೀಡಿ 20 ಲೀಟರ್ ಪಡೆಯಬಹುದು ಎಂದು ಸಾರಿಗೆ ಸಚಿವ ಆರ್. ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಅವರು ಬೆಂಗಳೂರು ದಕ್ಷಿಣ ಕ್ಷೇತ್ರ ವೀವರ್ಸ್ ಕಾಲನಿ ಪಿಳ್ಳಗಾನಹಳ್ಳಿ ಹಾಗೂ ಗೊಟ್ಟಿಗೆರೆಯಲ್ಲಿ 3 ಶುದ್ಧ ಕುಡಿವ ನೀರು ಘಟಕಗಳನ್ನು ಜನತೆಗೆ ಸಮರ್ಪಿಸಿ ಮಾತನಾಡಿ, ಸಾವಿರಾರು ಅಡಿ ಕೊರೆದರೂ ಉತ್ತಮ ನೀರು ಲಭ್ಯವಿಲ್ಲದೇ ರಾಸಾಯನಿಕಗಳು ಹಾಗೂ ಖನಿಜಯುಕ್ತ ನೀರಿನಿಂದಾಗಿ ರೋಗ ರುಜಿನಗಳಿಗೆ ಕಾರಣವಾಗಿದೆ. ಹಂತ ಹಂತವಾಗಿ ಬೆಂಗಳೂರು ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಎಲ್ಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.
ಮುಖಂಡ ಜಿ.ಕೆ. ರವಿ ಮಾತನಾಡಿ ಪ್ರಾರಂಭಿಕ ಹಂತದಲ್ಲಿ 40 ಮನೆಗಳಿಗೆ ಕುಡಿಯುವ ನೀರನ ಕ್ಯಾನ್ಗಳನ್ನು ಉಚಿತವಾಗಿ ನೀಡಲಾಗಿದೆ. ಬೇಡಿಕೆಯನ್ನು ಆಧರಿಸಿ ದುಪ್ಪಟ್ಟು ಕ್ಯಾನ್ಗಳನ್ನು ವಿತರಿಸಲಾಗುವುದು. ವೀವರ್ಸ್ ಕಾಲನಿ ಸೇರಿದಂತೆ ಪಾಲಿಕೆ ವ್ಯಾಪ್ತಿಯ ಹಲವಾರು ಕಡೆ ರಸ್ತೆ ಡಾಂಬರೀಕರಣ, ಸಿಮೆಂಟ್ ರಸ್ತೆ, ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಬೀದಿ ದೀಪಗಳು, ಪಡಿತರ ಚೀಟಿ, ಆಧಾರ್ ಕಾರ್ಡ್ ಸೇರಿದಂತೆ ಮುಂತಾದ ಜನಪರ ಕಾರ್ಯಕ್ರಮಗಳು ಜನತೆಗೆ ತಲುಪಿಸಲಾಗಿದೆ ಎಂದರು.
ಅರೆಬಿನ್ನಮಂಗಲ ಹಾಲು ಡೈರಿ ಅಧ್ಯಕ್ಷರಾಗಿ ಬಿ.ಎಂ. ಜಗನ್ನಾಥ
ಸೂಲಿಬೆಲೆ: ಇಲ್ಲಿಗೆ ಸಮೀಪದ ಬೂದಿಗೆರೆ ಬಳಿ ಇರುವ ಅರೆಬಿನ್ನಮಂಗಲ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ಎಂ ಜಗನ್ನಾಥ ಹಾಗೂ ಉಪಾಧ್ಯಕ್ಷರಾಗಿ ಬಿ.ಎಂ ನಾರಾಯಣಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಹಕಾರ ಸಂಘದ ನಿರ್ದೇಶಕರಾಗಿ ಬಿ.ವಿ ವೆಂಕಟೇಶ್, ಜಿ. ವೀರಣ್ಣ, ಮುನಿಆಂಜಿನಪ್ಪ, ಬಿ.ಎನ್. ಕೃಷ್ಣಪ್ಪ,ನರಸಿಂಹಮೂರ್ತಿ, ಕೃಷ್ಣಪ್ಪ, ನಂಜಪ್ಪ, ಸುಜಾತಮ್ಮ, ಮುನಿರತ್ನಮ್ಮ ಆಯ್ಕೆಯಾಗಿದ್ದಾರೆ ಎಂದು ಸಹಕಾರ ಸಂಘದ ಕಾರ್ಯದರ್ಶಿ ಬಿ.ಎಂ. ಆನಂದ್ ತಿಳಿಸಿದ್ದಾರೆ. ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರನ್ನು ಹಲವರು ಅಭಿನಂದಸಿದ್ದಾರೆ.