ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹೇಳಿ ಹೇಳಿ ಸಾಕಾಯ್ತು.. ಬಿಡ್ಲಿಲ್ಲ ಹಳೇ ಚಾಳಿ

Rashmi Kasaragodu
Updated On : 21 Feb 2014, 1:43 am

ಮತ್ತೀಕೆರೆ ಜಯರಾಮ್
ರಾಮನಗರ: ಇಲ್ಲಿನ ನಗರಸಭೆ ವ್ಯಾಪ್ತಿಯ ಕಸವನ್ನು ಆಸುಪಾಸಿನ ಹಳ್ಳ-ಕೊಳ್ಳ, ಬೆಟ್ಟ-ಗುಡ್ಡ, ಅರ್ಕಾವತಿ ನದಿಯಲ್ಲಿ ವಿಲೇವಾರಿ ಮಾಡಿ ಬೆಂಕಿ ಹಚ್ಚುವ ಹಳೆಯ ಚಾಳಿಯನ್ನು ಗುತ್ತಿಗೆದಾರರು ಮತ್ತೆ ಮುಂದುವರೆಸಿದ್ದಾರೆ.
ನಗರ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಗಳಿಗೆ ಕಣ್ವ ಬಳಿ ಸರ್ಕಾರ ಅಗತ್ಯ ಜಮೀನು ಮಂಜೂರು ಮಾಡಿ ನಾಲ್ಕು ವರ್ಷವೇ ಕಳೆದಿದೆ. ಅಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಘಟಕ  ಸ್ಥಾಪನೆಗೆ ಉಭಯ ಪೌರ ಸಂಸ್ಥೆಗಳು ಇನ್ನೂ ಕ್ರಮ ಕೈಗೊಂಡಿಲ್ಲ.
ಕಣ್ವ ಬಳಿಯ ಜಾಗಕ್ಕೆ ಅಲ್ವಸ್ವಲ್ಪ ಕಸವನ್ನಷ್ಟೇ ವಿಲೇವಾರಿ ಮಾಡುತ್ತಿದ್ದು, ಬಹುಪಾಲು ಕಸವನ್ನು ಸಿಕ್ಕ ಸಿಕ್ಕ ಕಡೆ ಸುರಿದು ಪರಿಸರ ಮಾಲಿನ್ಯ ಉಂಟು ಮಾಡುತ್ತಿದ್ದರೂ ಜಿಲ್ಲಾಡಳಿತ, ಪೌರ ಸಂಸ್ಥೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಣ್ಮುಚ್ಚಿ ಕುಳಿತಿದೆ.
ಕಸದ ರಾಶಿಗೆ ಬೆಂಕಿ : ರಾಮನಗರದ ಕಸವನ್ನೆಲ್ಲಾ ನಗರದ ಮೆಹಬೂಬ್, ನಾಲಬಂದವಾಡಿ, ಕೊತ್ತೀಪುರ ಬಡಾವಣೆಗಳಿಗೆ ಹೊಂದಿಕೊಂಡ ಬೆಟ್ಟ, ಗುಡ್ಡ, ಹಳ್ಳಗಳಲ್ಲೇ ವಿಲೇವಾರಿ ಮಾಡಿ ಬೆಂಕಿ ಹಚ್ಚುತ್ತಿರುವ ವಿರುದ್ಧ ಆ ಭಾಗದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ರ್ಯಾಕ್ಟರ್, ಟ್ರಕ್‌ಗಳ ಮೂಲಕ ತುಂಬಿಕೊಂಡು ಬಂದ ಕಸವನ್ನು ನಸುಕಿನಲ್ಲೇ ಈ ಭಾಗದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಗುತ್ತಿಗೆದಾರರ ಕಡೆಯ ಸಿಬ್ಬಂದಿ ಕಸದ ರಾಶಿಗೆ ಬೆಂಕಿ ಹಚ್ಚಿ ಕೈತೊಳೆದುಕೊಳ್ಳುತ್ತಿದ್ದಾರೆ. ಈ ಪರಿಣಾಮ ನಾಗರಿಕರು ಯಾತನೆ ಅನುಭವಿಸುತ್ತಿದ್ದಾರೆ.
ಹಿಂದೆಯೂ ನಡೆದಿತ್ತು: ಕಳೆದೊಂದು ವರ್ಷದ ಹಿಂದೆಯೂ ಕಸ ವಿಲೇವಾರಿ ಗುತ್ತಿಗೆದಾರರು ಬೇಕಾಬಿಟ್ಟಿಯಾಗಿ ಸಿಕ್ಕ ಸಿಕ್ಕ ಕಡೆಯಲ್ಲೆಲ್ಲಾ ಕಸವನ್ನು ಹಾಕಿ, ಬೆಂಕಿ ಹಚ್ಚುತ್ತಲೇ ಬಂದಿದ್ದರು. ಈ ಬಗ್ಗೆ ಕನ್ನಡಪ್ರಭ ಸರಣಿ ಲೇಖನಗಳ ಮೂಲಕ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆದಿತ್ತು.
ಕಳೆದ ಹದಿನೈದು ದಿನಗಳಿಂದ ಗುತ್ತಿಗೆದಾರರ ಹಳೆಯ ಚಾಳಿ ಮರುಕಳಿಸಿದೆ. ಅರ್ಕಾವತಿ ನದಿ ಪಾತ್ರದ ಕೆಲವೆಡೆಯೂ ಕಸ ವಿಲೇವಾರಿ ಮಾಡಿ, ಬೆಂಕಿ ಹಚ್ಚುವ ಕೆಲಸ ಆಗಿರುವುದಕ್ಕೆ ಸಾಕಷ್ಟು ಕಡೆ ಕುರುಹುಗಳು ಕಣ್ಣಿಗೆ ರಾಚುತ್ತಿವೆ.
ಖರ್ಚು ಉಳಿಸಲು ದಾರಿ: ಕಣ್ವ ಬಳಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಸರ್ಕಾರ ನೀಡಿರುವ ಸ್ಥಳವು ನಗರದಿಂದ ಸುಮಾರು 10 ಕಿ.ಮೀ. ದೂರದಲ್ಲಿದೆ. ಅಲ್ಲಿಗೆ ಕಸ ಸಾಗಿಸಲು ಆಗುವ ಖರ್ಚು, ಸಿಬ್ಬಂದಿ ಶ್ರಮವನ್ನು ಕಡಿಮೆ ಮಾಡಿಕೊಳ್ಳಲು ಗುತ್ತಿಗೆದಾರರು ಅಡ್ಡದಾರಿ ಹಿಡಿದಿದ್ದಾರೆ.
ಹೀಗೆ ಬೇಕೆಂದ ಕಡೆಯಲ್ಲೆಲ್ಲಾ ಕಸ ವಿಲೇವಾರಿ ಮಾಡಿ, ಬೆಂಕಿ ಹಚ್ಚುವ ಕೆಲಸ ಮಾಡುವುದಾದರೆ ಕಸ ವಿಲೇವಾರಿಗೆಂದು ನಗರಸಭೆಗೆ ಕೋಟ್ಯಂತರ ರು. ಬೆಲೆ ಬಾಳುವ ಜಾಗ ಮಂಜೂರು ಮಾಡುವ ಅಗತ್ಯವಾದರೂ ಏನಿತ್ತು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಸ್ಥಳೀಯರಿಂದ ದೂರು: ನಗರದಂಚಿನಲ್ಲೇ ಕಸ ವಿಲೇವಾರಿ ಮಾಡಿ ಬೆಂಕಿ ಹಚ್ಚುತ್ತಿರುವ ಪರಿಣಾಮ ಪರಿಸರ ನೈರ್ಮಲ್ಯಕ್ಕೆ ಧಕ್ಕೆ ತಂದೊಡ್ಡುತ್ತಿರುವುದರ ವಿರುದ್ಧ ಸಾರ್ವಜನಿಕರು ಸ್ಥಳೀಯ ನಗರಸಭೆ, ಜಿಲ್ಲಾಡಳಿತ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದಾರೆ.
ಗುತ್ತಿಗೆದಾರರ ಲಂಚ-ರುಷುವತ್ತಿನ ಮುಂದೆ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳು ದೊಡ್ಡವಲ್ಲ ಎನ್ನುವ ಧೋರಣೆ ಅಧಿಕಾರಿಗಳದ್ದಾಗಿದೆ. ಟೆಂಡರ್ ನೀಡುವಾಗಲೇ ಭಾರಿ ಮೊತ್ತದ ಡೀಲ್ ಕುದುರಿಸಿಕೊಂಡಿರುವ ಅಧಿಕಾರಿಗಳು ಗುತ್ತಿಗೆ ಪಡೆದವರ ರಕ್ಷಣೆಗೆ ಕಂಕಣಬದ್ಧರಾಗಿದ್ದಾರೆ.
ಸೊಲ್ಲು ಎತ್ತುತ್ತಿಲ್ಲ: ಕಳೆದ ಹನ್ನೊಂದುವರೆ ತಿಂಗಳ ಹಿಂದೆಯೇ ಚುನಾವಣೆಯಲ್ಲಿ ಗೆದ್ದು ಬಂದಿದ್ದರೂ ಪುರಪಿತೃಗಳಿಗೆ ಇನ್ನೂ ಅಧಿಕಾರ ಭಾಗ್ಯ ಸಿಕ್ಕಿಲ್ಲ. ಅಧಿಕಾರ ಇಲ್ಲದಿದ್ದರೇನಂತೆ ಮತ ಕೊಟ್ಟ ಜನರ ಪರ ಸೊಲ್ಲು ಎತ್ತುವ ಕನಿಷ್ಠ ಕಾಳಜಿಯನ್ನು ಚುನಾಯಿತರು ಪ್ರದರ್ಶಿಸುತ್ತಿಲ್ಲ.
ನಗರಸಭೆಯಲ್ಲಿ ಆಡಳಿತಾಧಿಕಾರಿ ದರ್ಬಾರ್ ಆರಂಭಗೊಂಡು ವರ್ಷವೇ ಉರುಳಿದೆ. ಆಡಳಿತಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ನಗರಸಭೆ ಕಡೆ ಸುಳಿಯದ ಪರಿಣಾಮ ಅಲ್ಲಿರುವ ಅಧಿಕಾರಿಗಳು, ಸಿಬ್ಬಂದಿ ಸ್ವೇಚ್ಛತೆಗೆ ಕೊನೆಯಿಲ್ಲ. ವಿವಿಧ ಟೆಂಡರ್ ಪಡೆದ ಗುತ್ತಿಗೆದಾರಿಗೂ ನಗರಸಭೆ ಹುಲ್ಲುಗಾವಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement