ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

89 ಕೆರೆ ತುಂಬಿಸುವ ಸರ್ಕಾರದ ಕ್ರಮಕ್ಕೆ ಶಾಸಕ ಬಾಲಕೃಷ್ಣ ಸ್ವಾಗತ

Mainashree
Updated On : 22 Feb 2014, 11:53 am

ರಾಮನಗರ : ಹೇಮಾವತಿಯಿಂದ ನೀರು ಹರಿಸಿ ಮಾಗಡಿಯ 89 ಕೆರೆಗಳನ್ನು ತುಂಬಿಸುವ ಬಗ್ಗೆ ಸರ್ಕಾರ ತೆಗೆದುಕೊಂಡಿರುವ ತೀರ್ಮಾನವನ್ನು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಸ್ವಾಗತಿಸಿದ್ದಾರೆ.
ಬಿಡದಿಯಲ್ಲಿ ಟಯೋಟಾ ಮೋಟಾರ್ ಸಹಯೋಗದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಶುದ್ಧ ನೀರಿನ ಘಟಕಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಮಾವತಿಯಿಂದ ನೀರು  ತಂದು ಮಾಗಡಿ ವ್ಯಾಪ್ತಿಯ 89 ಕೆರೆಗಳನ್ನು ತುಂಬಿಸುವ ಸರ್ಕಾರದ ನಿರ್ಧಾರ ಒಳ್ಳೆಯದೆ. ಆದರೆ, ಈ ಯೋಜನೆ ಫಲಕಾರಿಯಾಗುವುದಿಲ್ಲ ಎಂದು ಹೇಳಿದರು.
ಈ ಯೋಜನೆಯಿಂದ ಕಾಂಗ್ರೆಸ್ ನಾಯಕರು ಬೀಗುವ ಅವಶ್ಯಕತೆಯಿಲ್ಲ. ಮೇಕೆದಾಟು ಬಳಿ ಜಲಾಶಯವೊಂದನ್ನು ನಿರ್ಮಿಸಿ ನೀರು ಪೂರೈಕೆ ಮಾಡುವುದೊಂದೇ ಶಾಶ್ವತ ಪರಿಹಾರ. ಇದರಿಂದ ತಮಿಳುನಾಡಿಗೆ ಯಾವುದೇ ರೀತಿಯ ಸಮಸ್ಯೆಯಾಗದು ಎಂದು ಬಾಲಕೃಷ್ಣ ತಿಳಿಸಿದರು. ಜಲಾಶಯದಲ್ಲಿ ಮಾಪಕವನ್ನು ಅಳವಡಿಸಿ ತಮಿಳುನಾಡಿಗೆ ನಿಗದಿ ಮಾಡಿರುವ ನೀರನ್ನು ಒದಗಿಸಬೇಕು. ಹೆಚ್ಚುವರಿಯಾಗಿ ಸಮುದ್ರಕ್ಕೆ ಹರಿದು ಹೋಗುವ ಸುಮಾರು 32 ಟಿಎಂಸಿ ಯಷ್ಟು ನೀರನ್ನು ರಾಮನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಈ ಮೂರು ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬಹುದಾಗಿದೆ. ಈ ಬಗ್ಗೆ ಜಿಲ್ಲಾ ಮಂತ್ರಿಗಳು ಹಾಗೂ ಸಂಸದರು ರಾಜ್ಯ ಸರ್ಕಾರ ಗಮನ ಸೆಳೆದು ಸರಿಯಾದ ಮಾಹಿತಿಯನ್ನು ನೀಡಬೇಕಿದೆ ಎಂದು ಹೇಳಿದರು. ಇಗ್ಗಲೂರು ಏತ ನೀರಾವರಿ ಅಥವಾ ಹೇಮಾವತಿಯಿಂದ ನೀರು ತಂದು ಬಯಲು ಸೀಮೆಯ ಬವಣೆ ನೀಗಿಸುವುದು ಸುಲಭವಲ್ಲ. ರಾಜ್ಯ ಸರ್ಕಾರದ ನಿರ್ಧಾರವನ್ನು ತಾವು ವಿರೋಧಿಸುವುದಿಲ್ಲ ಎಂದು ಬಾಲಕೃಷ್ಣ ಹೇಳಿದರು.
ಗ್ರಾಮಾಂತರದಿಂದ ಸ್ಪರ್ಧೆಗೆ ಸಿದ್ಧ: ಮುಂದಿನ ಲೋಕಸಭೆ ಚುನಾವಣೆಗೆ ಜೆಡಿಎಸ್‌ನಿಂದ ಅಭ್ಯರ್ಥಿ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಪಕ್ಷದ ವರಿಷ್ಠರು ಒಪ್ಪಿಗೆ ಸೂಚಿಸಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣ್ಣಕ್ಕಿಳಿಯಲು ಸಿದ್ಧ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಬಾಲಕೃಷ್ಣ ಪ್ರತಿಕ್ರಿಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement