ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರೈತರ ಕೆಲಸ ಸ್ಥಗಿತ, ಕಂದಾಯ ಅಧಿಕಾರಿಗಳ ನಾಪತ್ತೆ

Rashmi Kasaragodu
Updated On : 21 Feb 2014, 1:44 am

ಆನೇಕಲ್ಲು: ಆನೇಕಲ್ಲಿನ ತಾಲೂಕು ಕಚೇಯಲ್ಲಿ ಕಳೆದ 10 ದಿನಗಳಿಂದ ಯಾವುದೇ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಿಗುತ್ತಿಲ್ಲ. ರೈತರು, ವಿದ್ಯಾರ್ಥಿಗಳು ಹಾಗೂ ಜನ ಸಾಮಾನ್ಯರಿಗೆ ಯಾವುದೇ ದಾಖಲೆ ಸಿಗದೇ ಪರದಾಡುವಂತಾಗಿದೆ. ಸರ್ಕಾರ ಹಾಗೂ ಆಡಳಿತ ಈ ಕೂಡಲೇ ಸೂಕ್ತ ಅಧಿಕಾರಿಯನ್ನು ನೇಮಕ ಮಾಡಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಆನೇಕಲ್ ವಕೀಲರ ಸಂಘದ ಪದಾಧಿಕಾರಿಗಳು, ಕಿಸಾನ್ ಸಂಘ ಸೇರಿದಂತೆ ಹಲವು ಪ್ರಗತಿಪರ ಹಾಗೂ ರೈತ ಪರ ಸಂಘಟನೆಗಳ ಮುಖಂಡರು ತಾಲೂಕು ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸುತಿದ್ದಾರೆ.
 ಗುರುವಾರ ತಾಲೂಕು ಕಚೇರಿ ಆವರಣದಲ್ಲಿ ಅಹೋರಾತ್ರಿ ಉಳಿದು ಸರ್ಕಾರದ ಕಣ್ಣು ತೆರೆಸುವುದು, ಕಚೇರಿ ವ್ಯವಸ್ಥೆ ಶುಕ್ರವಾರವೂ ಸರಿಹೋಗದಿದ್ದ ಪಕ್ಷದಲ್ಲಿ ತಾಲೂಕು ಕಚೇರಿಗೆ ಬೀಗ ಜಡಿದು ಉಗ್ರ ರೀತಿಯ ಪ್ರತಿಭಟನೆ ನಡೆಸಲಾಗುವುದು ಎಂದು ವಕೀಲರ ಸಂಘದ ಅಧ್ಯಕ್ಷ ರಮೇಶ್ ಮತ್ತು ಕಿಸಾನ್ ಸಂಘದ ಅಧ್ಯಕ್ಷ ರಾಮಸ್ವಾಮಿರೆಡ್ಡಿ ತಿಳಿಸಿದರು.
ನಂತರ ತಾಲೂಕು ಕಚೇರಿಗೆ ಆಗಮಿಸಿದ ತಹಸೀಲ್ದಾರರನ್ನು ಸುತ್ತುವರಿದು ಕಂದಾಯ ಅಧೀನ ಅಧಿಕಾರಿಗಳ ಲಂಚಾವತಾರ, ಸರ್ವೆ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಕಡತ ವಿಳಂಬ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಖಾತಾ ಬದಲಾವಣೆಯಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಇಲಾಖೆ ತನಿಖೆ ನಡೆಸಿ ಶೀಘ್ರ ಕ್ರಮ ವಹಿಸಬೇಕೆಂದು ದೇವರಾಜ್ ಆಗ್ರಹಿಸಿದರು.
ಸರ್ಕಾರಿ ಜಮೀನು ಸಂರಕ್ಷಣೆ ಮಾಡಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಡುವುದು, ಆಶ್ರಯ ಯೋಜನೆಯಡಿ ಅರ್ಹ ಫಲಾನು ಭವಿಗಳನ್ನು ಮಾತ್ರ ಗುರುತಿಸುವುದು, ಮುಂದಿನ ದಿನದಲ್ಲಿ ವಸತಿ ಸಂಕೀರ್ಣ ನಿರ್ಮಿಸಿ ಹೆಚ್ಚು ಬಡವರಿಗೆ ಸೂರು ಒದಗಿಸುವುದು, ಸಕಾಲ ಯೋಜನೆಗೆ ತ್ವರಿತ ವಿಲೇ ಕ್ರಮ, ಜನಸ್ಪಂದನ ಕಾರ್ಯಕ್ರಮ ಜೊತೆಗೆ ಪ್ರತ್ಯೇಕ ರೈತ ಸ್ಪಂದನ ನಡೆಸುವುದು, ಪ್ರಯೋಜನಕಾರಿಯಾಗಿ ಪರಿವರ್ತಿಸುವುದು, ಪೊಲೀಸ್ ಠಾಣೆಯಲ್ಲಿನ ದೌರ್ಜನ್ಯ ತಡೆಯಲು ಸರ್ವ ಜನಾಂಗದ ಸಮಿತಿ ರಚಿಸುವುದು ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಧರಣಿ ಮುಂದುವರಿಸುವುದಾಗಿ ತಿಳಿಸಿದರು.
ಈ ಹಂತದಲ್ಲಿ ಮುಖಂಡರೊಡನೆ ಮಾತನಾಡಿದ ತಹಸೀಲ್ದಾರ್ ಮಲ್ಲಿಕಾರ್ಜುನ್ ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಸರ್ಕಾರಿ ಭೂಮಿ ಒತ್ತುವರಿ ತೆರವು, ನ್ಯಾಯಾಲಯ ಕೋರಿದ ದಾಖಲೆ ಒದಗಿಸಲು ಸಿಬ್ಬಂದಿ ಅಗತ್ಯವಿದ್ದರಿಂದ ಕೆಲ ಕಾಲ ರೈತರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ನಡುವೆಯೂ ತಾಲೂಕಿನಲ್ಲೇ ಹೆಚ್ಚು ಪಡಿತರ ಚೀಟಿ ವಿತರಣೆಯಾಗಿದೆ. ಸಕಾಲ ಯೋಜನೆಯ ಅರ್ಜಿಗಳನ್ನು ನ್ಯಾಯಯುತವಾಗಿ ವಿಲೇ ಮಾಡಲಾಗುತ್ತಿದೆ ಎಂದು ವಿವರಿಸಿದರು.
ವರ್ಗಾವಣೆ: ತಹಸೀಲ್ದಾರ್ ಆದ ತಮಗೆ ವರ್ಗಾವಣೆಯಾಗಿ 14 ದಿನವಾಗಿದೆ. ಆನೇಕಲ್ಲಿಗೆ ಬದಲಿ ಅಧಿಕಾರಿ ಬಂದ ತಕ್ಷಣ ಎಲ್ಲ ವ್ಯವಸ್ಥೆ ಸರಿಹೋಗುತ್ತದೆ. ಅತ್ಯಧಿಕ ಕೆಲಸದ ಒತ್ತಡ ಹಾಗೂ ಜನಸ್ಪಂದನ ಓಡಾಟದಿಂದಾಗಿ ಕೆಲ ಕಾಲ ಅರೋಗ್ಯ ಹದಗೆಟ್ಟಿತ್ತು. ಎಲ್ಲವೂ ಶೀಘ್ರದಲ್ಲೇ ಸರಿಹೋಗಲಿದ್ದು ಜನತೆ ತಾಳ್ಮೆಯಿಂದ ಸಹಕಾರ ನೀಡಬೇಕೆಂದು ಮಲ್ಲಿಕಾರ್ಜುನ್ ಮನವಿ ಮಾಡಿದರು.
ಅನ್ನ ಬೇಯಿಸಿದ ಮುಖಂಡರು: ತಾಲೂಕು ಕಿಸಾನ್ ಸಂಘ, ವಕೀಲರ ಸಂಘ ಸೇರಿದಂತೆ ನೂರಾರು ಮುಖಂಡರು ತಾಲೂಕು ಕಚೇರಿ ಆವರಣದಲ್ಲೇ ಷಾಮಿಯಾನ ಹಾಕಿ ಧರಣಿ ಕುಳಿತು ಸಂಜೆಗೆ ಮನೆಗೆ ಹೋಗುತ್ತಿಲ್ಲ. ಬದಲಿಗೆ ಅಲ್ಲೇ ಊಟ ತಯಾರಿ ನಡೆಯಿತು. ರಾತ್ರಿ ಊಟಕ್ಕೂ ಸಹ ಅಲ್ಲೇ ವ್ಯವಸ್ಥೆ ಮುಂದುವರಿಯಲಿದ್ದು ರೈತರು ಬಂಧುಗಳು ಇಲ್ಲೇ ಉಳಿಯುವಂತೆ ಮನವಿ ಮಾಡಿದರು.
ರೈತ ಸಂಘದ ಮಂಜುನಾಥ್  ಮಾತನಾಡಿ ಪ್ರಚಾರಕ್ಕಾಗಿ ಧರಣಿ ಮಾಡುತ್ತಿಲ್ಲ.
ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಉಪವಿಭಾಗಾಧಿಕಾರಿ ಅಥವಾ ಜಿಲ್ಲಾಧಿಕಾರಿಗಳು ಬಂದು ಸಮಸ್ಯೆಗಳನ್ನು ಆಲಿಸಿ ಪರಿಹಾರದ ಭರವಸೆ ನೀಡಲಿ. ಸ್ಥಳದಲ್ಲೇ ಇತ್ಯರ್ಥವಾಗುವ ಸಮಸ್ಯೆಗಳಿಗೆ ಇಲ್ಲೇ ಪರಿಹಾರ ಸೂಚಿಸಲು ಎಂದು ಪಟ್ಟು ಹಿಡಿದು ಶಿರಸ್ತೇದಾರ ರನ್ನು ಹಿಂದಕ್ಕೆ ಕಳಿಸಿದರು. ಡಾ. ಮುನಿಸ್ವಾಮಿರೆಡ್ಡಿ, ವಕೀಲ ಪ್ರಕಾಶ್, ದಿನೇಶ್, ದೇವರಾಜು, ಶೈಲೇಂದ್ರ, ರಾಜಾ ತಿಮ್ಮಯ್ಯ,
ಸಿ. ತೋಪಯ್ಯ, ವೆಂಕಟೇಶ್, ಮಂಜುನಾಥ್, ವೆಂಕಟಸ್ವಾಮಿ, ನಾರಾಯಣಸ್ವಾಮಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಸಮಸ್ಯೆಗಳ ಬಗ್ಗೆ ಹಾಗೂ ಪರಿಹಾರ ಮಾರ್ಗಗಳ ಬಗ್ಗೆ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement