ಖಾಸಗಿ ಸ್ವತ್ತಾಗಲು ಬಿಡುವುದಿಲ್ಲ
ಚನ್ನಪಟ್ಟಣ: ಪಟ್ಟಣದ ಖಾಸಗಿ ಬಸ್ ನಿಲ್ದಾಣಕ್ಕೆ ಸೇರಿದ 5.5 ಗುಂಟೆ ಭೂಮಿಯ ವಿಚಾರ ಧರ್ಮ ಮತ್ತು ಅಧರ್ಮದ ನಡುವಿನ ಸಂಘರ್ಷವಾಗಿದ್ದು, ಈ ಜಾಗ ಖಾಸಗಿ ಸ್ವತ್ತಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಶಾಸಕ ಸಿ.ಪಿ. ಯೋಗೇಶ್ವರ್ ಸ್ಪಷ್ಟಪಡಿಸಿದರು.
ಪಟ್ಟಣದ ನಗರಸಭಾ ಸಭಾಂಗಣದಲ್ಲಿ ಕರೆಯಲಾಗಿದ್ದ ಸದಸ್ಯರು ಮತ್ತು ಅಧಿಕಾರಿಗಳ ಅನೌಪಚಾರಿಕ ಸಭೆಯಲ್ಲಿ ಮಾತನಾಡಿ, ಖಾಸಗಿ ಬಸ್ ನಿಲ್ದಾಣಕ್ಕೆ ಸಂಬಂಧಿಸಿದಂತೆ ನನ್ನ ನಿಲವು ಸ್ಪಷ್ಟವಿದ್ದು ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಈ ಪ್ರಕರಣ ಇತ್ಯರ್ಥವಾಗಲಿ ಎಂದು ಕಾಯುತ್ತಿದ್ದೇನೆ ಆದೇಶ ಬಂದ ನಂತರ ಮುಂದಿನ ತೀರ್ಮಾನ ತಳೆಯುವುದಾಗಿ ತಿಳಿಸಿದರು.
ನಗರಸಭೆ ಬಳಿ ದಾಖಲೆ ಏನಿದೆ: ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ನಿಯೋಜಿತ ಸದಸ್ಯ ರಮೇಶ್ ಬಾಬು(ಮೂಲು) ಖಾಸಗಿ ಬಸ್ ನಿಲ್ದಾಣದಲ್ಲಿ ಇದ್ದ ಅಂಗಡಿಗಳನ್ನು 2005ರಲ್ಲಿ ತೆರವು ಗೊಳಿಸಲು ಮುಂದಾದಾಗ ಶಾಸಕರ ಬೆಂಬಲಿಗರಾದ ಚಕ್ಕೇರೆ ರಾಮು ತಡೆಯಾಜ್ಞೆ ತಂದು ಇದು ಅಣ್ಣೇಗೌಡರ ಜಾಗ ಎಂದು ವಾದಿಸಿದ್ದರು. ಅವರ ಪರ ವಾದ ಮಂಡಿಸಿದ್ದು ವಕೀಲರಾದ ಕೆ.ಟಿ.ತಿಮ್ಮೇಗೌಡರು, ಇದೀಗ ನಗರಸಭೆ ಪರ ವಾದ ಮಂಡಿಸಿ ಈ ಜಾಗ ನಗರಸಭೆಗೆ ಸೇರಬೇಕು ಎನ್ನುತ್ತಿದ್ದಾರೆ. ಒಬ್ಬರೇ ವಕೀಲರು ಒಂದೇ ವಿಷಯದಲ್ಲಿ ಎರಡೆರಡು ರೀತಿ ವಾದ ಮಂಡಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಸಭೆಗೆ ಆಗಮಿಸಿದ ವಕೀಲ ಕೆ.ಟಿ. ತಿಮ್ಮೇಗೌಡ ನಾನು ನಗರಸಭೆ ಪರವಾಗಿ ವಾದ ಮಂಡಿಸುತ್ತಿದ್ದು, ರಾಮು ಪರ ವಾದ ಮಾಡಿಲ್ಲ, ಈ ಸಂಬಂಧ ಫೆ.26 ರಂದು ನ್ಯಾಯಾಲಯದಲ್ಲಿ ಪಾಟೀ ಸವಾಲಿದ್ದು ಇದಕ್ಕೆ ಬೇಕಾದ ದಾಖಲೆಗಳನ್ನು ನಾವು ಸಿದ್ಧಪಡಿಸಿ ಕೊಂಡಿದ್ದೇವೆ. ರಾಮು ಪ್ರಕರಣಕ್ಕೆ ಸಂಬಂಧಿಸಿದ ಕೆಲ ಅಂಶಗಳನ್ನು ನಾನು ಈ ವಿಚಾರದಲ್ಲಿ ಪ್ರಸ್ತಾಪಿಸಿದ್ದೇನೆ ಎಂದು ಸ್ಪಷ್ಟ ಪಡಿಸಿದರು.
ನ್ಯಾಯಾಲಯ ಕಟ್ಟಡ ಕಟ್ಟದಂತೆ ತಡೆಯಾಜ್ಞೆ ನೀಡಿದೆ, ಈ ಜಾಗದಲ್ಲಿ ಯಾರೂ ಏನೂ ಮಾಡಬೇಡಿ ಎಂದು ತನ್ನ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದು ಇನ್ಯಾರೋ ಹಪ್ತಾ ವಸೂಲಿ ಮಾಡಲು, ಖಾಸಗಿ ವ್ಯಕ್ತಿಗಳಿಗೆ ಜಾಗ ನೀಡಿ ಬಾಡಿಗೆ ವಸೂಲಿ ಮಾಡುವುದಕ್ಕೆ ಅವಕಾಶ ಇಲ್ಲ ಎಂದು ಸದಸ್ಯ ಮುದ್ದುಕೃಷ್ಣ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಫುಟ್ಪಾತ್ ತೆರವು ಗೊಳಿಸಿ: ಪಟ್ಟಣದ ಅತಿ ಹೆಚ್ಚು ಜನಸಂದಣಿ ಇರುವ ಅಂಚೆ ಕಚೇರಿ ರಸ್ತೆ, ಎಂ.ಜಿ ರಸ್ತೆ ಮತ್ತು ರೈಲು ನಿಲ್ದಾಣದ ರಸ್ತೆಯಲ್ಲಿ ಫುಟ್ಪಾತ್ ತೆರವು ಗೊಳಿಸುವಂತೆ ತಾಕೀತು ಮಾಡಿದ ಶಾಸಕರು ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಸೂಚಿಸಿದರು.
ಕ್ರಿಮಿನಲ್ ಮೊಕದ್ದಮೆ ದಾಖಲಿಸಿ: ನಗರ ಸಭೆಯಲ್ಲಿ ಅಕ್ರಮ ಖಾತೆ ನಡೆಯುತ್ತಿರುವ ಬಗ್ಗೆ ಸದಸ್ಯ ಜೆಸಿಬಿ ಲೋಕೇಶ್ ಶಾಸಕರ ಗಮನ ಸೆಳದರು. ಈ ಬಗ್ಗೆ ಅಧಿಕಾರಿಗಳಿಂದ ವಿವರಣೆ ಪಡೆದ ಶಾಸಕರು 23 ಸಾವಿರ ಖಾತೆಯ ಪೈಕಿ ಅಕ್ರಮ ಮತ್ತು ಸಕ್ರಮ ಎಷ್ಟು ಎಂದು ಪ್ರಶ್ನಿಸಿದರು. ನಗರಸಭೆಗೆ ಸೇರದ ಜಾಗಗಳಿಗೆ ಖಾತೆ ಮಾಡಿ ಕೊಟ್ಟಿರುವ ಸಿಬ್ಬಂದಿ ವೆಂಕಟರಾಮು ವಿರುದ್ಧ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ತಾಕೀತು ಮಾಡಿದರು.
ಪೌರಾಯುಕ್ತ ಜಗದೀಶ್, ರಾಮನಗರ ಚನ್ನಪಟ್ಟಣ ನಗರಾಭಿವೃದ್ಧಿ ಇಲಾಖೆ ಆಯುಕ್ತ ಪದ್ಮನಾಭ, ತಹಸೀಲ್ದಾರ್ ಶಿವರುದ್ರಪ್ಪ, ನಗರ ಪೊಲೀಸ್ ವೃತ್ತನಿರೀಕ್ಷಕ ಅಂಜನ್ಕುಮಾರ್, ಪಿಎಸ್ಐ ವಿಜಯ್ಕುಮಾರ್ ಇನ್ನೂ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.