ಭರವಸೆಗೆ ಮಣಿಯಲ್ಲ, ಹೋರಾಟ ಕೈಬಿಡಲ್ಲ
ಕ.ಪ್ರ. ವಾರ್ತೆ ದೊಡ್ಡಬಳ್ಳಾಪುರ ಫೆ.19
ಯಾವುದೇ ಪೊಳ್ಳು ಭರವಸೆಗಳಿಗೆ ನಮ್ಮ ಹೋರಾಟ ಮಣಿಯೋದಿಲ್ಲ. ಬೇಡಿಕೆ ಈಡೇರುವವರೆಗೆ ಚಳವಳಿ ಕೈಬಿಡಲ್ಲ ಎಂದು ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಹೇಳಿದೆ.
ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ನಡೆಯುತ್ತಿರುವ ನಿರಂತರ ಹೋರಾಟ ಬುಧವಾರ ಕೂಡ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಯಶಸ್ವಿಯಾಗಿ ಮುಂದುವರೆದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟ ಸಮಿತಿಯ ಮುಖಂಡರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೇಂದ್ರವನ್ನಾಗಿ ದೊಡ್ಡಬಳ್ಳಾಪುರವನ್ನು ಘೋಷಿಸಬೇಕು ಎಂಬುದು ನಮ್ಮ ಹಕ್ಕೊತ್ತಾಯ. ಸರ್ಕಾರ ನಮ್ಮ ಬೇಡಿಕೆ ಈಡೇರಿಸುವವರೆಗೆ ಹೋರಾಟವನ್ನು ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಅರ್ಹತೆ ಮತ್ತು ಸರ್ಕಾರಿ ಮಾನದಂಡಗಳ ಆಧಾರದಲ್ಲಿ ದೊಡ್ಡಬಳ್ಳಾಪುರ ಯಾವ ರೀತಿಯಲ್ಲಿ ಸೂಕ್ತ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಯಾವುದೇ ಬಗೆಯ ಅಂಕಿ-ಅಂಶಗಳ ಆಧಾರವನ್ನು ಬೇಕಿದ್ದರೂ ಸರ್ಕಾರ ತೆಗೆದುಕೊಳ್ಳಲಿ. ಆದರೆ ನ್ಯಾಯಯುತ ಮತ್ತು ಪಾರದರ್ಶಕವಾಗಿ ಈ ಹಿಂದೆ ಜಿಲ್ಲಾ ಕೇಂದ್ರಗಳನ್ನು ರೂಪಿಸಲು ಅನುಸರಿಸಿದ ಮಾನದಂಡಗಳನ್ನು ಅನುಸರಿಸಿ ಜಿಲ್ಲಾ ಕೇಂದ್ರ ಘೋಷಿಸಲಿ. ಈ ನಿಟ್ಟಿನಲ್ಲಿ ದೊಡ್ಡಬಳ್ಳಾಪುರ ಯಾವುದೇ ಸವಾಲು ಎದುರಿಸಲೂ ಸಿದ್ಧ. ಜಿಲ್ಲಾ ಕೇಂದ್ರ ಹೋರಾಟಕ್ಕೆ ಜನತೆಯಿಂದ ಅಖಂಡ ಬೆಂಬಲ ವ್ಯಕ್ತವಾಗಿದೆ. ಪ್ರತಿನಿತ್ಯ ಹೊಸ ಸಂಘಟನೆಗಳು ಹೋರಾಟವನ್ನು ಬೆಂಬಲಿಸಿ ಚಳವಳಿಯಲ್ಲಿ ಪಾಲ್ಗೊಳ್ಳುತ್ತಿವೆ. ತಾಲೂಕಿನ ಹೋಬಳಿ ಕೇಂದ್ರಗಳಲ್ಲಿ, ಗ್ರಾಮಗಳಲ್ಲಿ ಕೂಡ ಹೋರಾಟದ ಕಾವು ಹೆಚ್ಚುತ್ತಿದೆ ಎಂದರು.
ಸಂಬಂಧವಿಲ್ಲ: ಲೋಕಸಭಾ ಚುನಾವಣೆ ನೀತಿಸಂಹಿತೆಗೂ ನಮ್ಮ ಹೋರಾಟಕ್ಕೂ ಸಂಬಂಧವಿಲ್ಲ. ನಮ್ಮದು ನಿರಂತರ ಬೇಡಿಕೆ. ಹೋರಾಟ ಸಮಿತಿ ರಾಜಕೀಯ ಸಮಿತಿ ಅಲ್ಲ. ಹೀಗಾಗಿ ಚಳವಳಿ ನಿಲ್ಲೋದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಬಂದು ಸ್ಪಷ್ಟನೆ ನೀಡಲಿ. ಜೊತೆಗೆ ಜಿಲ್ಲಾಧಿಕಾರಿಗಳು ಅವೈಜ್ಞಾನಿಕವಾಗಿ ಸಲ್ಲಿಸಿರುವ ವರದಿ ಅಂಶಗಳನ್ನು ಹಿಂತೆಗೆದುಕೊಂಡು ಕೂಡಲೇ ವೈಜ್ಞಾನಿಕ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಉಪವಿಭಾಗಾಧಿಕಾರಿಗೆ ಘೇರಾವ್ ಎಚ್ಚರಿಕೆ: ಕಳೆದ ಜ.24ರಂದೇ ಉಪವಿಭಾಗಾಧಿಕಾರಿ ಕಚೇರಿಗೆ ಸರ್ಕಾರದ ಅಧಿಕೃತ ಆದೇಶ ಹೊರಬಿದ್ದಿದ್ದರೂ ಈವರಗೆ ಕಚೇರಿ ಸ್ಥಳಾಂತರಕ್ಕೆ ಸೂಕ್ತ ಕ್ರಮ ಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ಗುರುವಾರ ದೊಡ್ಡಬಳ್ಳಾಪುರಕ್ಕೆ ಉಪವಿಭಾಗಾಧಿಕಾರಿಗಳು ಬಂದಾಗ ಅವರನ್ನು ಘೇರಾವ್ ಮಾಡಿ ಸ್ಪಷ್ಟನೆ ಕೇಳಲು ಹೋರಾಟ ಸಮಿತಿ ನಿರ್ಧರಿಸಿದೆ.
ಸರ್ಕಾರ ಆದೇಶಿಸಿದ್ದರೂ ಅಧಿಕಾರಿಗಳ ಮಟ್ಟದಲ್ಲಿ ನಡೆಯುತ್ತಿರುವ ಕೆಲ ಕ್ಷುಲ್ಲಕ ಬೆಳವಣಿಗೆಗಳಿಂದಾಗಿ ದೊಡ್ಡಬಳ್ಳಾಪುರಕ್ಕೆ ಬರಬೇಕಾದ ಕಚೇರಿ ಇನ್ನೂ ಬಾರದಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಮುಖಂಡರಾದ ಕೆ.ಎಂ.ಹನುಮಂತರಾಯಪ್ಪ, ಎಂ.ಕೃಷ್ಣಮೂರ್ತಿ, ರಾಜೇಂದ್ರಕುಮಾರ್, ತೂಬಗೆರೆ ಷರೀಫ್, ರವಿಕಿರಣ್, ಎಚ್.ಎಸ್.ನಾಗೇಶ್, ರಾಜಣ್ಣ, ಸಂಜೀವನಾಯಕ್, ಗಂಗರಾಜ್ ಶಿರವಾರ, ಎಚ್.ಎಸ್. ವೆಂಕಟೇಶ್, ವಿಮಲಮ್ಮ, ಮುನಿರಾಜು, ಡಾ.ಎಚ್.ಜಿ. ವಿಜಯಕುಮಾರ್, ಚಂದ್ರಶೇಖರ್ ಉಪ್ಪಾರ, ವತ್ಸಲ, ಹನುಮಂತರಾಯಪ್ಪ, ಎಸ್. ನಟರಾಜ್ ಸೇರಿದಂತೆ ಅನೇಕರು ಹಾಜರಿದ್ದರು.