ಸರ್ವೆ-ಕಂದಾಯ ಇಲಾಖೆ ಕಾರ್ಯವೈಖರಿಗೆ ಕರವೇ ಕಿಡಿ
ಚನ್ನಪಟ್ಟಣ: ಸರ್ವೆ ಇಲಾಖೆ ಮತ್ತು ಕಂದಾಯ ಇಲಾಖೆ ನಡುವೆ ಹೊಂದಾಣಿಕೆಯ ಕೊರತೆ ಎದುರಾಗಿದ್ದು ಇದರಿಂದಾಗಿ ಸಾಕಷ್ಟು ರೈತರಿಗೆ ಅನಾನುಕೂಲವಾಗುತ್ತಿದೆ. ಅಧಿಕಾರಿಗಳ ಬೇಜವಾಬ್ದಾರಿತನ ಖಂಡಿಸಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ರಕ್ಷಣಾ ವೇದಿಕೆ ರೈತ ಘಟಕದ ಜಿಲ್ಲಾಧ್ಯಕ್ಷ ಶಂಭೂಗೌಡ ನಾಗವಾರ ಮತ್ತು ಜಿಲ್ಲಾ ಕಾರ್ಯದರ್ಶಿ ನರಸಿಂಹಯ್ಯ ಮಾದಾಪುರ ಎಚ್ಚರಿಸಿದ್ದಾರೆ. ರೈತರು ತಮ್ಮ ಜಮೀನಿನ ಖಾತೆ, ಮಾರಾಟ ಸೇರಿದಂತೆ ವಿವಿಧ ಅವಶ್ಯಕತೆಗಾಗಿ ಇ-ಸ್ಕೆಚ್ಗೆ ಅರ್ಜಿ ಹಾಕಿದರೆ ಅದು ಸಕಾಲದಲ್ಲಿ ದೊರೆಯುತ್ತಿಲ್ಲ. ಸರ್ವೆ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ನಾವು ಕೆಲಸ ಮುಗಿಸಿದ್ದೇವೆ ನಾಡ ಕಚೇರಿಯಲ್ಲಿ ಹೋಗಿ ಕೇಳಿ ಎನ್ನುತ್ತಿದ್ದಾರೆ, ಆದರೆ ಅಲ್ಲಿ ಪ್ರಿಂಟ್ ಬರುತ್ತಿಲ್ಲ ಎಂದು ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.