ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ ಜಿಲ್ಲಾ ಹೋರಾಟಗಾರರ ಧರಣಿಗೆ ವಿರಾಮ

Rashmi Kasaragodu
Updated On : 19 Feb 2014, 2:05 am

ದೇವನಹಳ್ಳಿ: ಕಳೆದ ಒಂದು ತಿಂಗಳಿನಿಂದ ದೇವನಹಳ್ಳಿ ಜಿಲ್ಲಾ ಹೋರಾಟ ಸಮಿತಿ ಕಾರ್ಯಕರ್ತರು ನಡೆಸುತ್ತಿದ್ದ  ಹೋರಾಟ ಮತ್ತು ಧರಣಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ತೀರ್ಮಾನ ಕೈಗೊಳ್ಳಲಾಯಿತು.
ಹೋರಾಟದ ಮುಖ್ಯ ಸಂಚಾಲಕ ಬಿ.ಕೆ ಶಿವಪ್ಪ ಅವರು ಎಲ್ಲ ರಾಜಕೀಯ ಪಕ್ಷಗಳ ಮತ್ತು ಸಂಘ ಸಂಸ್ಥೆಗಳ ಅಲ್ಲದೆ ಕನ್ನಡಪರ ಹೋರಾಟಗಾರರು, ರೈತ ಸಂಘಗಳ ಹೋರಾಟಗಾರರ ಸಹಕಾರದೊಂದಿಗೆ ಕಳೆದ ಒಂದು ತಿಂಗಳಿನಿಂದ ಧರಣಿ ನಡೆಸಿದರ ಫಲವಾಗಿ ದೇವನಹಳ್ಳಿ ಮತ್ತು ಹೊಸಕೋಟೆ ತಾಲೂಕುಗಳು ಸೇರಿದಂತೆ ಪ್ರತ್ಯೇಕ ಉಪ ವಿಭಾಗಾಧಿಕಾರಿಗಳ ಕಚೇರಿ ಕಾರ್ಯ ನಿರ್ವಹಿಸುವ ಪ್ರಸ್ತಾವನೆ ಬಗ್ಗೆ ಸರ್ಕಾರ ಈಗಾಗಲೇ ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದೆ. ಈ ಕ್ರಮ ನಮ್ಮ ಹೋರಾಟದ ಮೊದಲ ಜಯದ ಸಂಕೇತವಾಗಿದೆ ಎಂದು ಮಾಜಿ ಶಾಸಕ ವೆಂಕಟಸ್ವಾಮಿ ತಿಳಿಸಿದರು.  ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆಗಳ ನೀತಿ ಸಂಹಿತೆ ಬರಲಿರುವುದರಿಂದ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳ ಕಚೇರಿ ವರ್ಗಾವಣೆ ಬಗ್ಗೆ ನಿರ್ದಿಷ್ಟ ತೀರ್ಮಾನ ಕೈಗೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಆದರೆ ಜಿಲ್ಲಾಕೇಂದ್ರವಾಗಲು ಮುಖ್ಯಮಂತ್ರಿಗಳು ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ತಾಲೂಕಿನ ಎಲ್ಲ ಕಾಂಗ್ರೆಸ್ ಮುಖಂಡರು ಒತ್ತಡ ತರಲಿದ್ದಾರೆ ಎಂದು ತಿಳಿಸಿದರು.
ವಾಪಸ್ ಪಡೆಯಲಿ: ಇದೇ ಸಂಧರ್ಭದಲ್ಲಿ ಮಾಜಿ ಶಾಸಕ ಜಿ. ಚಂದ್ರಣ್ಣ ಮಾತನಾಡಿ ಧರಣಿ ನಿಲ್ಲಿಸಿದಾಕ್ಷಣ ಹೋರಾಟಗಾರರು ಶಾಂತವಾಗಿದ್ದಾರೆ ಎಂದು ಸರ್ಕಾರವಾಗಲಿ ಅಥವ ಅಧಿಕಾರಿಗಳಾಗಲಿ ತಿಳಿಯಬಾರದು. ಯಾವುದೇ ಕ್ಷಣದಲ್ಲಿ ನಾವು ಹೋರಾಟಕ್ಕೆ ಸಿದ್ಧರಿರುತ್ತೇವೆ. ನಮ್ಮ ಬೆಂಬಲ ಸದಾ ಇರುತ್ತದೆ ಎಂದು ತಿಳಿಸಿದರು. ಬಿಜೆಪಿ ಮುಖಂಡ ದೇ.ಸೂ. ನಾಗರಾಜ್ ಮಾತನಾಡಿ ದೊಡ್ಡಬಳ್ಳಾಪುರದ ಮಾಜಿ ಶಾಸಕರು ದೇವನಹಳ್ಳಿ ತಾಲೂಕಿನ ಅರ್ಹತೆ ಬಗ್ಗೆ ಮಾತನಾಡಿರುವುದನ್ನು ವಾಪಸ್ ಪಡೆಯಬೇಕು ಎಂದರು.
ಕ್ರಮ ಕೈಗೊಳ್ಳಲಿ: ಮಾಜಿ ಶಾಸಕ ಹಾಗೂ ಹಿರಿಯ ಹೋರಾಟಗಾರರಾದ ಸೂ.ರಂ.ರಾಮಯ್ಯ ಮಾತನಾಡಿ  ಅಧಿಕಾರಿಗಳು ಹಳ್ಳಿಗಳಲ್ಲಿ ಅಧಿಕಾರ ನಡೆಸಬೇಕು. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಆದರೆ ನಗರಗಳಲ್ಲಿ ಜಿಲ್ಲಾಧಿಕಾರಿಗಳ ಮತ್ತು ಇತರ ಅಧಿಕಾರಿಗಳ ಕಚೇರಿ ಕಾರ್ಯನಿರ್ವಹಿಸುವುದು ಸಂವಿಧಾನಕ್ಕೆ ವಿರೋಧವಾಗಿದೆ. ಆದ್ದರಿಂದ ಸರ್ಕಾರ ಯಾವುದೇ ಹೋರಾಟಗಳಿಗೆ ಆಸ್ಪದ ನೀಡದೆ ದೇವನಹಳ್ಳಿಗೆ ಜಿಲ್ಲಾಧಿಕಾರಿಗಳ ಕಚೇರಿ ಸ್ಥಳಾಂತರವಾಗಲು ಕ್ರಮ ಕೈಗೊಳ್ಳಬೇಕು ಎಂದರು.
ಇದೇ ಸಂಧರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎನ್. ಶ್ರೀನಿವಾಸಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷ ಎಸ್.ಲಕ್ಷ್ಮೀನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಜಗನ್ನಾಥ್ ಮಾತನಾಡಿ ಶಿವಪ್ಪರವರ ಹೋರಾಟವನ್ನು ಅಭಿನಂದಿಸಿದರು. ಯಾವುದೇ ಸಂದರ್ಭದಲ್ಲಿ ನಮ್ಮ ಸಹಕಾರ ಇರುತ್ತದೆ ಎಂದರು. ಒಂದು ತಿಂಗಳ ಹೋರಾಟಕ್ಕೆ ಸಹಕರಿಸಿದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರನ್ನು ಮತ್ತು ಸಂಘ ಸಂಸ್ಥೆಗಳ
ಕಾರ್ಯಕರ್ತರಿಗೆ ಹೋರಾಟ ಸಮಿತಿ ಮುಖ್ಯ ಸಂಚಾಲಕ ಬಿ.ಕೆ.ಶಿವಪ್ಪ ಕೃತಜ್ಞತೆ ಸಲ್ಲಿಸಿದರು. ಸಭೆಯಲ್ಲಿ ರೈತ ಸಂಘದ ವೆಂಕಟನಾರಾಯಣಪ್ಪ, ಗೋಪಾಲಸ್ವಾಮಿ, ಎನ್. ವೀರಣ್ಣ, ಡಾ.ಮೂರ್ತಿ, ಬಿಜೆಪಿ ತಾಲೂಕು ಅಧ್ಯಕ್ಷ ರಾಜಗೋಪಾಲ್, ವಿ.ನಂದೀಶ್, ಬೂದಿಗೆರೆ ಲಯನ್ಸ್ ಸಂಸ್ಥೆಯ ರಮೇಶ್, ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಶ್ರೀನಿವಾಸಗೌಡ, ಜೆಡಿಯು ಶ್ರೀನಿವಾಸ್, ಹನುಮಂತರಾಯಪ್ಪ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement