ತಲೆ ಹೊರಗೆ ಹಾಕಿ ಪ್ರಾಣ ಕಳೆದುಕೊಂಡ
ಕನಕಪುರ: ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದಲ್ಲಿ ಸಾರಿಗೆ ಸಂಸ್ಥೆ ಬಸ್ ಕಿಟಕಿಯಿಂದ
ತಲೆಯನ್ನು ಹೊರಗೆ ಹಾಕಿದ್ದ ವ್ಯಕ್ತಿಯ ತಲೆಯು ರಸ್ತೆ ಬದಿಯ ಲೈಟ್ ಕಂಬಕ್ಕೆ ಬಡಿದು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಸಂಗಮ ಸಮೀಪದ ಕೊಕ್ಕೆದೊಡ್ಡಿ ನಿವಾಸಿ ಬರ್ನಾಡ್ ಮೃತ ವ್ಯಕ್ತಿ.
ದೊಡ್ಡಾಲಹಳ್ಳಿ ಗ್ರಾಮದಿಂದ ಸಂಗಮಕ್ಕೆ ಹೊರಟಿದ್ದ ಸಾರಿಗೆ ಸಂಸ್ಥೆ ವಾಹನದಲ್ಲಿ ಕುಳಿತಿದ್ದ ಬರ್ನಾಡ್ ನಿರ್ಲಕ್ಷ್ಯದಿಂದ ತನ್ನ ತಲೆಯನ್ನು ಕಿಟಕಿಯಿಂದ ಹೊರಹಾಕಿ ಕುಳಿತ್ತಿದ್ದ. ಚಾಲಕ ಬಸ್ ಹಿಂದೆ ತೆಗೆದುಕೊಳ್ಳುತ್ತಿರುವಾಗ ಎಡಭಾಗದ ಲೈಟ್ ಕಂಬಕ್ಕೆ ಬರ್ನಾಡ್ ತಲೆ ಅಪ್ಪಳಿಸಿ ಜಜ್ಜಿಹೋಗಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತನಾಗಿದ್ದಾನೆ. ಘಟನೆಯ ಬಗ್ಗೆ ಸಾತನೂರು ಠಾಣೆಯಲ್ಲಿ ದೂರು ದಾಖಲಾಗಿದ್ದು ಆರಕ್ಷಕ ಉಪ ನಿರೀಕ್ಷಕ ಜಯರಾಂ ತನಿಖೆ ನಡೆಸಿದ್ದಾರೆ.