ಗ್ರಾಮೀಣ ಅಂಚೆ ನೌಕರರನ್ನು ಕೇಂದ್ರ ಸರ್ಕಾರಿ ನೌಕರರಾಗಿ ಪರಿಗಣಿಸಿ
ದೊಡ್ಡಬಳ್ಳಾಪುರ: ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ವಿಭಾಗೀಯ ಸಂಘಟನೆ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಚೆ ನೌಕರರು 2 ದಿನಗಳಿಂದ ಇಲ್ಲಿನ ಕೇಂದ್ರ ಅಂಚೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ.
ಬುಧವಾರ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ವಿಭಾಗೀಯ ಎಐಪಿಇಡಿಇಯು ಸಂಘಟನಾ ಕಾರ್ಯದರ್ಶಿ ಡಿ.ಸಿ.ಮೋಹನ್ ಕುಮಾರ್, ಅಂಚೆ ನೌಕರರ ಸಮಸ್ಯೆಗಳು ಬಗೆಹರಿಯುವವರೆಗೆ ನಿರಂತರ ಹೋರಾಟ ನಡೆಸಲಾಗುವುದು. ಗ್ರಾಮೀಣ ಅಂಚೆ ನೌಕರರನ್ನು ಕೇಂದ್ರ ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ನೌಕರರ ಬಡ್ತಿಯನ್ನು ಸೇವಾವಧಿಯ ಆಧಾರದ ಮೇಲೆ ನೀಡಬೇಕು. ಇದರ ಮಿತಿಯನ್ನು ಶೇ.50ಕ್ಕೆ ನಿಗದಿಪಡಿಸಬೇಕು. ಅನುಕಂಪದ ಆಧಾರದಲ್ಲಿ ಇಲಾಖೇತರ ನೌಕರ ಹುದ್ದೆಗಳ ನೇಮಕಾತಿಯನ್ನು ನೂರು ಪ್ರತಿಶತಗೊಳಿಸಬೇಕು. 7ನೇ ವೇತನ ಆಯೋಗದ ರಚನೆಯಲ್ಲಿ ಗ್ರಾಮೀಣ ಅಂಚೆ ನೌಕರರ ವೇತನದ ಪರಿಷ್ಕರಣೆ ನಡೆಸಬೇಕು. ಗ್ರಾಮೀಣ ಅಂಚೆ ನೌಕರರ ಶೇ.50 ತುಟ್ಟಿಭತ್ಯೆಯನ್ನು ವೇತನದೊಂದಿಗೆ ಸೇರಿಸಬೇಕು. ಅರೆಕಾಲಿಕ, ಹೊರಗುತ್ತಿಗೆ ಮತ್ತು ಅನಿಶ್ಚಿತ ನೌಕರರನ್ನು ನಿಯಮಿತಗೊಳಿಸುವುದು ಮತ್ತು ಅವರ ವೇತನವನ್ನು ಪರಿಷ್ಕರಣೆ ಮಾಡಬೇಕು ಎಂಬುದೂ ಸೇರಿದಂತೆ 6 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಈ ಕೂಡಲೇ ಕೇಂದ್ರ ಸರ್ಕಾರ ನೌಕರ ಬೇಡಿಕೆಗಳಿಗೆ ಸ್ಪಂದಿಸಬೇಕು. ಇದು ಮಾಡು ಇಲ್ಲವೆ ಮಡಿ ಹೋರಾಟವಾಗಿದ್ದು, ನೌಕರರು ನಿರಂತರ ಶೋಷಣೆಯಿಂದ ಕಂಗೆಟ್ಟಿದ್ದಾರೆ. ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಅವಕಾಶಗಳನ್ನು ವಂಚಿಸುವ ಪ್ರಯತ್ನಗಳಾದರೆ ಗಂಭೀರ ಸ್ವರೂಪದ ಹೋರಾಟಕ್ಕೆ ಮುಂದಾಗಬೇಕಾದೀತು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಚನ್ನಪಟ್ಟಣ ವಿಭಾಗದ ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷ ಕೆ.ವಿ.ರುದ್ರಪ್ಪ, ಸಂಚಾಲಕ ಆರ್.ಎನ್.ಮೂರ್ತಿ, ಸಹ ಸಂಚಾಲಕ ಸಿ. ಗಿರಿರಾಜ್ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.
23ರಂದು ಜಿಲ್ಲಾ ಮಾವು ಬೆಳೆಗಾರರ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ
ರಾಮನಗರ: ಜಿಲ್ಲಾ ಮಾವು ಬೆಳೆಗಾರರ ಸಂಘದ ನಿರ್ದೇಶಕರ 11 ಸ್ಥಾನಗಳಿಗೆ ಫೆ. 23ರಂದು ಚುನಾವಣೆ ನಡೆಯಲಿದ್ದು, ಸಂಘದ ಸದಸ್ಯರು ತಪ್ಪದೆ ಮತ ಚಲಾಯಿಸಬೇಕು ಎಂದು ಸಂಘದ ಹಾಲಿ ಅಧ್ಯಕ್ಷ ಚಿಕ್ಕಬೈರೇಗೌಡ ಮನವಿ ಮಾಡಿದ್ದಾರೆ.
ಸಂಘದಲ್ಲಿ ಒಟ್ಟು 13 ನಿರ್ದೇಶಕ ಸ್ಥಾನಗಳಿವೆ. ಈ ಪೈಕಿ 9 ಸಾಮಾನ್ಯ, 2 ಮಹಿಳೆ, 1 ಸ್ಥಾನ ಹಿಂದುಳಿದ ವರ್ಗ ಮತ್ತು 1 ಸ್ಥಾನವು ಎಸ್ಸಿ-ಎಸ್ಟಿಗೆ ಮೀಸಲಾಗಿದೆ. ಫೆ.17ರಂದು ನಾಮ ಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ, ವರ್ಗದ ಮೀಸಲಾತಿ ಸ್ಥಾನಗಳಿಗೆ ಕ್ರಮವಾಗಿ ಬಿ. ಭರತರಾಜು ಮತ್ತು ಸಿ.ಶಿವಣ್ಣ ಈಗಾಗಲೆ ಅವಿರೋಧ ಆಯ್ಕೆಯಾಗಿದ್ದಾರೆ. ಮಹಿಳಾ ಮೀಸಲಿಗೆ ಯಾರೊಬ್ಬರು ನಾಮಪತ್ರ ಸಲ್ಲಿಸಿಲ್ಲವಾದ್ದರಿಂದ ಈ ಸ್ಥಾನಗಳಿಗೆ ಸ್ಪರ್ಧೆ ಇಲ್ಲ ಎಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇನ್ನುಳಿದ 9 ಸಾಮಾನ್ಯ ಸ್ಥಾನಗಳಿಗೆ 11 ಮಂದಿ ಸ್ಪರ್ಧಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಅರೇಹಳ್ಳಿ ಪಿಳ್ಳೇಗೌಡ ಮತ್ತು ದೊಡ್ಡಗಂಗವಾಡಿಯ ಟಿ.ಕರಿಯಪ್ಪ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ. ನಿವೃತ್ತಿ ಘೋಷಿಸಿರುವ ಅಭ್ಯರ್ಥಿಗಳು ನಾಮ ಪತ್ರ ಹಿಂಪಡೆಯದಿರುವುದರಿಂದ ಚುನಾವಣೆಗಳು ಅನಿವಾರ್ಯ ಎಂದು ಚುನಾವಣಾಧಿಕಾರಿಯಾಗಿರುವ ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಆಡಿಟ್ ಅವರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸದ್ಯ ಕಣದಲ್ಲಿ 9 ಮಂದಿ ಮಾತ್ರ ಉಳಿದಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಎಚ್.ಕೆ. ನಂಜಪ್ಪ, ಬಿ.ಎಚ್. ದೇವರಾಜು, ಸಿ.ಮಹೇಶ್, ರಾಮಚಂದ್ರೇಗೌಡ, ಎಚ್.ಪಿ. ರೇವಣ್ಣ, ಕೆ.ಪಿ.ಲವ, ಕೆ. ಶಿವಣ್ಣ, ಆರ್.ಎಸ್. ಶಿವರಾಮಯ್ಯ, ಎಸ್. ಸಿದ್ದರಾಜು ಕಣದಲ್ಲಿ ಉಳಿದುಕೊಂಡಿದ್ದು, ಚುನಾವಣೆ ಅನಿವಾರ್ಯವಾದ್ದರಿಂದ ಸದಸ್ಯರು ಮತದಾನ ದಿನದಂದು ತಪ್ಪದೆ ಮತಚಲಾಯಿಸಬೇಕು ಎಂದು ಚಿಕ್ಕಬೈರೇಗೌಡರು ಮನವಿ ಮಾಡಿದ್ದಾರೆ. ಫೆ.23ರಂದು ಬೆಳಗ್ಗೆ 9ರಿಂದ ಸಂಜೆ 4 ರವರೆಗೆ ಮತಚಲಾಯಿಸಲು ಅವಕಾಶವಿದೆ. ಎ.ಪಿ.ಎಂ.ಸಿ. ಮಾರುಕಟ್ಟೆ ಆವರಣದಲ್ಲಿರುವ ಸಂಘದ ಕಚೇರಿಯಲ್ಲಿ ಮತದಾನ ನಡೆಯಲಿದೆ ಎಂದರು. ಜಿಲ್ಲೆಯಾದ್ಯಂತ 699 ಮಂದಿ ಸಂಘದ ಸದಸ್ಯರಿದ್ದಾರೆ ಎಂದು ಅವರು ಮಾಹಿತಿ ನೀಡಿದರು.