ನ್ಯಾಯ ಕೇಳ್ತಿದ್ದೇವೆ.. ಜಾಣ ಮರೆವು ಸಲ್ಲ
ದೊಡ್ಡಬಳ್ಳಾಪುರ: ನಾವು ನ್ಯಾಯ ಕೇಳ್ತಿದ್ದೇವೆ. ನಮ್ಮ ಅಹವಾಲು ನಿಮಗೆ ಕೇಳಿಸಿದ್ದರೂ ಕೇಳಿಸಿಕೊಳ್ಳದಿರುವವರ ರೀತಿ ನಾಟಕವಾಡಬೇಡಿ. ಜಾಣಕಿವುಡು ಪ್ರದರ್ಶಿಸಿ ನಗೆಪಾಟಲಿಗೆ ಗುರಿಯಾಗಬೇಡಿ ಎಂದು ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಮುಖಂಡರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ನಿರಂತರವಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಶುಕ್ರವಾರ ಭಾರತ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮಾಲನಾ ವೇದಿಕೆ, ಕಾವೇರಿ ಕೊಳಗೇರಿ ಕ್ಷೇಮಾಭಿವೃದ್ಧಿ ಸಂಘ ಮತ್ತು ಕರ್ನಾಟಕ ಯುವ ಕ್ರಾಂತಿ ಪಡೆ ಸೇರಿದಂತೆ ಹಲವು ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಧರಣಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಉಪವಿಭಾಗಾಧಿಕಾರಿ ಕಚೇರಿ ನಮಗೆ ಕೊಟ್ಟಂತೆಯೇ ಕೊಟ್ಟು ಇನ್ನೂ ಸ್ಥಳಾಂತರಿಸಲು ಮೀನ-ಮೇಷ ಎಣಿಸುತ್ತಿರುವ ಸರ್ಕಾರ ಜಿಲ್ಲಾ ಕೇಂದ್ರದ ಘೋಷಣೆ ವಿಚಾರದಲ್ಲಿ ವ್ಯವಸ್ಥಿತ ರಾಜಕೀಯ ಲಾಭದ ಹುನ್ನಾರ ನಡೆಸುತ್ತಿದೆ. ಇಂತಹ ಜಾಣತನಕ್ಕೆ ತಕ್ಕ ಪ್ರತ್ಯುತ್ತರ ನಮ್ಮ ಬಳಿಯೂ ಇದೆ ಎಂದು ಎಚ್ಚರಿಕೆ ನೀಡಿದರು.
ಹೋರಾಟದಲ್ಲಿ ನಗರಸಭೆ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳು ಮತ್ತು ವಿವಿಧ ಹಂತಗಳಲ್ಲಿನ ರಾಜಕೀಯ ಮುಖಂಡರ ಪಾಲುದಾರಿಕೆ ಇನ್ನಷ್ಟು ಹೆಚ್ಚಬೇಕು. ಈಗಾಗಲೇ ಹೋರಾಟ ಜನಪರ ಹೋರಾಟವಾಗಿ ರೂಪಗೊಂಡಿದ್ದು, ಎಲ್ಲ ವರ್ಗಗಳ ಜನ ಚಳವಳಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ಹೋರಾಟದ ಬಿಸಿ ತಟ್ಟಿದೆ. ಜನ ಎಚ್ಚೆತ್ತುಕೊಂಡಿದ್ದಾರೆ. ಈ ಕೂಡಲೇ ಸರ್ಕಾರ ಜಿಲ್ಲಾ ಕೇಂದ್ರದ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ಭಾರತ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನಾ ವೇದಿಕೆಯ ಅಧ್ಯಕ್ಷ ನರಸಿಂಹಮೂರ್ತಿ, ಕಾವೇರಿ ಕೊಳಗೇರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಕುಮಾರ್ ಆಚಾರ್, ಕರ್ನಾಟಕ ಯುವ ಕ್ರಾಂತಿ ಪಡೆಯ ಜಿಲ್ಲಾಧ್ಯಕ್ಷ ಆರ್.ಎನ್.ನಾರಾಯಣ್ ಸೇರಿದಂತೆ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿಗಳು, ಸಂಚಾಲನಾ ಸಮಿತಿ ಸದಸ್ಯರು, ಮುಖಂಡರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. ಶುಕ್ರವಾರದ ಪ್ರತಿಭಟನೆಯಲ್ಲಿ ಕಾಲೇಜುಗಳ ವಿದ್ಯಾರ್ಥಿನಿಯರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದದ್ದು ವಿಶೇಷವಾಗಿತ್ತು.