ಮಾಘ ಮಾಸ ಪ್ರಯುಕ್ತ ವಿಶೇಷ ಪೂಜೆ
ವಿಜಯಪುರ: ಪಟ್ಟಣದ ಪುರಾತನ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಸರೋವರ ಗಣಪತಿ ಕಲ್ಯಾಣಿ ಹಾಗೂ ದೇವಾಲಯದಲ್ಲಿ ಮಾಘ ಮಾಸದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಜರುಗಿದವು. ಹೋಮ ಹವನ,ದೇವಾಲಯದಲ್ಲಿ ವಿಶೇಷ ಅಲಂಕಾರ ಹಾಗೂ ಕಲ್ಯಾಣಿಯಲ್ಲಿ ನೀರನ್ನು ಹಾಯಿಸಿ ಪೂಜೆ ಸಲ್ಲಿಸಲಾಯಿತು. ಹತ್ತು ಹಲವು ವರ್ಷಗಳಿಂದ ಈ ಪ್ರದೇಶದ ಸುತ್ತಮುತ್ತಲಿನ ಜನರು ಸಂಪೂರ್ಣವಾಗಿ ಕಲ್ಯಾಣಿಯಲ್ಲಿ ತುಂಬಿದ್ದ ತ್ಯಾಜ್ಯ ವಸ್ತುಗಳನ್ನು ಶಕ್ತಿ ಸಂವರ್ಧಿನಿ ಮಹಿಳಾ ಸಂಘ, ಶಾಲಾ ಮಕ್ಕಳು ಹಾಗೂ ಸ್ತ್ರೀ ಶಕ್ತಿ ಗುಂಪುಗಳ ನೆರವಿನಲ್ಲಿ ಇತ್ತೀಚೆಗಷ್ಟೆ ಸ್ವಚ್ಛಗೊಳಿಸಲಾಗಿತ್ತು. ಈ ಸ್ಥಳದಲ್ಲಿ ಧಾರ್ಮಿಕ ಪೂಜಾ ಕಾರ್ಯ ಚಟುವಟೆಕೆಗಳು ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಸಂತೋಷವನ್ನುಂಟು ಮಾಡಿದೆ. ನಗರ್ತ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ಪ್ರಭುದೇವ್, ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ದೀಪಾ ರಮೇಶ್, ಭಾರತಿ ಶಿವಪ್ರಸಾದ್, ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷೆ ಪ್ರಭಾವತಿ ದೇವರಾಜ್, ಗಾಣಿಗ ಸಂಘದ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ ನಾಗರಾಜ್, ಪುರಸಭಾ ಸದಸ್ಯ ಪ್ರಭಾವತಿ ಮತ್ತಿತರರು ಭಾಗವಹಿಸಿದ್ದರು.