ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜಿಲ್ಲಾ ಕೇಂದ್ರಕ್ಕಾಗಿ ಬೀದಿಗಿಳಿದ ಪತ್ರಬರೆಹಗಾರರು

Mainashree
Updated On : 22 Feb 2014, 11:53 am

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟ ದಿನೇ ದಿನೇ ಗಂಭೀರ ಸ್ವರೂಪ ಪಡೆಯುತ್ತಿದೆ. ಸಮಾಜದ ಎಲ್ಲ ವರ್ಗಗಳನ್ನೂ ಆಕರ್ಷಿಸುತ್ತಿರುವ ಹೋರಾಟ ವಿನೂತನ ಮಾದರಿಗಳಿಂದ ಗಮನ ಸೆಳೆಯುತ್ತಿದೆ.
ಶನಿವಾರ ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ದಾಸ್ತಾವೇಜು ಪತ್ರಬರೆಹಗಾರರು ಮತ್ತು ಲಯನ್ಸ್ ಕ್ಲಬ್ ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಅರ್ಹತೆಯ ಮಾನದಂಡ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಅಂಕಿ-ಅಂಶಗಳ ಆಧಾರದಲ್ಲಿ ದೊಡ್ಡಬಳ್ಳಾಪುರವನ್ನು ಜಿಲ್ಲಾಕೇಂದ್ರವಾಗಿ ಘೋಷಿಸಬೇಕು ಎಂಬ ಒತ್ತಾಯ ನ್ಯಾಯಯುತವಾಗಿದೆ. ಇಡೀ ಜಿಲ್ಲೆಯಲ್ಲಿ ಎಲ್ಲ ರೀತಿಯಿಂದಲೂ ಯೋಗ್ಯ ಮತ್ತು ಸೂಕ್ತ ಸ್ಥಳಾವಕಾಶ ಹೊಂದಿರುವ ದೊಡ್ಡಬಳ್ಳಾಪುರ ಈ ಹಿಂದೆಯೇ ಜಿಲ್ಲೆಯಾಗಿ ರೂಪಗೊಳ್ಳಬೇಕಿತ್ತು. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇಲ್ಲಿನ ಜನರ ಕನಸು ಈಡೇರಿಲ್ಲ. ಈ ಕೂಡಲೇ ಇಲ್ಲಿನ ಜನರ ಒಕ್ಕೊರಲ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿದರು.  ಈಗಾಗಲೇ ಸರ್ಕಾರದ ಹಂತದಲ್ಲಿ ಒತ್ತಡ ಹೇರುತ್ತಿರುವ ಸ್ಥಳೀಯ ಶಾಸಕರೂ ಹೋರಾಟಗಾರರೊಂದಿಗೆ ಬೀದಿಗಿಳಿದು ಹೋರಾಟಕ್ಕೆ ಮುಂದಾಗಬೇಕು. ಸ್ಥಳೀಯ ಹಂತದಿಂದ ಹಿಡಿದು ಎಲ್ಲ ಹಂತಗಳ
ಜನಪ್ರತಿನಿಧಿಗಳು ಹೋರಾಟದಲ್ಲಿ ಭಾಗವಹಿಸಬೇಕು. ಅಧಿಕಾರಿಗಳು ಪಾರದರ್ಶಕವಾಗಿ ಅಂಕಿ-ಅಂಶಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಸೋಮವಾರದಿಂದ ಹೋರಾಟದ ಸ್ವರೂಪವನ್ನು ಬದಲಿಸಲು ನಿರ್ಧರಿಸಲಾಗಿದೆ. ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದರು. ಪ್ರತಿಭಟನೆಯಲ್ಲಿ ತಾಲೂಕು ದಾಸ್ತಾವೇಜು ಪತ್ರಬರೆಹಗಾರರು, ಲಯನ್ಸ್ ಕ್ಲಬ್ ಪದಾಧಿಕಾಕಾರಿಗಳು, ಜಿಲ್ಲಾ ಹೋರಾಟ ಸಮಿತಿ ಕಾರ್ಯಕರ್ತರು ಹಾಜರಿದ್ದರು.
ಇಂದು ಸಭೆ: ಹೋರಾಟದ ರೂಪರೇಷೆಗಳು ಮತ್ತು ಮುಂದಿನ ಕ್ರಮಗಳ ಕುರಿತು ಚರ್ಚಿಸುವ ನಿಟ್ಟಿನಲ್ಲಿ ಭಾನುವಾರ ಫೆ.23ರ ಸಂಜೆ 3 ಗಂಟೆಗೆ ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಸಭೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement