ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜನಪದ ಕಲೆಯಲ್ಲ, ಅದು ಜೀವನ ವಿಧಾನ

Rashmi Kasaragodu
Updated On : 22 Feb 2014, 2:16 am

ರಾಮನಗರ: ಜನಪದವನ್ನು ಕೇವಲ ಒಂದು ಕಲೆ ಎಂದು ಬಿಂಬಿಸುತ್ತಿರುವುದು ತಪ್ಪು. ಜನಪದ ಕೇವಲ ಕಲೆಯಷ್ಟೆ ಅಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಯ ರಕ್ತದಲ್ಲಿ ಹಾಸುಹೊಕ್ಕಾಗಿದ್ದು, ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅಭಿಪ್ರಾಯಪಟ್ಟರು.
ನಗರದ ಹೊರ ವಲಯದಲ್ಲಿರುವ ಜಾನಪದ ಲೋಕದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಜಾನಪದ ಪರಿಷತ್ತು ಆಯೋಜಿಸಿದ್ದ 2013-14ನೇ ಸಾಲಿನ ಬೆಂಗಳೂರು ವಿಭಾಗ ಮಟ್ಟದ ಯುವಜನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತವು ಜನಪದದ ತವರೂರಾಗಿದೆ. ದೇಶದಲ್ಲಿರುವ ಸಂಸ್ಕೃತಿ, ಜಾನಪದ ಕಲೆ, ಅರ್ಥೈಸಿಕೊಳ್ಳಲು ಹಲವು ಜನ್ಮಗಳನ್ನೆತ್ತಿದರೂ ಸಾಲದು. ಅಷ್ಟೊಂದು ವಿಶಿಷ್ಟ ಹಾಗೂ ಪ್ರಬಲವಾಗಿರುವ ಜಾನಪದ ಸಂಸ್ಕೃತಿಯ ಮಹತ್ವವನ್ನು ಯುವ ಜನತೆ ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ಯುವ ಸಮುದಾಯ ಚಿಂತನೆ ನಡೆಸಬೇಕಿದೆ ಎಂದು ತಿಳಿಸಿದರು.
ಇಂದಿನ ಯುವಜನತೆ ಜನಪದ ಸಂಸ್ಕೃತಿಯನ್ನು ಕಡೆಗಣಿಸುತ್ತಿದ್ದಾರೆ. ಅಂತರ್ಜಾಲ, ದೂರದರ್ಶನ ಮತ್ತಿತರ ಆಧುನಿಕ ಮಾಧ್ಯಮಗಳ ದಾಳಿಯಿಂದ ಜನಪದ ಕಲೆ ಕಣ್ಮರೆಯಾಗುವ ಹಂತಕ್ಕೆ ತಲುಪಿದೆ. ಜನಪದ ಕಲೆ ನಾಶವಾದರೆ ನಮ್ಮ ಸಂಸ್ಕೃತಿಯೇ ನಾಶವಾಗಲಿದೆ. ಅತ್ಯಮೂಲ್ಯವಾಗಿರುವ ನಮ್ಮ ಸಂಸ್ಕೃತಿಯನ್ನು ಉಳಿಸಿ, ಮುಂದಿನ ಪೀಳಿಗೆಗೆ ತಲುಪಿಸುವುದು ಇಂದಿನ ಯುವಜನತೆಯ ಜವಾಬ್ದಾರಿಯಾಗಿದೆ ಎಂದರು.
ಶಕ್ತಿಯ ಸಂಕೇತ: ಯುವ ಎಂದರೆ ಶಕ್ತಿಯ ಸಂಕೇತ. ಅಸಹಾಯಕತೆಯಿಂದ ಸಾಮರ್ಥ್ಯದೆಡೆಗೆ ಕೊಂಡೊಯ್ಯುವ ಶಕ್ತಿ ಹೊಂದಿರುವುದು ಯುವಪೀಳಿಗೆ ಮಾತ್ರ. ಅಸಮಾನತೆ ನಡುವೆ ಇರುವ ಸಮಾನತೆ ಶಕ್ತಿ ಯುವಶಕ್ತಿ. ಯುವ ಶಕ್ತಿಯು ಚಿಂತನೆಗಳ ಮೇಲೆ ದೇಶದ ಅಭಿವೃದ್ಧಿ ಅವಲಂಬಿತವಾಗಿರುತ್ತದೆ ಎಂದು ಜಿಪಂ ಸಿಇಒ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ಡಾ. ಎಚ್.ಎಲ್. ನಾಗೇಗೌಡರು ಜಾನಪದ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಜನಪದ ಕಲಾವಿದರಿಗೆ ಜಾನಪದ ಲೋಕ ತವರು ಮನೆಯಂತಿದೆ. ಯುವ ಸಮುದಾಯ ಜಾನಪದ ಕ್ಷೇತ್ರವನ್ನು ಕಡೆಗಣಿಸಬಾರದು. ಏಕೆಂದರೆ ಜನಪದದಲ್ಲಿ ನಮ್ಮ ಜೀವನ ಅಡಗಿದೆ ಎಂದು ನಾಡೋಜ ಸುಕ್ರಿ ಬೊಮ್ಮೆಗೌಡ ತಿಳಿಸಿದರು.
ಜಾನಪದ ಎಂದರೆ ಎಲ್ಲವೂ: ಜಾನಪದ ಎಂದರೆ ಜ್ಞಾನ, ವಿಜ್ಞಾನ ಎಲ್ಲವೂ ಆಗಿದೆ. ಅದೊಂದು ಜೀವನಾಭ್ಯಾಸ ಕ್ರಮವಾಗಿದ್ದು, ಬದುಕಿನ ಅಂಗವಾಗಿದೆ.
 ಜಾನಪದ ಎಂದರೆ ಏನೆಂಬುದನ್ನು ಅರಿಯದವರಿಗೂ ಸನ್ಮಾನ ಮಾಡಲಾಗುತ್ತಿದೆ. ಸನ್ಮಾನ ನಮ್ಮನ್ನು ಹುಡುಕಿ ಬರಬೇಕೇ ಹೊರತು ನಾವು ಅದನ್ನು ಅಪೇಕ್ಷಿಸಿ ಪಡೆಯಬಾರದು ಎಂದು ಜಾನಪದ ವಿದ್ವಾಂಸ ಡಾ.ಹಿ.ಶಿ.ರಾಮಚಂದ್ರೇಗೌಡ ಹೇಳಿದರು.
 ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಿ. ನವಜ್ಯೋತಿ, ಎಸ್.ಬಾಲಾಜಿ ಮತ್ತಿತರರು ಭಾಗವಹಿಸಿದ್ದರು.
22ರವರೆಗೆ ಯುವಜನ ಮೇಳ ನಡೆಯಲಿದ್ದು, ಬೆಂಗಳೂರು ವಿಭಾಗದ 9 ಜಿಲ್ಲೆಗಳ ಸುಮಾರು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿ ತಮ್ಮ ಪ್ರತಿಭೆ ಅನಾವರಣಗೊಳಿಸುವರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement