ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನಾನು, ಡಿಕೆಶಿ ಅಭಿವೃದ್ಧಿಗೆ ಮಾತ್ರ ಮಿತ್ರರು

Rashmi Kasaragodu
Updated On : 20 Feb 2014, 2:37 am

ಕ.ಪ್ರ.ವಾರ್ತೆ    ಚನ್ನಪಟ್ಟಣ    ಫೆ.19
ನಾನು ಮತ್ತು ಡಿ.ಕೆ.ಶಿವಕುಮಾರ್ ಅಭಿವೃದ್ಧಿಗೆ ಮಾತ್ರ ಮಿತ್ರರು. ಅಭಿವೃದ್ಧಿ ಕೆಲಸಗಳೇ ಬೇರೆ ರಾಜಕಾರಣವೇ ಬೇರೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವರು ಇತ್ತೀಚಿಗೆ ನೀಡಿದ್ದ ಮಿತ್ರತ್ವದ ಹೇಳಿಕೆಗೆ ಪ್ರತಿಕ್ರಿಯಿಸಿದರು.
ತಾಲೂಕಿನ ಯಲಚಿ ಪಾಳ್ಯ ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಡಿ.ಕೆ.ಶಿವಕುಮಾರ್ ರಂತಹ ಪ್ರಭಾವಿ ಮಂತ್ರಿ ತಾಲೂಕಿನ ಅಭಿವೃದ್ಧಿಗೆ ಸಹಕರಿಸುತ್ತೇನೆ ಎಂದಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ನಾನು ಅವರೊಂದಿಗೆ ಕೈ ಜೋಡಿಸಲು ಸಿದ್ಧನಿದ್ದು ರಾಜಕೀಯ ವಿಚಾರ ಬಂದಾಗ ನಾನು ನನ್ನ ಕಾರ್ಯಕರ್ತರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಿದೆ ಎಂದರು.
ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದ ಸಹಕಾರ ಅತ್ಯಗತ್ಯವಾದುದು, ಸರ್ಕಾರವೇ ಮುಂದೆ ನಿಂತು ಸಹಕಾರ ನೀಡುತ್ತೇನೆ ಎನ್ನುತ್ತಿರುವಾಗ ಅದನ್ನು ಸದ್ಬಳಕೆ ಮಾಡಿಕೊಳ್ಳುವ ಪ್ರಾಮಾಣಿಕ ಪ್ರಯತ್ನಮಾಡುತ್ತೇನೆ. ಎಂದು ತಿಳಿಸಿದ ಅವರು ನನ್ನ ರಾಜಕೀಯ ನಿರ್ಣಯ ಸ್ಪಷ್ಟವಾಗಲು ಇನ್ನೂ ಸ್ವಲ್ಪ ಕಾಲಾವಕಾಶ ಬೇಕಿದೆ ಎಂದರು.
ಮೂರೂ ಪಕ್ಷದಿಂದ ಆಹ್ವಾನ: ಮಾಜಿ ಪ್ರಧಾನಿ ದೇವೇಗೌಡರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ ನನ್ನ ಜತೆ ಮಾತನಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಗ್ರಾಮಾಂತರದಿಂದ ಸ್ಪರ್ಧಿಸಲು ಮೂರೂ ಪಕ್ಷಗಳಿಂದಲೂ ನನಗೆ ಆಹ್ವಾನ ಬಂದಿದೆ. ಆದರೆ ನಾನು ತಾಲೂಕಿನ ಅಭಿವೃದ್ಧಿಯ ಹಿತದೃಷ್ಟಿಯಿಂದ ಲೋಕಸಭಾ ಚುನಾವಣೆಯ ವೇಳೆಗೆ ಸೂಕ್ತ ರಾಜಕೀಯ ನಿರ್ಧಾರ ತಳೆಯುವುದಾಗಿ ತಿಳಿಸಿದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ನಮ್ಮ ತಾಲೂಕು ನಿರ್ಣಾಯಕ ಪಾತ್ರ ವಹಿಸಲಿದ್ದು, ಜನಾಭಿಪ್ರಾಯಗಳನ್ನು ಸಂಗ್ರಹಿಸಿ ಒಂದು ವಾರದ ಬಳಿಕ ನಿರ್ಧಾರ ಪ್ರಕಟಿಸುವೆ ಎಂದರು. ನನಗೆ ಸಂಸದ ಸ್ಥಾನಕ್ಕೆ ಸ್ಪರ್ಧಿಸ ಬೇಕೆಂಬ ಇರಾದೆ ಇಲ್ಲ, ಆದರೆ ತಾಲೂಕಿನ ಅಭಿವೃದ್ಧಿ ನನ್ನ ಮೇಲೆ ವಿಶ್ವಾಸ ವಿಟ್ಟಿರುವ ಜನರ ಹಿತಕಾಯಲು ರಾಜಕೀಯ ನಿರ್ಧಾರ ತಳೆಯಬೇಕಾಗಿದ್ದು, ಈ ತಾಲೂಕಿನ ಜನತೆ ನೀಡುವ ತೀರ್ಮಾನದ ಮೇಲೆ ಮುಂದಿನ ಹಾದಿಯನ್ನು ನಿರ್ಧರಿಸಲಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಸ್ವಾಭಾವಿಕ ಕುಡಿಯುವ ನೀರಿನ ಯೋಜನೆ: ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ತೀವ್ರ ಗೊಂಡಿದ್ದು ಕೊಳವೆ ಬಾವಿ ಮೂಲಕ ನೀರು ಪೂರೈಕೆ ಮಾಡುವ ಯೋಜನೆಯನ್ನು ಕೈ ಬಿಟ್ಟು ಸ್ವಾಭಾವಿಕ ನೀರಿನ ಮೂಲದಿಂದ ಕುಡಿಯುವ ನೀರು ಪೂರೈಕೆಗೆ ಜಿ.ಪಂ ವತಿಯಿಂದ 180 ಕೋಟಿ ರು. ಹಣ ಮೀಸಲಿದ್ದು ಇದಕ್ಕೆ ಸರ್ವೇಕಾರ್ಯ ಆರಂಭಗೊಂಡಿದೆ ಎಂದು ಯೋಗೇಶ್ವರ್ ತಿಳಿಸಿದರು.
ಏತನೀರಾವರಿ ಯೋಜನೆಯ ಮೂಲಕ ತುಂಬಿರುವ ಕೆರೆಗಳಿಂದ ಶುದ್ಧೀಕರಿಸಿದ ನೀರನ್ನು ಗ್ರಾಮಗಳಿಗೆ ಪೂರೈಕೆ ಮಾಡಲಾಗುವುದು. ಈಗಾಗಲೇ ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೆರೆಗಳನ್ನು ಪರಿಶೀಲಿಸಿದ್ದಾರೆ. ಈ ಯೋಜನೆಗೆ ಶೀಘ್ರವಾಗಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಮುಖಂಡರಾದ ರಾಂಪುರ ಮಲುವೇಗೌಡ, ಶಿವಲಿಂಗಯ್ಯ(ಕುಳ್ಳಪ್ಪ), ಕರಿಯಪ್ಪನದೊಡ್ಡಿ ಶಿವಣ್ಣ, ಕಾರ್ಯನಿರ್ವಹಣಾಧಿಕಾರಿ ಜಯರಂಗ, ತಹಸೀಲ್ದಾರ್ ಶಿವರುದ್ರಯ್ಯ, ಕ್ಷೇತ್ರಶಿಕ್ಷಣಾಧಿಕಾರಿ ಶಿವಪ್ಪ, ತೋಟಗಾರಿಕಾ ಇಲಾಖೆ ಅಧಿಕಾರಿ ರಾಮಚಂದ್ರಯ್ಯ,  ಪಂಚಾಯತ್ರಾಜ್ ಎಂಜಿನಿಯರಿಂಗ್ ವಿಭಾಗದ ಕಿರಿಯ ಅಭಿಯಂತರ ಚಿಕ್ಕವೆಂಕಟೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.


ಅಕ್ರಮ ನನ್ನ ಗಮನಕ್ಕೆ ಬಂದಿದೆ


ಚನ್ನಪಟ್ಟಣ: ತಾಲೂಕಿನ ಜಿ.ಪಂ ಎಂಜಿನಿಯರಿಂಗ್ ವಿಭಾಗದಲ್ಲಿ ನಡೆಯುತ್ತಿರುವ ಅಕ್ರಮ ಸ್ವತಃ ನನ್ನ ಗಮನಕ್ಕೆ ಬಂದಿದ್ದು, ನಮ್ಮ ಊರಿನಲ್ಲೇ ಏನೂ ಮಾಡದೆ ಬೋರ್ವೆಲ್ ಕೊರೆಸಿ ಪಂಪು ಮೋಟರ್ ಬಿಡಿಸಿದ್ದೇವೆ ಎಂದು 10 ಲಕ್ಷ ಹಣ ಡ್ರಾ ಮಾಡಿದ್ದಾರೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಜಿ.ಪಂ ಹಗರಣದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಜಿ.ಪಂ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಸ್ಥಳೀಯ ರಾಜಕೀಯ ವ್ಯತ್ಯಾಸಗಳನ್ನು ತಮ್ಮ ಲಾಭಕ್ಕೆ ಬಳಸಿಕೊಂಡು ಅವರ ವಿರುದ್ಧ ಇವರನ್ನು ಇವರ ವಿರುದ್ಧ ಅವರನ್ನು ಎತ್ತಿ ಕಟ್ಟುವ ಕೆಲಸ ಮಾಡಿದ್ದಾರೆ. ಇವರ ಭ್ರಷ್ಟಾಚಾರದ ವಿರುದ್ಧ ನಾನು ಹೋರಾಟ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇನೆ ಎಂದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣಾಭಿವೃದ್ಧಿಗೆ ವಿವಿಧ ಲೆಕ್ಕ ಶೀರ್ಷಿಕೆಯಲ್ಲಿ ಹಣ ಬಿಡುಗಡೆ ಮಾಡುತ್ತಿದೆ. ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಅಧಿಕಾರಿಗಳು ಇದರ ಜತೆಗೆ ಎಂಎಲ್ಸಿ, ಎಂಪಿ, ಎಂಎಲ್ಎ ಗ್ರಾಂಟ್ಗಳನ್ನು ಸೇರಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಈ ಬಗ್ಗೆ ಜಾಗೃತ ದಳ ನೀಡಿರುವ ವರದಿಯನ್ನು ನಾನು ಗಮನಿಸಿದ್ದೇನೆ ಎಂದರು. ಜಿ.ಪಂ ಎಂಜಿನಿಯರಿಂಗ್ ವಿಭಾಗದ ಕಾಮಗಾರಿಗಳಲ್ಲಿ ನಡೆದಿರುವ ಕೋಟ್ಯಂತರ ರು. ಅವ್ಯವಹಾರದ ಬಗ್ಗೆ ಸಿಇಓಗೆ ಪತ್ರ ಬರೆದಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement