ಶಿವಾಜಿ ಮಹಾರಾಜರ ಚಾಣಾಕ್ಷತನ ಮೈಗೂಡಿಸಿಕೊಳ್ಳಿ: ಜಿಲ್ಲಾಧಿಕಾರಿ ಕರೆ
ಕ.ಪ್ರ.ವಾರ್ತೆ ರಾಮನಗರ ಫೆ.19
ಛತ್ರಪತಿ ಶಿವಾಜಿ ಮಹಾರಾಜರ ಚಾಣಾಕ್ಷತನ, ಮುತ್ಸದಿತನ, ಧೈರ್ಯ, ಸಾಹಸ ಮತ್ತು ದೇಶಭಕ್ತಿಯನ್ನು ನಮ್ಮ ಯುವಜನತೆ ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಕರೆ ನೀಡಿದರು.
ಜಿಲ್ಲಾಡಳಿತ, ಜಿ.ಪಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಮನಗರ ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಟ್ರಸ್ಟ್ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ 387ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತಾಡಿದರು. ಪ್ರಸ್ತುತ ವಿದ್ಯಾರ್ಥಿ ಮತ್ತು ಯುವಜನರು ನಮ್ಮದೇ ನಾಡು, ನುಡಿ, ಸಂಸ್ಕೃತಿಯನ್ನಷ್ಟೇ ಅಲ್ಲದೆ ನಮ್ಮದೇ ಜನರನ್ನು ಹೀಯಾಳಿಸುವ ಕೆಟ್ಟ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಇಂದಿನ ಪೀಳಿಗೆಯಲ್ಲಿ ದೇಶಪ್ರೇಮ, ದೇಶಭಕ್ತಿ ಕಾಣಲಾಗುತ್ತಿಲ್ಲ ಎಂದು ಅವರು ವಿಷಾದಿಸಿದರು.
ತಾಯಿಯೇ ಪ್ರೇರಣೆ: ಶಿವಾಜಿ ಅವರ ಜೀವನಚರಿತ್ರೆಯನ್ನು ಅವಲೋಕಿಸಿದರೆ ಅವರ ಸಂಪೂರ್ಣ ಯಶಸ್ಸು, ಕೀರ್ತಿ ಮತ್ತು ಸಾಧನೆಗೆ ಅವರ ತಾಯಿಯೇ ಪ್ರೇರಣೆಯಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಶಿವಾಜಿ ಅವರು ಇಡೀ ಭರತ ಖಂಡವೇ ಹೆಮ್ಮ ಪಡುವಂತಹ ಅಪ್ಪಟ ರಾಷ್ಟ್ರಪ್ರೇಮಿ, ಧೈರ್ಯಶಾಲಿ ಎಂದು ವಿಶ್ವನಾಥ್ ಬಣ್ಣಿಸಿದರು.
ಶಿವಾಜಿ ಅವರನ್ನು ಕೇವಲ ವ್ಯಕ್ತಿಯನ್ನಾಗಿಸದೇ ಚಕ್ರವರ್ತಿಯನ್ನಾಗಿ ರೂಪಿಸಿದ ಶ್ರೇಯಸ್ಸು ಅವರ ತಾಯಿಗೆ ಸಲ್ಲುತ್ತದೆ. ಚಿಕ್ಕಂದಿನಿಂದಲೇ ರಾಮ, ಭೀಷ್ಮ, ಕೃಷ್ಣ ಮುಂತಾದವರ ಕಥೆಗಳನ್ನು ಹೇಳುವ ಮೂಲಕ ಶಿವಾಜಿ ಅವರಿಗೆ ತಾಯಿ ಧೈರ್ಯ ತುಂಬಿದ್ದರು ಎಂದರು. ಸದ್ಗುಣಗಳನ್ನು ರೂಡಿಸಿಕೊಂಡು, ಯಶಸ್ವಿ ಚಕ್ರವರ್ತಿಯಾಗಿ ಮನ್ನಣೆ ಪಡೆದ ಶಿವಾಜಿ ಅವರ ತತ್ವಾದರ್ಶ, ಸಂದೇಶಗಳು ಸಾರ್ವಕಾಲಿಕ ಸತ್ಯ. ಅವರಿಗೆ ಸಿಕ್ಕಂತಹ ತಾಯಿ ಎಲ್ಲ ಮಕ್ಕಳಿಗೂ ಸಿಕ್ಕರೆ ವ್ಯಕ್ತಿಗತವಾಗಿ ಅವರಷ್ಟೇ ದೇಶದ ಭವಿಷ್ಯವನ್ನೂ ಉತ್ತಮವಾಗಿ ರೂಪಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಉತ್ಸಾಹವೇ ಮುಖ್ಯ: ನಮ್ಮ ಯಶಸ್ಸು ಮತ್ತು ಸಾಧನೆಗೆ ಪ್ರೋತ್ಸಾಹ ಸಿಗಲಿಲ್ಲ ಎಂದು ದೂರುವವರೇ ಹೆಚ್ಚಾಗಿದ್ದಾರೆ. ಜೀವನದಲ್ಲಿ ಯಶಸ್ಸಿಗೆ ಶೇಕಡ 1ರಷ್ಟು ಪ್ರೋತ್ಸಾಹ ಸಿಗಬೇಕಷ್ಟೇ. ಉಳಿದಂತೆ ಶೇಕಡ 99ರಷ್ಟು ನಮ್ಮಲ್ಲಿರುವ ಉತ್ಸಾಹ ಪಾತ್ರ ವಹಿಸುತ್ತದೆ ಎಂದು ವಿಶ್ವನಾಥ್ ಹೇಳಿದರು.
ನಮ್ಮಲ್ಲಿ ಬದ್ಧತೆ, ಆತ್ಮವಿಶ್ವಾಸ, ಸ್ವತಂತ್ರ ಮತ್ತು ಸಕಾರಾತ್ಮಕ ಚಿಂತನೆ, ಸಾಮಾಜಿಕ ಕಾಳಜಿ ಇರಬೇಕು. ಇಷ್ಟೆಲ್ಲವೂ ಇದ್ದಾಗ ವಯಕ್ತಿಕ ಯಶಸ್ಸಿನ ಜತೆಗೆ ದೇಶದ ಉದ್ಧಾರವೂ ಸಾಧ್ಯವಾಗುತ್ತದೆ. ಈ ಬಗ್ಗೆ ಯುವ ಸಮುದಾಯ ಗಂಭೀರ ಚಿಂತನೆ ನಡೆಸಬೇಕು ಎಂದು ಅವರು ಸಲಹೆ ನೀಡಿದರು. ಮಾಜಿ ಶಾಸಕ ಕೆ.ರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀ ಆನಂದಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್, ಕಾಂಗ್ರೆಸ್ ಮುಖಂಡ ಮರಿದೇವರು, ಜೆಡಿಎಸ್ ಮುಖಂಡರಾದ ರಾಜಶೇಖರ್, ಚಿಕ್ಕವೀರೇಗೌಡ, ಸೋಮಶೇಖರ ರಾವ್, ನಗರಸಭೆ ಆಯುಕ್ತ ಯಶವಂತ್ ಮತ್ತಿತರರು ಭಾಗವಹಿಸಿದ್ದರು.