ಬೋನಿಗೆ ಬಿದ್ದ ಚಿರತೆ: ಗ್ರಾಮಸ್ಥರ ನಿಟ್ಟುಸಿರು
ಕ.ಪ್ರ. ವಾರ್ತೆ ದೊಡ್ಡಬಳ್ಳಾಪುರ ಫೆ.19
ಕಳೆದ ಕೆಲ ದಿನಗಳಿಂದ ತಾಲೂಕಿನ ಹುಲುಕುಡಿ ಬೆಟ್ಟದ ಸುತ್ತಮುತ್ತಲ ಗ್ರಾಮಗಳ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬುಧವಾರ ಬೆಳಗ್ಗೆ ಸೆರೆ ಸಿಕ್ಕಿದೆ. ಚಿರತೆ ಹಿಡಿಯಲು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ ಆವೇಶದಿಂದ ಆರ್ಭಟಿಸಿದೆ.
ಈಗ ಸೆರೆ ಸಿಕ್ಕಿರುವ ಚಿರತೆ 3 ವರ್ಷದ ಹೆಣ್ಣು ಚಿರತೆಯಾಗಿದೆ. ಕಳೆದ ಕೆಲ ದಿನಗಳಿಂದ ಈ ಪ್ರದೇಶದಲ್ಲಿ ಅಲ್ಲಲ್ಲಿ ಕಾಣಿಸಿಕೊಂಡು ಕೆಲ ಕುರಿ, ಮೇಕೆ, ನಾಯಿಗಳನ್ನು ತಿಂದು ಹಾಕಿತ್ತು. ಕಳೆದ ವರ್ಷ ಕೂಡ ಈ ಪ್ರದೇಶದಲ್ಲಿ ಚಿರತೆ ದಾಳಿಯಿಂದ ಜನ ಕಂಗೆಟ್ಟಿದ್ದರು. ಈ ಪ್ರದೇಶದಲ್ಲಿ ಇನ್ನೂ 4-5 ಚಿರತೆಗಳು ಇವೆ ಎಂದು ಅಂದಾಜಿಸಲಾಗಿದೆ. ಹುಲುಕುಡಿ ಬೆಟ್ಟದಲ್ಲಿ ಇರುವ ದಟ್ಟ ಅರಣ್ಯದಲ್ಲಿ ಚಿರತೆ ಸೇರಿದಂತೆ ಸಾಕಷ್ಟು ಕಾಡುಪ್ರಾಣಿಗಳು ವಾಸಿಸುತ್ತಿವೆ.
ಕಳೆದ ಕೆಲದಿನಗಳ ಹಿಂದೆ ಚಿರತೆ ಇರುವ ಕುರಿತು ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮಾಡೇಶ್ವರ ಗ್ರಾಮದಲ್ಲಿ ಬೋನನ್ನು ಇಟ್ಟು ಅದರಲ್ಲಿ ನಾಯಿಯೊಂದನ್ನು ಕಟ್ಟಿದ್ದರು. ನಾಯಿಯನ್ನ ತಿನ್ನಲು ಬಂದ ಚಿರತೆ ಬೋನಿಗೆ ಬಿದ್ದು ಸೆರೆ ಸಿಕ್ಕಿದೆ. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಸೇಯದ್ ನಿಜಾಮುದ್ದೀನ್ ಸೇರಿದಂತೆ ಇಲಾಖೆಯ ಉನ್ನತಾಧಿಕಾರಿಗಳು ಭೇಟಿ ನೀಡಿದ್ದರು.
ನಂತರ ಮಾತನಾಡಿದ ಅಧಿಕಾರಿಗಳು ಚಿರತೆಯನ್ನು ವೈದ್ಯಕೀಯ ಪರೀಕ್ಷೆ ಮಾಡಿದ ಬಳಿಕ ಅದನ್ನು ಬನ್ನೇರುಘಟ್ಟ ಅರಣ್ಯ ಅಥವಾ ಸೂಕ್ತ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಬಿಡಲಾಗುವುದು. ಈ ಪ್ರದೇಶದಲ್ಲಿ ಹಲವು ಚಿರತೆಗಳಿರುವ ಬಗ್ಗೆ ಮಾಹಿತಿ ಇರುವುದರಿಂದ ಅರಣ್ಯ ಇಲಾಖೆ ಜಾಗರೂಕವಾಗಿದೆ. ಗ್ರಾಮಸ್ಥರು ಆತಂಕ ಪಡುವಂತಿಲ್ಲ ಎಂದು ತಿಳಿಸಿದ್ದಾರೆ.