ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಂದೇಶ ನೀಡುವುದೇ ಚಿತ್ರ ಕಲೆಯ ಉದ್ದೇಶ: ನಾರಾಯಣ ಭಂಡಾರಿ

Rashmi Kasaragodu
Updated On : 21 Feb 2014, 1:44 am

ರಾಮನಗರ: ರಚಿಸಿದ ಕೃತಿಯಿಂದ ನಾವು ಮಾತ್ರ ಖುಷಿ ಪಟ್ಟರೆ ಸಾಲದು. ಇತರರನ್ನೂ ಖುಷಿ ಪಡಿಸುವ ಜತೆಗೆ ಸಂದೇಶ ನೀಡುವುದೇ ಚಿತ್ರ ಕಲೆಯ ಉದ್ದೇಶವಾಗಿದೆ ಎಂದು ಚಿತ್ರ ಕಲಾವಿದ ನಾರಾಯಣ ಭಂಡಾರಿ ಅಭಿಪ್ರಾಯಪಟ್ಟರು.
ನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠ ಕಾಲೇಜಿನಲ್ಲಿ ನೇಸರ ರಾಷ್ಟ್ರೀಯ ಹಸಿರುಪಡೆ ಘಟಕದಿಂದ ಆಯೋಜಿಸಿದ್ದ ಪರಿಸರ ಚಿತ್ರ ಬರವಣಿಗೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು  ಚಿತ್ರಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ನಿಸರ್ಗದ ಚಿತ್ರವನ್ನು ಬರೆಯುವಾಗ ಕೆಲವು ಸೂಕ್ಷ್ಮಗಳನ್ನು ಗಮನಿಸಬೇಕು. ನಾವು ನಿಸರ್ಗವನ್ನು ಬರಿಗಣ್ಣಿನಿಂದ ನೋಡಿದಾಗ ಮುಕ್ಕಾಲು ಭಾಗ ಆಕಾಶ ಕಾಣುತ್ತೆ. ಕಾಲು ಭಾಗ ಮಾತ್ರ ಗಿಡ, ಮರ, ಮನೆ, ನದಿ, ಬೆಟ್ಟ, ಗುಡ್ಡಕಾಣುತ್ತದೆ. ದೂರದಲ್ಲಿರುವುದು ಚಿಕ್ಕದಾಗಿ, ಸನಿಹದಲ್ಲಿರುವುದು ದೊಡ್ಡದಾಗಿ ಕಾಣುತ್ತೆ. ದೂರದ್ದನ್ನು ಮೊದಲು ಬರೆದು ಆನಂತರ ಹತ್ತಿರದಲ್ಲಿ ಕಾಣುವುದನ್ನು ಬಿಡಿಸಬೇಕು. ಹಾಗೆಯೇ ದೂರದ ಚಿತ್ರವನ್ನು ಅಸ್ಪಷ್ಟವಾಗಿ ಹತ್ತಿರದ ಚಿತ್ರಗಳನ್ನು ಸ್ಪಷ್ಟವಾಗಿ ಬರೆಯಬೇಕು ಎಂದರು.
ದಟ್ಟವಾಗಿ ಕಾಣುತ್ತೆ: ಒಂದೇ ಬಣ್ಣ ಹಚ್ಚಿದಾಗ ದಟ್ಟವಾಗಿ ಕಾಣುತ್ತೆ. ಅದಕ್ಕೆ ಎಲ್ಲ ಬಣ್ಣಗಳಿಗೂ ಸ್ವಲ್ಪ ಬಿಳಿ ಬಣ್ಣವನ್ನು ಮಿಶ್ರ ಮಾಡಿಕೊಂಡರೆ ಚಿತ್ರ ಸೊಗಸಾಗಿ ಕಾಣುತ್ತವೆ. ಪ್ರತಿಯೊಂದು ಸಸ್ಯ, ಗಿಡ, ಮರ, ಪ್ರಾಣಿ, ಪಕ್ಷಿಯಲ್ಲೂ ಬೇರೆ ಬೇರೆ ವಿಶೇಷತೆಗಳಿರುತ್ತವೆ. ಅವನ್ನು ಗುರುತಿಸಬೇಕು. ರಣಹದ್ದುಗಳ ಚಿತ್ರ ಬರೆಯುವಾಗ ಕಂದು ಬಣ್ಣ, ಬೋಳು ತಲೆ, ಉದ್ದನೆಯ ಕತ್ತು, ಬಲಿಷ್ಠ ಕೊಕ್ಕು, ವಿಶಾಲ ರೆಕ್ಕೆ, ತೀಕ್ಷ್ಣ ಕಣ್ಣು ಇವುಗಳನ್ನು ಸೂಕ್ಷ್ಮವಾಗಿ ಚಿತ್ರಿಸಬೇಕು ಎಂದರು.
ಹಮಿಂಗ್ ಬರ್ಡ್ ಚಿತ್ರ ಬಿಡಿಸುವಾಗ ಬಹಳ ಎಚ್ಚರಿಕೆ ಅವಶ್ಯ. ಅದು ಜಗತ್ತಿನ ಅತೀ ಪುಟ್ಟ ಪಕ್ಷಿ. ಅದು ಹೂವಿನಲ್ಲಿ ಮಕರಂದ ಹೀರುವಾಗ, ಹುಳು, ಕೀಟಗಳನ್ನು ಹಿಡಿಯುವಾಗ ತನ್ನ ರೆಕ್ಕೆಗಳನ್ನಷ್ಟೇ ಅಲ್ಲದೆ ಇಡೀ ಶರೀರವನ್ನೆ ಮಿಟುಕಿಸುತ್ತಿರುತ್ತದೆ. ಆಗ ಅದರ ವೇಗವನ್ನು ಗ್ರಹಿಸಿ ಚಿತ್ರ ಬಿಡಿಸಬೇಕು. ಹಸಿರು ನೆಲದ ಚಿತ್ರ ಬರೆಯುವಾಗ ಸಣ್ಣ ಸಣ್ಣ ಕಲ್ಲುಗಳು, ಹುಲ್ಲು, ಜಿಂಕೆ, ಗಿಡಗಳು, ಮರದಲ್ಲಿ ಎಲೆ. ಹೂ, ಕಾಯಿ ಎಲ್ಲವನ್ನು ಗಮನಿಸಿ ಸೂಕ್ಷ್ಮವಾಗಿ ಬರೆದು, ಸರಿಯಾಗಿ ಬಣ್ಣ ಹಚ್ಚಿದಾಗ ಚಿತ್ರ ಆಕರ್ಷಕವಾಗಿ ಕಾಣಿಸುತ್ತದೆ. ನೋಡುಗರಿಗೆ ಮುದ ನೀಡುವ ಜತೆಗೆ ಪರಿಸರ ಪ್ರೇಮವನ್ನು ಬೆಳೆಸಲು ಚಿತ್ರಕಲೆ ಸಹಕಾರಿಯಾಗುತ್ತದೆ ಎಂದರು. ಹಿಂದೆ ನಮ್ಮನ್ನಾಳಿದ ರಾಜ ಮಹಾರಾಜರು ಕಲಾವಿದರಿಗೆ ಅಪಾರ ಪ್ರೋತ್ಸಾಹ ನೀಡುತ್ತಿದ್ದರು. ಇಂದಿನ ಜನಪ್ರತಿನಿಧಿಗಳು ಚಿತ್ರ ಕಲಾವಿದರನ್ನು ಕಡೆಗಣಿಸಿದ್ದಾರೆ. ಸಾಹಿತಿಗಳಿಗೆ ಗೌರವ ಧನ ನೀಡುತ್ತಿರುವಂತೆ ಚಿತ್ರ ಕಲಾವಿದರಿಗೂ ಮಾಸಾಶನ ನೀಡಬೇಕು. ಚಿತ್ರಕಲೆಗಾಗಿಯೇ ಪ್ರತ್ಯೇಕ ಶಾಲೆ ತೆರೆಯಬೇಕು ಎಂದು ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ಸಂಯೋಜಕ ಜಿ.ಶಿವಣ್ಣ ತಿಳಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲ ಬಿ.ಗೋಪಾಲ್, ರಾಷ್ಟ್ರೀಯ ಹಸಿರು ಪಡೆಯ ಸಂಚಾಲಕಿ ಪಿ.ಮಂಜುಳಾ, ಉಪನ್ಯಾಸಕರಾದ ವೀಣಾ, ಶಾರದಾ ಬಡಿಗೇರ, ತ್ರೀವೇಣಿ ಮತ್ತಿತರರು ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement