ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಇಂದಿನ ವ್ಯವಸ್ಥೆಗೆ ಕೊಂಗಾಡಿಯಪ್ಪ ದಾರಿದೀಪ

Mainashree
Updated On : 22 Feb 2014, 11:54 am

ದೊಡ್ಡಬಳ್ಳಾಪುರ: ಶಿಕ್ಷಣದಿಂದ ಮಾತ್ರ ಸಾಮುದಾಯಿಕ ಬೆಳವಣಿಗೆ, ಮುನ್ನಡೆ ಸಾಧ್ಯ. ಸಾಮಾಜಿಕ ಪಿಡುಗುಗಳಿಗೆ ಸಂಜೀವಿನಿಯಾಗುವುದು ಸುಶಿಕ್ಷಿತ ಸಮಾಜ ಮಾತ್ರ. ಶಿಕ್ಷಣ ಮೌಲ್ಯಗಳನ್ನು ಕೊಡುವ ಮತ್ತು ಪಡೆದುಕೊಳ್ಳುವ ಸಾಧನವಾಗಬೇಕು ಎಂದು ಕೊಂಗಾಡಿಯಪ್ಪ ನಂಬಿದ್ದರು ಎಂದು ದೇವಾಂಗ ಮಂಡಲಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್ ಹೇಳಿದರು.
ಇಲ್ಲಿನ ದೇವಾಂಗ ಮಂಡಲಿ ನೇತೃತ್ವದಲ್ಲಿ ಮಾರುಕಟ್ಟೆ ಚೌಕದಲ್ಲಿರುವ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಅವರ ಪುತ್ಥಳಿ ಮುಂಭಾಗ ನಡೆದ ಕೊಂಗಾಡಿಯಪ್ಪ ಅವರ 153ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೊಡ್ಡಬಳ್ಳಾಪುರಕ್ಕೆ ವಿದ್ಯುಚ್ಛಕ್ತಿ, ರೈಲು, ನೀರು ಸರಬರಾಜು, ನೈರ್ಮಲ್ಯ ಸುಧಾರಣೆ, ವನಮಹೋತ್ಸವ ಸೇರಿದಂತೆ ಅನೇಕ ಸಾಮಾಜಿಕ ಯೋಜನೆಗಳನ್ನು ತರುವಲ್ಲಿ ಅವರ ಪಾತ್ರ ಹಿರಿದು. ಅಂತಹ ಶಿಕ್ಷಣ ತಜ್ಞ, ಪ್ರಾಮಾಣಿಕತೆಯ ಪ್ರತಿರೂಪ ಕೊಂಗಾಡಿಯಪ್ಪ ಇಂದಿನ ಯುವಕರ ಆದರ್ಶವಾಗಬೇಕು. ಅವರು ಹಾಕಿಕೊಟ್ಟ ಮಾರ್ಗದರ್ಶನ ಊರಿನ ಬೆಳವಣಿಗೆಯ ದೃಷ್ಟಿಯಲ್ಲಿ ಅತ್ಯಂತ ಮುಖ್ಯ. ಅವರ ಸ್ಮರಣೆಯ ನಿರಂತರತೆ ಕಾಯ್ದುಕೊಳ್ಳುವಲ್ಲಿ ಶಾಶ್ವತ ಕಾರ್ಯಯೋಜನೆಯನ್ನು ರೂಪಿಸಬೇಕಿದೆ ಎಂದರು.
ಪುತ್ಥಳಿಗೆ ಮನವಿ: ಪುರಪಿತೃ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಅವರ ಪುತ್ಥಳಿಯನ್ನು ನಗರಸಭೆ ವತಿಯಿಂದ ರೇಲ್ವೆ ನಿಲ್ದಾಣ ಬಳಿಯ ವಿ.ಕೃ. ಗೋಕಾಕ ವೃತ್ತದಲ್ಲಿ ಅಥವಾ ನಗರಸಭೆ ಆವರಣದಲ್ಲಿ ಪ್ರತಿಷ್ಠಾಪಿಸಬೇಕು. ಈ ಕುರಿತು ಕೂಡಲೇ ಕ್ರಮ ಕೈಗೊಳ್ಳಬೇಕು. ಅದೇ ರೀತಿ ಊರಿನ ಹಿರಿಯ ರಾಜಕಾರಣಿಗಳಾದ ಅಮಾವಾಸ್ಯೆ ನೀಲಕಂಠಯ್ಯ ಅವರ ಹೆಸರನ್ನು ರೈಲು ನಿಲ್ದಾಣದಿಂದ ಖಾಸ್‌ಬಾಗ್ ಮುಖಾಂತರ ತೇರಿನಬೀದಿ ಸೇರುವ ರಸ್ತೆಗೆ ನಾಮಕರಣ ಮಾಡಬೇಕು ಎಂದು ಶಾಸಕರನ್ನು ಆಗ್ರಹಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ಕೊಂಗಾಡಿಯಪ್ಪ ಅವರಂತಹ ವ್ಯಕ್ತಿಗಳು ನಮ್ಮ ಇಂದಿನ ಪೀಳಿಗೆಗೆ ಬೇಕಾಗಿದೆ. ಅವರ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಉತ್ತಮ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕಿದೆ. ಈಗ ಮುಂದಿಟ್ಟಿರುವ ಬೇಡಿಕೆಗಳ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ದೇವಾಂಗ ಮಂಡಲಿ ಉಪಾಧ್ಯಕ್ಷೆ ಕೆ.ಸಿ.ಗೌರಮ್ಮ, ಕಾರ್ಯದರ್ಶಿ ಎ.ಎಸ್.ಕೇಶವ, ಸಹ ಕಾರ್ಯದರ್ಶಿ ಕೆ.ಎಸ್. ಸನಾತನಮೂರ್ತಿ, ಖಜಾಂಚಿ ಎಸ್.ಸಿ. ದೇವಕಿ,  ತಾ.ಕಸಾಪ ಗೌ.ಅಧ್ಯಕ್ಷ ಕೆ.ಆರ್.ರವಿಕಿರಣ್, ದೇವಾಂಗ ಮಂಡಲಿ ನಿರ್ದೇಶಕರಾದ ಕೆ.ಜಿ.ದಿನೇಶ್, ಕೆ.ಜಿ.ಗೋಪಾಲ್, ಆದಿಲಕ್ಷ್ಮಮ್ಮ, ಎ.ನಟರಾಜ್, ಸತ್ಯಗಂಗಾಧರ್, ಉಮಾಶಂಕರ್, ನಿರ್ಮಲ, ಶಿವರಾಂ, ಎಲ್ಲ ನಿರ್ದೇಶಕರು, ನಗರಸಭೆ ಸದಸ್ಯ ಕೆ.ಜಿ.ರಘುರಾಂ, ಗಾಯತ್ರಿ ಪೀಠ ಮಿತ್ರಬಳಗದ ಅಧ್ಯಕ್ಷ ಶಿವಾನಂದ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement